ಪೊನ್ನAಪೇಟೆ, ಮೇ ೨೩: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗೂರು ಸಮೀಪದ ಚೀನಿವಾಡ ಗ್ರಾಮದ ಎ.ಎಂ. ಮಹಮದ್ ಮುಸ್ತಕ್ ಎಂಬವರ ಮನೆಯಿಂದ ಕರಿಮೆಣಸು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊನ್ನಂಪೇಟೆ ಪೊಲೀಸರು ತಾ.೨೨ ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಬೇಗೂರು ಸಮೀಪದ ಮಾಪಿಳೆತೋಡು ಗ್ರಾಮದ ಅಶ್ರಫ್ ಮತ್ತು ಜಮೀರ್ ಎಂಬವರೇ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ ಕಳವು ಮಾಡಿದ್ದ ಸುಮಾರು ೧ ಲಕ್ಷದ ೨೫ ಸಾವಿರ ರೂ. ಬೆಲೆಬಾಳುವ ೫ ಚೀಲ ಕರಿಮೆಣಸನ್ನು ವಶಪಡಿಸಿಕೊಳ್ಳಲಾಗಿದೆ.
ಏಪ್ರಿಲ್ ೩ ರಂದು ಮಹಮದ್ ಮುಸ್ತಕ್ ತನ್ನ ತಂದೆ ಮನೆ ದೇವರಪುರಕ್ಕೆ ತೆರಳಿ ರಾತ್ರಿ ಅಲ್ಲಿಯೇ ತಂಗಿದ್ದರು. ಮಾರನೇ ದಿನ ಮರಳಿ ತನ್ನ ಮನೆಗೆ ಬಂದು ನೋಡಿದಾಗ ಕಳ್ಳರು ಮನೆಯ ಹಿಂಬಾಗಿಲನ್ನು ಮುರಿದು ೫ ಚೀಲ ಕರಿಮೆಣಸು ಕಳವು ಮಾಡಿರುವ ಬಗ್ಗೆ ಗೊತ್ತಾಗಿತ್ತು. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಮಹಮದ್ ಮುಸ್ತಕ್ ಏಪ್ರಿಲ್ ೪ ರಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊನ್ನಂಪೇಟೆ ಪೊಲೀಸರು ವಿವಿಧ ಕೋನಗಳಿಂದ ತನಿಖೆ ನಡೆಸಿ ಪೊನ್ನಂಪೇಟೆಯಲ್ಲಿ ಆರೋಪಿಗಳನ್ನು ಮಾಲು ಸಮೇತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮತ್ತು ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರ ನಿರ್ದೇಶನದ ಮೇರೆಗೆ ವೀರಾಜಪೇಟೆ ತಾಲೂಕು ಡಿವೈಎಸ್‌ಪಿ ಮೋಹನ್ ಕುಮಾರ್, ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುಧೋಳ್ ಮಾರ್ಗದರ್ಶನದಲ್ಲಿ, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ದಳದ ನಿರೀಕ್ಷಕ ಬಿ.ಶ್ರೀಧರ್, ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ, ಮುತ್ತುರಾಜ್, ಸಂತೋಷ್, ನಟರಾಜ್, ದಯಾನಂದ ಕಂಬಳಿ, ಬಾಳಪ್ಪ, ಇನ್ನಿತರರು ಭಾಗವಹಿಸಿದ್ದರು.