ವರದಿ: ವಾಸು ಎ.ಎನ್

ಸಿದ್ದಾಪುರ, ಮೇ ೨೨: ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಅಂತರಸAತೆಗೆ ಬಿಡಲ್ಪಟ್ಟಿದ್ದ ಪುಂಡಾನೆ ಮತ್ತೆ ಕಾಫಿ ತೋಟಕ್ಕೂ ಲಗ್ಗೆ ಇಟ್ಟು ಆತಂಕ ಸೃಷ್ಟಿಸಿದೆ. ಕಳೆದು ಒಂದು ವಾರಗಳ ಹಿಂದೆ ತಾ.೧೫ ರಂದು ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಅವರೆಗುಂದದ ಬಳಿ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿ ಸಾಕಾನೆಗಳ ನೆರವಿನಿಂದ ಶ್ರಮಪಟ್ಟು ವೀರಾಜಪೇಟೆ ತಾಲೂಕು ಡಿ.ಸಿ.ಎಫ್. ಜಗನ್ನಾಥ್ ನೇತೃತ್ವದಲ್ಲಿ ಪುಂಡಾನೆಯನ್ನು ಸೆರೆಹಿಡಿಯಲಾಗಿತ್ತು. ಈ ಪುಂಡಾನೆಯು ಈ ಹಿಂದೆ ಮಾನವನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು. ಹಾಗೂ ಗ್ರಾಮಸ್ಥರನ್ನು ಅಟ್ಟಾಡಿಸಿ ದಾಳಿ ನಡೆಸಿ ಗಾಯಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸಲಗವನ್ನು ಸೆರೆಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಾ.೧೪ ಹಾಗೂ ೧೫ ರಂದು ಮತ್ತಿಗೋಡು ಹಾಗೂ ದುಬಾರೆ ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ಭೀಮಾ, ಧನಂಜಯ, ಅಶ್ವತ್ಥಾಮ, ಹರ್ಷ ಇವುಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ ಸುಮಾರು ೧೦ ಕಿ.ಮೀ. ದೂರದವರೆಗೆ ಸುತ್ತಾಡಿ ಪುಂಡಾನೆಯನ್ನು ಸೆರೆಹಿಡಿಯಲಾಗಿತ್ತು. ಈ ಸಲಗವನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಕೂಡ ಒತ್ತಾಯಿಸಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿವರ್ಗ, ಆರ್.ಆರ್.ಟಿ. ತಂಡದ ಸಿಬ್ಬಂದಿ ಪುಂಡಾನೆಯನ್ನು ಸೆರೆಹಿಡಿದು ಅದು ದಷ್ಟಪುಷ್ಟವಾಗಿದ್ದ ಹಿನ್ನೆಲೆಯಲ್ಲಿ ಅದಕ್ಕೆ ದಕ್ಷ ಎಂದು ನಾಮಕರಣ ಮಾಡಲಾಗಿತ್ತು.

ಸೆರೆಹಿಡಿದ ಪುಂಡಾನೆಗೆ ಸಾಕಾನೆಗಳ ನೆರವಿನಿಂದ ತಾ.೧೫ರಂದು ರೇಡಿಯೋ ಕಾಲರ್ ಅಳವಡಿಸಿ ನಾಗರಹೊಳೆಯ ಅಂತರಸAತೆಗೆ ಮಧ್ಯರಾತ್ರಿ ಬಿಡಲಾಗಿತ್ತು. ಇದೀಗ ಅಂತರಸAತೆಯ ಕಾಡಿನಿಂದ ದಕ್ಷ ಪುಂಡಾನೆಯು ನಾಗರಹೊಳೆಯ ಮುಖಾಂತರ ಅರಣ್ಯ ಪ್ರದೇಶದ ಮಾರ್ಗವಾಗಿ ಚೆನ್ನಂಗಿ ಗ್ರಾಮದ ಶಾಲೆ ಬಳಿಯಿಂದ ಕಳೆದ ೨ ದಿನಗಳ ಹಿಂದೆ ಬಾಡಗ ಬಾಣಂಗಾಲ, ಮಾಲ್ದಾರೆ ಭಾಗಗಳ ಕಾಫಿ ತೋಟಗಳಿಗೆ ಲಗ್ಗೆ ಇಟ್ಟಿರುವ ಬಗ್ಗೆ ತಿಳಿದು ಬಂದಿದೆ. ಕಾಫಿ ತೋಟಗಳಲ್ಲಿ ರಾಜರೋಷವಾಗಿ ರೇಡಿಯೋ ಕಾಲರ್ ನೊಂದಿಗೆ ಆಕ್ರೋಶಗೊಂಡು ಭಯ ಹುಟ್ಟಿಸುವ ರೀತಿಯಲ್ಲಿ ಸುತ್ತಾಡುತ್ತಿರು ವುದನ್ನು ಸ್ಥಳೀಯರು ಪ್ರತ್ಯಕ್ಷ ಕಂಡಿದ್ದು ಭಯಭೀತರಾಗಿದ್ದಾರೆ. ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

(ಮೊದಲ ಪುಟದಿಂದ)

ಡಿಸಿಎಫ್ ಪ್ರತಿಕ್ರಿಯೆ

ಅಂತರಸAತೆಗೆ ಬಿಟ್ಟಿದ್ದ ಪುಂಡಾನೆಯು ಹಿಂತಿರುಗಿ ಬಾಡಗ ಬಾಣಂಗಾಲಕ್ಕೆ ಬಂದಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಸಲಗದ ಚಲನವಲನ ಕಂಡುಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಗಮನಹರಿಸುತ್ತಿದ್ದಾರೆ. ವನ್ಯಜೀವಿ ವಿಭಾಗ ಮುಖ್ಯ ಪರಿಪಾಲಕರಿಗೆ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಫ್ ಜಗನ್ನಾಥ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಮಳೆಯಿಂದಾಗಿ ತಡವಾದ ಮಾಹಿತಿ

ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ರೇಡಿಯೋ ಕಾಲರ್ ಅಳವಡಿಸಿದ್ದ ದಕ್ಷ ಪುಂಡಾನೆಯ ಚಲನ ವಲನದ ಮಾಹಿತಿ ಸಮರ್ಪಕವಾಗಿ ಅರಣ್ಯಾಧಿಕಾರಿಗಳಿಗೆ ಸಿಗುತ್ತಿರಲಿಲ್ಲ. ನಿನ್ನೆ ದಿನ ತಡವಾಗಿ ಲಭಿಸಿದ ಮಾಹಿತಿ ಪ್ರಕಾರ ಚೆನ್ನಂಗಿ ಗ್ರಾಮ ದಾಟಿ ಮಾಲ್ದಾರೆ-ಬಾಡಗ ಬಾಣಂಗಾಲ ಗ್ರಾಮಕ್ಕೆ ಪುಂಡಾನೆ ಲಗ್ಗೆ ಇಟ್ಟಿದೆ. ಈ ಹಿಂದೆ ಕೂಡ ಸಿದ್ದಾಪುರ ಭಾಗದಿಂದ ಬಂಡೀಪುರ ಅರಣ್ಯಕ್ಕೆ ರೇಡಿಯೋ ಕಾಲರ್ ಅಳವಡಿಸಿ ಬಿಟ್ಟಿದ್ದ ಸಲಗ ಹಿಂತಿರುಗಿ ಬಂದಿತ್ತು. ಇದೀಗ ನೂರಾರು ಕಿ.ಮೀ. ದೂರದಿಂದ ಸಲಗವು ಹಿಂತಿರುಗಿ ಬಂದಿದೆ.

ಕಾಫಿ ತೋಟಗಳಲ್ಲಿ ಸುತ್ತಾಡುತ್ತಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇದರ ಚಲನ ವಲನ ಕಂಡು ಹಿಡಿಯಲು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್ ತಿಳಿಸಿದ್ದಾರೆ. ಬಾಡಗ ಬಾಣಂಗಾಲ ಗ್ರಾಮ ಹಾಗೂ ಮಾಲ್ದಾರೆ ಭಾಗದಲ್ಲಿ ಸಲಗ ಕಂಡು ಬಂದಿದೆ. ಈ ಬಗ್ಗೆ ಗ್ರಾಮಸ್ಥರು ಎಚ್ಚರವಹಿಸಬೇಕೆಂದು ಅವರು ತಿಳಿಸಿದ್ದಾರೆ.