ಕುಶಾಲನಗರ, ಮೇ ೨೨: ಸಾಂಪ್ರದಾಯಿಕ ಬೇಡು ಹಬ್ಬ ಅಂಗವಾಗಿ ಕುಶಾಲನಗರ ಪಟ್ಟಣ, ಸಮೀಪದ ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ವಿವಿಧ ವೇಷ ತೊಟ್ಟುಕೊಂಡು ಬೈಗುಳದೊಂದಿಗೆ ಕುಣಿಯುತ್ತಿದ್ದ ದೃಶ್ಯ ಕಂಡು ಬಂತು.
ಪಟ್ಟಣದ ಉದ್ದಕ್ಕೂ ಸುಮಾರು ೨೦ಕ್ಕೂ ಅಧಿಕ ತಂಡಗಳು ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಹಣ ನೀಡುವಂತೆ ಮನವಿ ಮಾಡುತ್ತಿದ್ದ ದೃಶ್ಯ ಗೋಚರಿಸಿತು.
ಆದರೆ ಓರ್ವ ಅಪರಿಚಿತ ಯುವಕ ಬೇಡು ಹಬ್ಬದ ಹೆಸರಿನಲ್ಲಿ ನಗ್ನನಾಗಿ ತನ್ನ ಮೈಗೆ ಕಪ್ಪು ಬಣ್ಣ ಬಳಿದುಕೊಂಡು ಬೆತ್ತಲೆಯಾಗಿ ಹೆದ್ದಾರಿ ರಸ್ತೆ ನಡುವೆ ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಿ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಇದರಿಂದ ಹೆದ್ದಾರಿ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾದ ಪ್ರಮೇಯ ಸೃಷ್ಟಿಯಾಗಿತ್ತು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಮಹಿಳೆಯರು, ಸಾರ್ವಜನಿಕರಿಗೆ ಆಗುತ್ತಿದ್ದ ಕಿರಿಕಿರಿ ತಪ್ಪಿಸಿದ ಪ್ರಸಂಗ ನಡೆಯಿತು.