ಪ್ರಿಯ ಮಕ್ಕಳೇ,

ನೀವೀಗ ಶಾಲಾ ದಿನಗಳನ್ನು ಕಳೆದು ರಜಾ ದಿನಗಳಲ್ಲಿದ್ದೀರಿ. ಮಕ್ಕಳೆಂದ ಮೇಲೆ ರಜೆಯನ್ನು ಮಜವಾಗಿ ಕಳೆಯುವುದಂತೂ ನಿಜ ಅಲ್ಲವೇ...? ಹಾಗೆಯೇ ನೀವುಗಳು ಕಳೆದ ರಜಾದಿನಗಳ ಮಜದ ಬಗ್ಗೆ ಬರೆದು ಚಿತ್ರ ಸಹಿತ ಕಳುಹಿಸಿಕೊಡುವಂತೆ ನಾವು ಕೇಳಿದ್ದೆವು. ಒಂದಷ್ಟು ಮಂದಿ ಆಸಕ್ತಿ, ಅಭಿರುಚಿಯಿರುವ ಮಕ್ಕಳು ತಮ್ಮ ರಜದ ಅನುಭವಗಳನ್ನು ಬರೆದು ಕಳುಹಿಸಿದ್ದೀರ... ಕೆಲವರು ನಿಯಮ ಪಾಲನೆಯೊಂದಿಗೆ ನಾವು ಕೇಳಿದಷ್ಟಕ್ಕೆ ಸರಿಯಾಗಿ ಬರೆದಿದ್ದಾರೆ. ಇನ್ನೂ ಕೆಲವರು ಸ್ವಲ್ಪ ಕಡಿಮೆ, ಸ್ವಲ್ಪ ಜಾಸ್ತಿ, ಕೆಲವರ ಅಮ್ಮಂದಿರು, ಅಕ್ಕ - ಅಣ್ಣಂದಿರು ಬರೆದಿರುವುದು ನಮಗೆ ಗೊತ್ತಾಗಿದೆ.

ಅದೇನೇ ಇರಲಿ ಚಂದದ ಅನುಭವದ ಬರವಣಿಗೆಗಳಿಗೆ ಬಹುಮಾನ ಕೊಡುತ್ತೇವೆ. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರೀತಿಯ ಧನ್ಯವಾದಗಳು.

ಮುಂದಿನ ಸ್ಪರ್ಧೆಗೆ ತಯಾರಾಗಿರಿ.

ನಿಮ್ಮ ಪ್ರೀತಿಯ,

ಜಿ. ಚಿದ್ವಿಲಾಸ್, ಸಂಪಾದಕ.

ರಜೆ ಇರುವುದೇ ಮರೆತುಹೋಗಿದೆ

ಪಂಚಾಯತ್ ಗ್ರಂಥಾಲಯ ಬೇಂಗೂರು ಇಲ್ಲಿ ೧೫ ದಿನಗಳ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿರುತ್ತಾರೆ. ಇಲ್ಲಿ ನಾನು ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿರುತ್ತೇನೆ. ಶಿಬಿರದಲ್ಲಿ ಪಾಲ್ಗೊಂಡ ನಂತರ ರಜೆ ಇರುವುದೇ ಮರೆತುಹೋಗಿದೆ. ಯಾಕೆಂದರೆ ಗ್ರಂಥಾಲಯ ಮೇಲ್ವಿಚಾರಕರು ನೀಡುವ ಸಲಹೆ, ಅವರು ನೀಡುವ ಚಟುವಟಿಕೆ, ಅವರು ನಡೆಸುವ ಆಟಗಳು ಮನಸ್ಸಿಗೆ ತುಂಬಾ ಖುಷಿಯನ್ನು ನೀಡಿದೆ. ಶಿಬಿರದಲ್ಲಿ ೧೦ ಮಂದಿ ವಿದ್ಯಾರ್ಥಿಗಳು ಇದ್ದೇವೆ. ದಿನಕ್ಕೊಂದು ಆಟ ಚಟುವಟಿಕೆ ಮಾಡಿಸುತ್ತಾರೆ. ಮೊದಲ ದಿನ ಮಕ್ಕಳ ಪರಿಚಯ ಅಂದರೆ, ಪ್ರತಿಯೊಬ್ಬ ವಿದ್ಯಾರ್ಥಿಗಳು ಅವರವರ ಪರಿಚಯ ಆಗಬೇಕಾಗಿದೆ. ಪತ್ರಿಕೆ ಓದುವುದು, ಕೈ ರೇಖೆ, ಗಣಿತ ಎಣಿಕೆ ಆಟ, ಯೋಗಾಭ್ಯಾಸ, ಕ್ರಾಫ್ಟ್, ಡ್ರಾಯಿಂಗ್ ಇತ್ಯಾದಿ ಇವೆ. ಶಿಬಿರವು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ರವರೆಗೆ ನಡೆಯುತ್ತದೆ. ಒಟ್ಟಿನಲ್ಲಿ ಎಲ್ಲಾ ಶಿಬಿರಾರ್ಥಿಗಳು ಗ್ರಂಥಾಲಯ ಮೇಲ್ವಿಚಾರಕರಿಗೆ ಚಿರಋಣಿಯಾಗಿರುತ್ತೇವೆ.

-ಕೃತಿಕ ಎಂ.ಕೆ., ೭ನೇ ತರಗತಿ,

ಸ.ಹಿ.ಪ್ರಾ. ಶಾಲೆ, ಚೇರಂಬಾಣೆ.

ಈಜು, ಹಾಕಿ, ಶಿಸ್ತನ್ನು ಕಲಿತೆ

ಬೇಸಿಗೆ ರಜೆ ಎಂದರೆ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ, ಸಾಮಾಜಿಕವಾಗಿ, ದೈಹಿಕವಾಗಿ ತೊಡಗಿಸಿಕೊಳ್ಳುವ ಒಂದು ಪರಿಪಾಠ.

ನಾನು ೧೫ ದಿವಸಗಳ ಈಜು ಕಲಿಕೆಯ ತರಬೇತಿಯನ್ನು ಏಪ್ರಿಲ್ ೧ ರಿಂದ ೧೫ ರವರೆಗೆ ಸಂಜೆ ೫ ರಿಂದ ೬ ಗಂಟೆಯವರೆಗೆ ನುರಿತ ತರಬೇತುದಾರರಾದ ಯಶ್ವತ್ ಸರ್ ರವರ ಪರಿಶ್ರಮದಲ್ಲಿ ನಾಪೋಕ್ಲುವಿನಲ್ಲಿ ರೋವ್ ಎಂಬ ಸಂಸ್ಥೆಯಲ್ಲಿ ಕಲಿತೆನು. ನೀರನ್ನು ಕಾಣುವಾಗ ಭಯಪಡುತಿದ್ದ ನಾನು ಪರಿಸ್ಥಿತಿ ಎದುರಾದಾಗ ಹೇಗೆ ನಿಭಾಯಿಸಿಕೊಳ್ಳಬಹುದೆಂದು ಈಜು ಕಲಿಯುವಿಕೆಯಲ್ಲಿ ಕಲಿತೆನು.

ಹಾಗೆ ೨೦ ದಿನಗಳ ಕಾಲ ಅಂದರೆ ಏಪ್ರಿಲ್ ೧೧ ರಿಂದ ಮೇ ೧ ತನಕ ಮಧ್ಯಾಹ್ನ ೧ ರಿಂದ ೩ ಗಂಟೆ ಕಾಲ ನಾಪೋಕ್ಲುವಿನಿಂದ ಮಡಿಕೇರಿಗೆ ಆಗಮಿಸಿ ಕೊಡಗು ವಿದ್ಯಾಲಯದ ಸಮಾಗಮ ಬೇಸಿಗೆ ಶಿಬಿರದಲ್ಲಿ ನಾನು ಮೋಹಿನಿಯಾಟ್ಟಂ ಹಾಗೂ ಭರತನಾಟ್ಯಂ ವೇದಿಕೆಯಲ್ಲಿ ಪ್ರದರ್ಶನ ಕೊಡುವಷ್ಟು ಅಲ್ಲಿಯ ಶಿಕ್ಷಕರು ಹಾಗೂ ನನ್ನ ಪೂಜ್ಯ ಗುರುಗಳಾದ ರೋಜ ಮ್ಯಾಮ್ ಅವರಿಂದ ಪಡೆದುಕೊಂಡೆನು.

ಹಾಗೆಯೇ ಒಂದು ತಿಂಗಳ ಕಾಲ ಅಂದ್ರೆ ಏಪ್ರಿಲ್ ೯ ರಿಂದ ಮೇ ೮ರ ತನಕ ನಾಪೋಕ್ಲುವಿನ ಕೆ.ಪಿ.ಎಸ್ ಶಾಲೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೬:೩೦ ರಿಂದ ೯:೩೦ ಗಂಟೆಯವರೆಗೆ ತರಬೇತುದಾರರಾದ ಡಾಲಿ ಸರ್ ಹಾಗೂ ಗಣೇಶ್ ಸರ್ ರವರಿಂದ ೮೦ ಮಕ್ಕಳ ಸಮ್ಮುಖದಲ್ಲಿ ನಾನು ಒಬ್ಬಳಾಗಿ ಶಿಸ್ತು, ವ್ಯಾಯಾಮ, ಸಮಯ ಪರಿಪಾಲನೆ ಹಾಗೂ ಹಾಕಿ ಆಟವನ್ನು ಕಲಿತೆನು.

ಇದೆಲ್ಲದರ ಜೊತೆಗೆ ನಾನು ನಾಪೋಕ್ಲು ಪಂಚಾಯಿತಿಯಲ್ಲಿ ಜ್ಞಾನದೇಗುಲ (ಗ್ರಂಥಾಲಯ) ಕ್ಕೆ ಹೋಗುತಿದ್ದು ಹಲವಾರು ಪುಸ್ತಕಗಳನ್ನು ಓದುತಿದ್ದು ಅದರಲ್ಲಿ ಇರುವ ಕೆಲವು ಮುಖ್ಯಾಂಶಗಳನ್ನು ಬರೆದಿಟ್ಟುಕೊಂಡಿರುವೆನು. ಪ್ರತಿದಿನ ಶಕ್ತಿ ದಿನಪತ್ರಿಕೆಯನ್ನು ಓದುತ್ತಾ ನನ್ನ ಕನ್ನಡ ಉಚ್ಛಾರಣೆಯನ್ನು ಉತ್ತಮಪಡಿಸಿಕೊಳ್ಳುತ್ತಿರುವೆನು.

ಹಾಗೆಯೇ ನಾನು ನಾಲ್ಕು ದಿನಗಳ ಮಟ್ಟಿಗೆ ಮೈಸೂರಿನಲ್ಲಿ ನನ್ನ ಅಕ್ಕ, ಭಾವನವರ ಮನೆಗೆ ಹೋಗಿ ಸುತ್ತಾಡಿ ಕೊನೆಗೆ ನನಗೆ ಬೇಕಾಗಿರುವ ಮುಂದಿನ ತರಗತಿಯ ಪುಸ್ತಕವನ್ನು ಖರೀದಿಸಿಕೊಂಡು ಬಂದೆನು.

ಇದರ ಮಧ್ಯೆ ನಾನು ಮತ್ತೆ ನಮ್ಮಮ್ಮ ಅಮ್ಮಂದಿರ ದಿನದಂದು ಹೂವಿನ ಗಿಡವನ್ನು ನೆಟ್ಟು ಸಂಭ್ರಮಿಸಿದೆವು. ನನ್ನ ಅಮ್ಮನ ಜೊತೆಗೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಅಮ್ಮನ ಜೊತೆಗೆ ಕಾಲ ಕಳೆದು, ಮನೆ ಕೆಲಸ, ಹೂ ತೋಟದ ಕೆಲಸ ಹಾಗೂ ಹಿರಿಯರ ಜೊತೆಗೆ ಹೇಗೆ ಇರಬೇಕು ಹೇಗೆ ನಡೆದುಕೊಳ್ಳಬೇಕು ಎನ್ನುವ ಹಲವಾರು ಪರಿಪಾಠಗಳನ್ನು ನಮ್ಮಮ್ಮ ಹೇಳಿಕೊಟ್ಟಳು. ನಾನು ಇನ್ನುಳಿದ ದಿನಗಳನ್ನು ಸಂಗೀತ ಕಲಿಯಲು ತೊಡಗಿಸಿಕೊಳ್ಳುತ್ತೇನೆ. ಇದು ನಾನು ಬೇಸಿಗೆ ರಜವನ್ನು ಬಳಸಿಕೊಂಡ ರೀತಿ.

ಧನ್ಯವಾದಗಳು

-ದುಂದುಬಿ ಪಿ.ಬಿ. ೯ನೇ ತರಗತಿ,

ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್, ಬೇತು.

ಮಜವಾಗಿ ಸದುಪಯೋಗ ಮಾಡಿಕೊಂಡೆ

ಪರೀಕ್ಷೆ ಮುಗಿದು ರಜೆ ಸಿಕ್ಕಿದಾಗ ಆಗುವ ಸಂತೋಷವೇ ಬೇರೆ. ಬೇಸಿಗೆ ರಜೆಯಲ್ಲಿ ನಾನು ಅಜ್ಜ, ಅಜ್ಜಿ ಹಾಗೂ ನೆಂಟರ ಮನೆಗೆ ಹೋಗಿ ಬಹಳಷ್ಟು ವಿಚಾರಗಳನ್ನು ಕಲಿತೆ. ನಾನು ರಜೆಯಲ್ಲಿ ಸಣ್ಣ ಸಣ್ಣ ಕುತೂಹಲಕಾರಿಯಾದ ವಿಜ್ಞಾನ ಪ್ರಯೋಗಗಳನ್ನು ಮಾಡಿದೆ. ಅದು ನನಗೆ ತುಂಬಾ ಇಷ್ಟವಾಯಿತು. ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಕಲಿತೆ. ಇದರಿಂದ ನನ್ನ ಉಚ್ಚಾರಣೆ ಸ್ಪಷ್ಟವಾಗಲು ಸಹಾಯವಾಯಿತು. ಹಾಗೆಯೇ ಸೈಕಲ್ ತುಳಿಯಲು ಹಾಗೂ ಸ್ಕೇಟಿಂಗ್ ಮಾಡಲು ಕಲಿತೆ. ಸಣ್ಣಪುಟ್ಟ ಅಡುಗೆ ಮಾಡಲು ಸಹ ಕಲಿತೆ. ಪ್ರತಿದಿನ ಶಕ್ತಿ ದಿನಪತ್ರಿಕೆಯನ್ನು ಓದಲು ಅಭ್ಯಾಸ ಮಾಡಿದೆ. ಇದರಿಂದ ಕನ್ನಡವನ್ನು ಸರಿಯಾಗಿ ಓದಲು ಮತ್ತು ಬರೆಯಲು ಕಲಿತುಕೊಂಡೆ. ಶಕ್ತಿ ದಿನಪತ್ರಿಕೆಯ ಚಿತ್ರ ಚಿಂತನ ವಿಭಾಗಕ್ಕೆ ಚಿತ್ರಗಳನ್ನು ಬಿಡಿಸಿ ಕಳುಹಿಸಿದೆ. ಮನೆಯ ಕೆಲಸದಲ್ಲಿ ಅಮ್ಮನಿಗೆ ಸಹಾಯ ಮಾಡಿದೆ. ಹಳೆಯ ದಿನಪತ್ರಿಕೆಗಳಿಂದ ಕವರ್‌ಗಳನ್ನು ಮಾಡಿ ಮನೆಯ ಹತ್ತಿರದ ಅಂಗಡಿಗಳಿಗೆ ಕೊಟ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರ ಬಗ್ಗೆ ಅರಿವು ಮೂಡಿಸಿದೆ. ಹೀಗೆ ರಜೆಯನ್ನು ಮಜವಾಗಿ ಸದುಪಯೋಗ ಮಾಡಿಕೊಂಡೆ. ಧನ್ಯವಾದಗಳು

-ಬೆಂಜAಡ ನಿಹಾರಿಕಾ ನೀಲಮ್ಮ, ೫ನೇ ತರಗತಿ

ಲಯನ್ಸ್ ಶಾಲೆ ಗೋಣಿಕೊಪ್ಪಲು.

ಬೆಟ್ಟವನ್ನೇರಿ ಸಂಭ್ರಮಿಸಿದೆ

ಅಮ್ಮನಿಗೆ ಮತ್ತು ನನಗೆ ಬೇಸಿಗೆ ರಜೆ ಸಿಕ್ಕರೆ ಸಾಕು ನಾನು ಮತ್ತು ಅಜ್ಜಿ ಮೈಸೂರಿನ ನನ್ನ ಅತ್ತೆ ಮನೆಗೆ ಪ್ರಯಾಣ ಬೆಳೆಸುತ್ತಿದ್ದೆವು. ಬೇಸಿಗೆ ರಜೆ ಪೂರ್ತಿ ಅಲ್ಲೇ ಕಾಲ ಕಳೆಯುತ್ತಿದ್ದೆವು. ಆದರೆ ಕಳೆದ ವರ್ಷದಿಂದ ನಾನು ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಸಿ.ವಿ. ಶಂಕರ್‌ಸ್ವಾಮಿ ಸ್ಮರಣಾರ್ಥ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದ ಬಗ್ಗೆ ಮಾಹಿತಿ ತಿಳಿದು ನಾನೂ ಒಂದು ತಿಂಗಳ ಶಿಬಿರದಲ್ಲಿ ಭಾಗಿಯಾದೆ. ಪ್ರತಿ ದಿನ ಮುಂಜಾನೆ ಬೇಗನೆ ಎದ್ದು ೬.೩೦ ಘಂಟೆಗೆ ಮೈದಾನದಲ್ಲಿ ಹಾಜರಿ. ಅಲ್ಲಿ ವ್ಯಾಯಾಮ, ಯೋಗ, ಅಥ್ಲೆಟಿಕ್ಸ್ ಮತ್ತು ಹಾಕಿ ಕ್ರೀಡೆಯ ತರಬೇತಿಯನ್ನು ನಮಗೆ ಕೊಡುತ್ತಿದ್ದರು. ಈ ವರ್ಷವೂ ನಾನು ಶಿಬಿರದಲ್ಲಿ ಪಾಲ್ಗೊಳ್ಳಲು ಉತ್ಸುಕಳಾಗಿ ಕಾಯುತ್ತಿದ್ದೆ. ಆದ್ದರಿಂದ ಅಜ್ಜಿಯನ್ನು ಮಾತ್ರ ಮೈಸೂರಿಗೆ ಕಳುಹಿಸಿ ಕೊಟ್ಟೆ. ಅಜ್ಜಿಗೆ ಸ್ವಲ್ಪ ಬೇಸರವಾಯಿತು. ಆದರೆ ನನಗೆ ಶಿಬಿರದಲ್ಲಿ ಪಾಲ್ಗೊಳ್ಳುವುದು, ಶಿಬಿರದ ಕೊನೆಯಲ್ಲಿ ನಡೆಸುವ ಸ್ಪರ್ಧೆಗಳಲ್ಲಿ ಭಾಗವಹಿಸುವ ಉತ್ಸಾಹದಲ್ಲಿದ್ದೆ, ನಾನು ಹಾಕಿ ಕ್ರೀಡೆಯನ್ನು ಕಲಿತು ಮೊದಲ ಬಾರಿಗೆ ಮೈದಾನದಲ್ಲಿ ಆಡಿದ್ದು ಇಲ್ಲೇ. ಎಲ್ಲಕ್ಕಿಂತ ಮುಖ್ಯವಾಗಿ ಶಿಬಿರದಿಂದ ನಮ್ಮನ್ನು ಚಾರಣ ಕರೆದುಕೊಂಡು ಹೋಗುತ್ತಿದ್ದರು. ಇವೆಲ್ಲದಕ್ಕೂ ನಾನು ಆಸಕ್ತಿಯಿಂದ ಕಾಯುತ್ತಿದ್ದೆನು. ಈ ವರ್ಷ ನಮ್ಮ ಶಿಬಿರ ತಂಡ ಕೊಡಗು ಜಿಲ್ಲೆಯ ಅತಿ ಎತ್ತರದ ಬೆಟ್ಟ ಶ್ರೇಣಿಗಳಲ್ಲಿ ೩ನೆಯ ಸ್ಥಾನದಲ್ಲಿರುವ ಕೋಟೆ ಬೆಟ್ಟಕ್ಕೆ ಚಾರಣ ಏರ್ಪಡಿಸಲಾಗಿತ್ತು. ಈ ವರ್ಷ ನನ್ನ ಅಪ್ಪನನ್ನೂ ಕರೆದುಕೊಂಡು ಹೊರಟೆನು. ಈ ಬೆಟ್ಟದ ತುತ್ತತುದಿಯಲ್ಲಿ ಈಶ್ವರ ದೇವಾಲಯವಿದೆ. ಬೇಸಿಗೆಯ ಈ ಬಿರು ಬಿಸಿಲನ್ನು ಲೆಕ್ಕಿಸದೆ ಬೆಟ್ಟವನ್ನೇರಿ ಸಂಭ್ರಮಿಸಿದೆವು. ನಾನು ಇದುವರೆಗೂ ನೋಡದ ಕಾಡು ಹಣ್ಣುಗಳಾದ ಕೊಟ್ಟೆ ಹಣ್ಣು, ಚೂರಿ ಹಣ್ಣು, ವಿವಿಧ ಗಿಡಮರಗಳ ಪರಿಚಯವನ್ನು ಶಿಬಿರದ ತರಬೇತುದಾರರು ಮಾಡಿಕೊಟ್ಟರು. ಅಂತು ನಾನು ಜೀವನ ಪೂರ್ತಿ ಮರೆಯಲಾರದ ಕ್ಷಣಗಳನ್ನು ಈ ಬೇಸಿಗೆ ರಜೆ (ಶಿಬಿರದಲ್ಲಿ) ಕಳೆದೆನು. ಇನ್ನು ಮುಂದಿನ ವರ್ಷದ ಶಿಬಿರಕ್ಕೆ ಕಾಯುವೆನು. ಇನ್ನುಳಿದ ಸಮಯದಲ್ಲಿ ಕರಕುಶಲ ತಯಾರಿ, ಚಿತ್ರ ಬಿಡಿಸುವುದು, ಸಂಗೀತ ಅಭ್ಯಾಸ ಮಾಡುತ್ತಿರುವೆನು. ಶಾಲೆಯಿಂದ ದೊರೆತ ಪುಸ್ತಕಗಳಿಗೆ ಸ್ವತಃ ನಾನೆ ಬೈಂಡ್ಮಾಡಿದೆನು. ಶಾಲೆ ಪ್ರಾರಂಭಕ್ಕೆ, ಸ್ನೇಹಿತರ ಭೇಟಿಗಾಗಿ ಕಾಯುತ್ತಿರುವೆನು.

-ಅಪೇಕ್ಷಾ ಆರ್ ರೈ, ೭ನೇ ತರಗತಿ,

ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ. ಮಡಿಕೇರಿ

ಸೈಕಲ್ ಓಡಿಸುತ್ತಿದ್ದೇನೆ...

ನನಗೆ ಒಂದು ತಿಂಗಳು ಕಳೆದುಹೋಗಿದ್ದೇ ಗೊತ್ತಾಗಲಿಲ್ಲ. ಹೇಗೆಂದರೆ ದೇಶ ಸೇವೆಯಲ್ಲಿ ನಿರತರಾಗಿದ್ದ ನನ್ನ ತಂದೆ ಒಂದು ತಿಂಗಳು ರಜೆಗಾಗಿ ಮನೆಗೆ ಬಂದಿದ್ದರು. ತೋಟಕ್ಕೆ ತಂದೆಯ ಜೊತೆಯಲ್ಲಿಯೇ ಹೋಗಿ ಸಣ್ಣ ಸಹಾಯ ಮಾಡುತ್ತಿದ್ದೆ. ಮದುವೆ ಸಮಾರಂಭ ಗಳಿಗೂ, ಕೂಡಿಗೆಯಲ್ಲಿರುವ ಅತ್ತೆ ಮನೆಗೂ ಹೋಗಿದ್ದೆ. ವಾಪಸ್ಸು ಬರುವಾಗ ನನಗೂ, ನನ್ನ ತಮ್ಮ ಗವಿನ್‌ಗೂ ಹೊಸ ಸೈಕಲನ್ನು ತಂದೆ ತೆಗೆದುಕೊಟ್ಟರು. ಸೈಕಲ್ ಓಡಿಸಲು ಕಲಿಯುತ್ತಿದ್ದೇನೆ. ಮಣ್ಣಾಟ, ಫುಟ್ಬಾಲ್ ಆಟವನ್ನು ತಮ್ಮನ ಜೊತೆಯಲ್ಲಿ ಆಡುತ್ತೇನೆ. ಚಿಣ್ಣರ ಲೋಕವನ್ನು ಟಿ.ವಿ.ಯಲ್ಲಿ ನೋಡುತ್ತೇನೆ. ರೂಪೇಶ್ ಸರ್ ಹತ್ತಿರ ಡ್ರಾಯಿಂಗ್ ಕ್ಲಾಸ್‌ಗೆ ಹೋಗುತ್ತಿದ್ದೇನೆ. ಮುಂದೆ ನನ್ನ ಗುರುಗಳ ಹತ್ತಿರ ಚಿತ್ರಕಲೆಯನ್ನು ಚೆನ್ನಾಗಿ ಕಲಿತು ಚಿತ್ರಕಲಾಕಾರನಾಗುವ ಆಸೆ ಇದೆ.

-ಮುಕ್ಕಾಟಿ ಜಶ್ವಿನ್ ತಿಮ್ಮಯ್ಯ, ೧ನೇ ತರಗತಿ,

ಸೆಂಟ್ ಜೋಸೆಫ್ ಕಾನ್ವೆಂಟ್, ಮಡಿಕೇರಿ.