ವರದಿ -ಚಂದ್ರಮೋಹನ್

ಕುಶಾಲನಗರ, ಮೇ ೨೩ : ಕೊಡಗು ಜಿಲ್ಲೆಯಲ್ಲಿ ಅತಿ ಶೀಘ್ರ ಬೆಳವಣಿಗೆ ಕಂಡ ಕುಶಾಲನಗರ ಪಟ್ಟಣ ತಾಲೂಕು ಕೇಂದ್ರವಾಗಿ ಮಾರ್ಪಟ್ಟು ವರುಷಗಳೇ ಕಳೆದರೂ ಪಟ್ಟಣಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಅಗತ್ಯವಿರುವ ಇಲಾಖೆಗಳಿಗೆ ಹೆಚ್ಚುವರಿ ಸಿಬ್ಬಂದಿಗಳನ್ನು ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಕುಶಾಲನಗರ ಪಟ್ಟಣದ ಸುತ್ತಮುತ್ತ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಶೀಘ್ರಗತಿಯಲ್ಲಿ ಬೆಳವಣಿಗೆ ಕಂಡು ಬಂದಿದ್ದು, ಜೊತೆ ಜೊತೆಗೆ ಅಪರಾಧ ಪ್ರಕರಣಗಳ ಕೇಂದ್ರ ಸ್ಥಾನವಾಗಿಯೂ ಮಾರ್ಪಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಪಟ್ಟಣ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಪರಾಧಗಳು ನಡೆದ ಕೆಲವೇ ಗಂಟೆಗಳ ಅವಧಿಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟುವ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ಕುಶಾಲನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಬಹುದು. ಆದರೆ ದಿನನಿತ್ಯದ ಒತ್ತಡದ ಕೆಲಸಗಳು ಅವರ ಮಾನಸಿಕ ಸ್ಥೆöÊರ್ಯಕ್ಕೆ ಕುಂದು ಉಂಟು ಮಾಡುತ್ತಿದೆ ಎಂದರೆ ತಪ್ಪಾಗಲಾರದು.

ಪಟ್ಟಣದಲ್ಲಿ ನಡೆದ ಪಿಕ್‌ಪಾಕೆಟ್ ಪ್ರಕರಣ, ವಂಚನೆ ಪ್ರಕರಣಗಳು, ದರೋಡೆ ಪ್ರಕರಣಗಳು, ನಕಲಿ ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದ ತಂಡದ ಪತ್ತೆ ಕಾರ್ಯ, ಮುಸುಕು ಧರಿಸಿ ಚಿನ್ನದ ಅಂಗಡಿಗಳಿAದ ದರೋಡೆ, ಯುವಕನೊಬ್ಬನ ಅಪಹರಣ ಪ್ರಕರಣ, ಈ ನಡುವೆ ಮಾದಕ ವಸ್ತುಗಳ ಮಾರಾಟ ದಂಧೆ ಇಂತಹ ಹಲವು ಪ್ರಕರಣಗಳು ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ಆರೋಪಿಗಳನ್ನ ಪತ್ತೆ ಹಚ್ಚಿ ಭೇದಿಸುವಲ್ಲಿ ಯಶಸ್ವಿಯಾಗಿರುವ ಕುಶಾಲನಗರ ಪೊಲೀಸರು ಅಗತ್ಯ ಸಿಬ್ಬಂದಿಗಳ ಕೊರತೆಯ ನಡುವೆ ಸಮಸ್ಯೆಯ ಸುಳಿಯಲ್ಲಿ ಕೆಲಸ ಅನಿರ್ವಹಿಸುವಂತಾಗಿದೆ.

ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಮೇಲ್ದರ್ಜೆಗೇರಿ ವರ್ಷಗಳು ಕಳೆದರೂ ಇಲ್ಲಿಯ ಠಾಣೆಗಳಿಗೆ ಅಗತ್ಯವಿರುವ

(ಮೊದಲ ಪುಟದಿಂದ) ಸಿಬ್ಬಂದಿಗಳ ನೇಮಕ ಮಾಡುವಲ್ಲಿ ಮಾತ್ರ ಇಲಾಖೆ ವಿಳಂಬ ಧೋರಣೆ ತಾಳಿದೆ ಎಂದರೆ ತಪ್ಪಾಗಲಾರದು.

ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ದರ್ಜೆಯಿಂದ ಇನ್ಸ್ಪೆಕ್ಟರ್ ದರ್ಜೆಗೆ ಏರಿದರೂ ಪಟ್ಟಣ ಠಾಣೆ ಮಾತ್ರ ಇನ್ನೂ ಸಿಬ್ಬಂದಿಗಳ ಕೊರತೆಯಿಂದ ಹಳೆಯ ದರ್ಜೆಯಲ್ಲಿ ಮುಂದುವರೆದಿದೆ.

ಪ್ರಸಕ್ತ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ೧೯ ಮಂದಿ ಕಾನ್ಸ್ಟೇಬಲ್‌ಗಳು, ೮ ಮಂದಿ ಹೆಡ್ ಕಾನ್ಸ್ಟೇಬಲ್‌ಗಳು, ನಾಲ್ಕು ಮಂದಿ ಎ.ಎಸ್.ಐ ಮತ್ತು ಎರಡು ಪಿ.ಎಸ್.ಐ ಹುದ್ದೆಗಳು ನಿಯೋಜನೆಯಾಗಿದ್ದು, ಇನ್ನುಳಿದಂತೆ ಹೆಚ್ಚುವರಿ ಸಿಬ್ಬಂದಿಗಳ ನೇಮಕ ಇನ್ನೂ ಆಗಿಲ್ಲ.

೧೯ ಕಾನ್ಸ್ಟೇಬಲ್‌ಗಳಲ್ಲಿ ನಾಲ್ಕು ಮಂದಿ ಮಹಿಳಾ ಸಿಬ್ಬಂದಿಗಳು ಕೂಡ ಒಳಗೊಂಡಿದ್ದು, ಸಿಬ್ಬಂದಿಗಳು ರಜೆಗೆ ತೆರಳಿದಲ್ಲಿ ಕೊರತೆ ಎದುರಾಗುವುದು ಸಾಮಾನ್ಯವಾಗಿದೆ.

ಅದರಲ್ಲಿಯೂ ದಿನನಿತ್ಯದ ಕರ್ತವ್ಯವಾದ ನ್ಯಾಯಾಲಯದ ಕೆಲಸಗಳಿಗೆ ಒಟ್ಟು ಐದು ಸಿಬ್ಬಂದಿಗಳು ಮೀಸಲಾದರೆ, ಠಾಣೆಯಲ್ಲಿ ಕಂಪ್ಯೂಟರ್ ಕೆಲಸಕ್ಕೆ ಕೆಲವು ಸಿಬ್ಬಂದಿಗಳ ನಿಯೋಜನೆ, ಇಬ್ಬರು ಸಿಬ್ಬಂದಿಗಳು ಸೆಂಟ್ರಿ ಡ್ಯೂಟಿ, ಡಿವೈಎಸ್ಪಿಗೆ ಒಬ್ಬರು, ಇನ್ಸ್ಪೆಕ್ಟರ್‌ಗೆ ಒಬ್ಬರು, ಚುನಾವಣಾ ಕರ್ತವ್ಯಕ್ಕೆ ಮೂರು ಮಂದಿ, ವಿಐಪಿಗಳು ಆಗಮಿಸಿದ ಸಂದರ್ಭ ಅವರ ಭದ್ರತೆಗೆ ಕೆಲವು ಮಂದಿ ನಿಯೋಜನೆ, ದಿನನಿತ್ಯ ನಡೆಯುವ ಕಾರ್ಯಕ್ರಮಗಳ ರಕ್ಷಣಾ ವ್ಯವಸ್ಥೆಗೆ ಇನ್ನೂ ಕೆಲವು ಸಿಬ್ಬಂದಿಗಳ ನಿಯೋಜನೆ, ಸುತ್ತಮುತ್ತ ಬಡಾವಣೆ ಗ್ರಾಮಗಳಲ್ಲಿ ನಡೆಯುವ ಜಾತ್ರೆ ಮತ್ತಿತರ ಕಾರ್ಯಕ್ರಮಗಳಿಗೆ ವಿಶೇಷ ಕರ್ತವ್ಯಕ್ಕೆ ಕೂಡ ಈ ಸಿಬ್ಬಂದಿಗಳು ತೆರಳಬೇಕಾದ ಪ್ರಮೇಯ ಇದೆ. ಎಲ್ಲಾ ಕಳೆದು ನೋಡಿದಲ್ಲಿ ಠಾಣೆಯಲ್ಲಿ ಸಿಬ್ಬಂದಿಗಳ ಸಂಖ್ಯೆ ಶೂನ್ಯವಾಗುವುದರೊಂದಿಗೆ ಇರುವ ಸಿಬ್ಬಂದಿಗಳಿಗೆ ಕೆಲಸದ ಒತ್ತಡ ಅಧಿಕವಾಗುತ್ತಿರುವುದು ಸಾಮಾನ್ಯವಾಗಿದೆ. ಕೆಲವು ಸಿಬ್ಬಂದಿಗಳು ದಿನದ ೨೪ ಗಂಟೆಗಳು ಕೆಲಸ ಮಾಡಬೇಕಾದ ಪ್ರಸಂಗವೂ ಠಾಣೆಯಲ್ಲಿ ಆಗಾಗ್ಗೆ ಕಂಡುಬರುತ್ತದೆ.

ಈ ಎಲ್ಲಾ ಒತ್ತಡಗಳನ್ನು ಅರಿತ ಅಪರಾಧ ಲೋಕದ ಜನ ತಮ್ಮ ಕೈಚಳಕಗಳನ್ನು ತೋರಿಸುವ ಮೂಲಕ ಇತ್ತೀಚಿನ ದಿನಗಳಲ್ಲಿ ಮನೆ ಕಳ್ಳತನ ಮತ್ತಿತರ ಅಪರಾಧ ಚಟುವಟಿಕೆಗಳಲ್ಲಿ ಮುಂದಾಗಿರುವುದು ಪೊಲೀಸರ ಮೇಲೆ ಇನ್ನೂ ಒತ್ತಡ ಅಧಿಕವಾಗುತ್ತಿದೆ. ಇಂತಹ ಖದೀಮರ ಚಲನವಲನಗಳನ್ನು ಗಮನಿಸಲು ಸಹ ಸಮಯದ ಅಭಾವ ಪೊಲೀಸರಿಗೆ ಎದುರಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲಾ ಮಟ್ಟದ ಪೊಲೀಸ್ ವ್ಯವಸ್ಥೆ ಮತ್ತು ಕುಶಾಲನಗರ ಡಿ ವೈ ಎಸ್ ಪಿ ಆರ್ ವಿ ಗಂಗಾಧರಪ್ಪ, ಇನ್ಸ್ಪೆಕ್ಟರ್ ಪ್ರಕಾಶ್ ಅವರ ನೇತೃತ್ವದಲ್ಲಿ ಕುಶಾಲನಗರ ಪೊಲೀಸರ ತಂಡ ಮಾತ್ರ ಚಾಕಚಕ್ಯತೆಯಿಂದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಮಾತ್ರ ಶೇಕಡ ನೂರರಷ್ಟು ಯಶಸ್ವಿ ಆಗುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಅಂಶವಾಗಿದೆ. ಆದರೆ ದಿನದ ೨೦ ಗಂಟೆಗಳ ಕಾಲ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಬಗ್ಗೆ ಯಾರಿಗೂ ಅರಿವಾಗದೆ ಇರುವುದು ಮಾತ್ರ ವಿಷಾದನೀಯ.

ಶೀಘ್ರವಾಗಿ ಬೆಳವಣಿಗೆ ಕಾಣುವ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಅಂದಾಜು ೨೦ ಸಾವಿರ ಕ್ಕೂ ಅಧಿಕ ನಾಗರಿಕರು ನೆಲೆಸಿದ್ದು, ಇನ್ನೊಂದೆಡೆ ವಾರಾಂತ್ಯದಲ್ಲಿ ಕುಶಾಲನಗರ ಮೂಲಕ ಸಾಗುವ ಲಕ್ಷಾಂತರ ಸಂಖ್ಯೆಯ ಪ್ರವಾಸಿಗರ ಸಂಖ್ಯೆ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿರುವ ಪೊಲೀಸರಿಗೆ ಇನ್ನೂ ತಲೆ ನೋವಾಗಿ ಪರಿಣಮಿಸಿದೆ. ಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ಠಾಣಾ ಪೊಲೀಸರು ಕುಶಾಲನಗರದ ಸಂಚಾರಿ ವ್ಯವಸ್ಥೆಯನ್ನು ಸಮರ್ಪಕವಾಗಿಸಲು ಹೆಣಗಾಡುತ್ತಿರುವ ಪರಿಸ್ಥಿತಿ ನಿಜಕ್ಕೂ ಶ್ಲಾಘನೀಯ ಎಂದರೆ ತಪ್ಪಾಗಲಾರದು. ಇಡೀ ದಿನ ಬಿಸಿಲಿನ ನಡುವೆ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿರುವ ದೃಶ್ಯ ದಿನನಿತ್ಯ ಕಾಣಬಹುದು.

ಕುಶಾಲನಗರ ಸುತ್ತಮುತ್ತ ನಿರಂತರವಾಗಿ ಘಟಿಸುವ ಸಾವು ನೋವಿನ ಅವಘಡಗಳನ್ನು ನಿಭಾಯಿಸುವ ಕರ್ತವ್ಯ ಕೂಡ ಇದೇ ಪೊಲೀಸರ ಮೇಲಿದೆ. ಹೆಚ್ಚುವರಿ ಸಿಬ್ಬಂದಿಗಳ ನೇಮಕಕ್ಕೆ ಪ್ರಸ್ತಾವನೆಗಳು ಮಾತ್ರ ಸಲ್ಲಿಕೆಯಾಗಿವೆ.

ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ಆದಷ್ಟು ಬೇಗನೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಸರ್ಕಾರ ತಕ್ಷಣ ಕಾರ್ಯೋನ್ಮುಖಗೊಳ್ಳಬೇಕಿದೆ.