ಮಡಿಕೇರಿ, ಮೇ ೨೨: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತೆ ಮುಂದುವರೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಳೆಯೂ ಆರಂಭಗೊಳ್ಳುವ ಮುನ್ಸೂಚನೆಯಿದ್ದು, ಜನರು ಮೇ ಮೂರನೇ ವಾರದಿಂದಲೇ ಈ ಬಾರಿ ಮಳೆಗಾಲದ ಅನುಭವವನ್ನು ಎದುರಿಸುತ್ತಿದ್ದು, ಮಳೆಗಾಲಕ್ಕೆ ಹೊಂದಿಕೊಳ್ಳುವAತಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಾತಾವರಣದ ಏರು-ಪೇರಿನಿಂದಾಗಿ ದಿನಂಪ್ರತಿ ಮಳೆಯಾಗುತ್ತಿದೆ. ಈಗಿನ ವಾತಾವರಣ ಮಳೆಗಾಲದ ಪೂರ್ವ ತಯಾರಿಯ ಕೆಲವು ಅಗತ್ಯತೆಗಳಿಗೆ ಜನರಿಗೆ ಸಮಸ್ಯೆಯಂತಾಗಿದೆ.
ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸರಾಸರಿ ೦.೭೦ ಸೆಂಟ್‌ನಷ್ಟು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೧.೧೨ ಇಂಚು, ವೀರಾಜಪೇಟೆ ತಾಲೂಕಿನಲ್ಲಿ ೦.೩೨, ಪೊನ್ನಂಪೇಟೆ ತಾಲೂಕಿನಲ್ಲಿ ೦.೮೨, ಸೋಮವಾರಪೇಟೆ ತಾಲೂಕಿನಲ್ಲಿ ೦.೩೯ ಹಾಗೂ ಕುಶಾಲನಗರ ತಾಲೂಕಿನಲ್ಲೂ ಸರಾಸರಿ ೦.೮೪ ಇಂಚು ಮಳೆಯಾಗಿದೆ.
ಜಿಲ್ಲೆಯಲ್ಲಿ ಜನವರಿಯಿಂದ ಈತನಕ ೯.೯೨ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿಗೆ ೧೪.೧೪, ವೀರಾಜಪೇಟೆ ೫.೯೦, ಪೊನ್ನಂಪೇಟೆ ೯.೧೦, ಸೋಮವಾರಪೇಟೆ ೮.೮೦ ಹಾಗೂ ಕುಶಾಲನಗರ ತಾಲೂಕಿಗೆ ಜನವರಿಯಿಂದ ಈತನಕ ೮.೩೭ ಇಂಚು ಸರಾಸರಿ ಮಳೆಯಾಗಿದೆ.
ಕಳೆದ ೨೪ ಗಂಟೆಗಳಲ್ಲಿ ಭಾಗಮಂಡಲ ಹೋಬಳಿಗೆ ೧.೨೫ ಇಂಚು, ಬಾಳೆಲೆ ೧.೨೧, ಮಡಿಕೇರಿ ಕ.ಸ.ಬಾ. ೧ ಇಂಚು, ನಾಪೋಕ್ಲು ೧.೩೧, ಸಂಪಾಜೆ ೦.೯೪, ಶ್ರೀಮಂಗಲ ೧.೦೭, ಕುಶಾಲನಗರ ೦.೬೮, ಸುಂಟಿಕೊಪ್ಪ ಹೋಬಳಿಯಲ್ಲಿ ೧ ಇಂಚು ಮಳೆಯಾಗಿದೆ. ಹಾರಂಗಿಗೆ ೧.೪೬ ಇಂಚು ಮಳೆಯಾಗಿದೆ. ಜಲಾಶಯಕ್ಕೆ ೪೬೦ ಕ್ಯುಸೆಕ್ಸ್ ಒಳಹರಿವು ಇದ್ದು, ಹೊರಹರಿವು ನಾಲೆಗೆ ೪೦ ಕ್ಯೂಸೆಕ್ಸ್ ಹಾಗೂ ನದಿಗೆ ೫೦ಕ್ಕೂ ಕ್ಯೂಸೆಕ್ಸ್ನಷ್ಟಿದೆ. ಕಳೆದ ವರ್ಷ ಈ ದಿನ ೧೯೩ ಕ್ಯೂಸೆಕ್ಸ್ ಒಳಹರಿವು ಇತ್ತು.