ಸುಂಟಿಕೊಪ್ಪ, ಮೇ ೨೨: ಅತ್ತೂರು-ನಲ್ಲೂರು ಗ್ರಾಮದ ಕಂಬಿಬಾಣೆಯ ಸುತ್ತಮುತ್ತ ತೋಟಗಳಲ್ಲಿ ಒಂಟಿ ಸಲಗ ಬೀಡುಬಿಟ್ಟಿದ್ದು, ಇದರಿಂದ ಸ್ಥಳೀಯ ಗ್ರಾಮಸ್ಥರಿಗೆ ಹಾಗೂ ಕಾರ್ಮಿಕರಿಗೆ ಆತಂಕ ಎದುರಾಗಿದೆ. ತಾ. ೧೮ರಂದು ಈ ಸಲಗವು ಜನನಿಬಿಡ ಕಂಬಿಬಾಣೆ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆ ರಸ್ತೆಯಲ್ಲಿ ಸಾಗಿದ್ದು, ಸ್ಥಳೀಯ ತೋಟಗಳಲ್ಲಿ, ರಸ್ತೆಗಳಲ್ಲಿ ವಾಹನ ಸವಾರರ ಎದುರು ಕಾಣ ಸಿಗುತ್ತಿದೆ. ಇದರಿಂದ ಇಲ್ಲಿನ ಜನ ತೀವ್ರ ಭಯದಿಂದ ದಿನದೂಡುತ್ತಿದ್ದು ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿ ಗ್ರಾಮಸ್ಥರು ದೂರಿಕೊಂಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ತಿಳಿಸಿದರೂ ಅರಣ್ಯ ಇಲಾಖೆಯವರು ಬಂದು ಕಾಡಿಗೆ ಅಟ್ಟಿದ್ದರು. ಮತ್ತೆ ಮರುದಿನ ಈ ಕಾಡಾನೆ ತೋಟಕ್ಕೆ ನುಗ್ಗಿ ದಾಂಧಲೆ ನಡೆಸುತ್ತಿರುವುದಾಗಿ ಗ್ರಾಮಸ್ಥರು ದೂರಿದ್ದು ಕೂಡಲೇ ಈ ಒಂಟಿ ಸಲಗವನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.