ಮಡಿಕೇರಿ, ಮೇ ೨೩: ಭಾರತದ ಯುವ ಜನಾಂಗವು ದೇಶ ಕಟ್ಟುವ ಕಾರ್ಯದಲ್ಲಿ ಆಸಕ್ತಿ ವಹಿಸಬೇಕಾಗಿದೆ. ಈ ದಿಸೆಯಲ್ಲಿ ಅಭಿಯಾನ ನಡೆಯಬೇಕಿದೆ ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಅವರು ಕರೆಯಿತ್ತಿದ್ದಾರೆ.

ಇಂದು ಮೈಸೂರಿಗೆ ತೆರಳುವ ಮಾರ್ಗದಲ್ಲಿ ಮಡಿಕೇರಿಯಲ್ಲಿ ‘ಶಕ್ತಿ’ ನಿವಾಸಕ್ಕೆ ಆಗಮಿಸಿದ್ದ ಸ್ವಾಮೀಜಿಯವರನ್ನು ‘ಶಕ್ತಿ’ ಸಂದರ್ಶಿಸಿದಾಗ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಯುವ ಜನತಗೆ ತಮ್ಮ ಸಂದೇಶವೇನು ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಈ ಕುರಿತಾದ ಅವರ ಅಂತರಾಳದ ಮಾತು ಈ ಕೆಳಗಿನಂತಿದೆ.

‘‘ಇತ್ತೀಚಿನ ವರ್ಷಗಳಲ್ಲಿ ಯುವಕರು ಚೆನ್ನಾಗಿ ವಿದ್ಯೆಯನ್ನು ಕಲಿತು ಬಳಿಕ ವಿದೇಶಕ್ಕೆ ತೆರಳುವ ‘ಟ್ರೆಂಡ್’ ಹೆಚ್ಚಾಗುತ್ತಿದೆ. ಸ್ವಂತ ದೇಶದ ಅಭಿಮಾನ ಕಡಿಮೆ ಆಗುತ್ತಿದೆ. ಉದಾಹರಿಸುವುದಾದರೆ, ಇತ್ತೀಚೆಗೆ ಚುನಾವಣಾ ಸಂದರ್ಭ ಕೆಲವು ದೃಶ್ಯ ಮಾಧ್ಯಮದವರು ಕೆಲವು ಯುವ ಸಮುದಾಯದ ಮಂದಿಯನ್ನು ಪ್ರಶ್ನಿಸಿದಾಗ, ದೇಶದ ಪ್ರಧಾನಿ ಯಾರು ಎಂಬ ಮಾಹಿತಿಯು ಕೂಡ ಅವರ ಬಳಿ ಇಲ್ಲದಿರುವುದು ಸ್ಪಷ್ಟ ಗೋಚರವಾಗಿದೆ. ಇದರೊಂದಿಗೆ ಸಾಂಸ್ಕೃತಿಕ ವಿಚಾರಗಳ ಪರಿಚಯದ ಕೊರತೆ ಇದೆ. ಈ ಮಾತು ಎಲ್ಲರಿಗೂ ಅನ್ವಯವಲ್ಲ. ಆದರೆ, ಅಧಿಕ ಮಂದಿಯಲ್ಲಿ ಇದು ಗೋಚರವಾಗುತ್ತಿದೆ. ಯುವ ಸಮುದಾಯಕ್ಕೆ ತಮ್ಮ ಕುಟುಂಬದ ಬಗ್ಗೆ ಜವಾಬ್ದಾರಿಕೆ ಇಲ್ಲದಿರುವುದು ಕಂಡುಬರುತ್ತಿದೆ. ಈ ದಿಸೆಯಲ್ಲಿ ಪೋಷಕರ ಬೇಜವಾಬ್ದಾರಿಯೂ ಇರಬಹುದು. ಯುವ ಸಮುದಾಯದಿಂದ ಸಮಾಜವನ್ನು ಕಟ್ಟುವ ಕೆಲಸ ವಿಶೇಷವಾಗಿ ನಡೆಯಬೇಕಿದೆ. ತಾವು ಸಂಪಾದನೆ ಮಾಡಿದ್ದನ್ನು ತಾವು ಮಾತ್ರ ಅನುಭವಿಸಿದರೆ ಸಾಕು ಎಂಬ ಮನೋಭಾವನೆ- ವರ್ತನೆ ಹೋಗಬೇಕಿದೆ. ತಾವು ಸಮಾಜದಲ್ಲಿ ಸೂಕ್ತ ಸ್ಥಾನಮಾನ ಪಡೆಯಬೇಕಿದ್ದಲ್ಲಿ ಸಮಾಜದ ಕೊಡುಗೆಯೂ ಬಹಳ ಇದೆ ಎನ್ನುವ ಪರಿಜ್ಞಾನ ಯುವ ಸಮುದಾಯಕ್ಕೆ ಇರಬೇಕಿದೆ. ಒಬ್ಬಂಟಿಗನಾಗಿ ಓರ್ವ ವ್ಯಕ್ತಿ ಬೇಕಾದುದ್ದನ್ನು ಪಡೆಯಲು ಅಸಾಧ್ಯ. ಸಮಾಜ ನಮಗೆ ಕೊಟ್ಟಿದೆ. ಆದ್ದರಿಂದ ನಮ್ಮ ಸಾಧನೆಯಲ್ಲಿ ಸಮಾಜದ ಒಂದು ಪಾಲೂ ಇದೆ ಎಂಬುದನ್ನು ಗಮನಿಸಬೇಕಿದೆ. ಈ ಹಿನ್ನೆಲೆಯಲ್ಲಿ ಒಂದಿಷ್ಟು ಪ್ರಮಾಣದಲ್ಲಿಯಾದರೂ ಅಗತ್ಯವಾಗಿ ಸಮಾಜ ಸೇವೆಯನ್ನು ಕೈಗೊಳ್ಳಬೇಕಿದೆ.

ಈ ಬಗ್ಗೆ ಹಿರಿಯರು ಕೂಡ ತಮ್ಮ ಮಕ್ಕಳಲ್ಲಿ ಎಚ್ಚರಿಕೆ ಮೂಡಿಸಬೇಕಿದೆ. ಪೋಷಕರ ಪಾತ್ರದÀ ಕೊರತೆಯೂ ಈ ವಿಚಾರದಲ್ಲಿ ಎದ್ದು ಕಾಣುತ್ತಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಧಾರ್ಮಿಕ ಪ್ರಜ್ಞೆ ಹೆಚ್ಚಾಗಿದೆ

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಬಳಿಕ ದೇಶದಲ್ಲಿ ಧಾರ್ಮಿಕ ಪ್ರಜ್ಞೆ ಹೆಚ್ಚಾಗಿದೆಯೇ ಎನ್ನುವ ‘ಶಕ್ತಿ’ಯ ಪ್ರಶ್ನೆಗೆ ಶ್ರೀ ವಿಶ್ವ ಪ್ರಸನ್ನ ತೀರ್ಥರು ಈ ಕೆಳಗಿನಂತೆ ಪ್ರತಿಕ್ರಿಯಿಸಿದರು.

(ಮೊದಲ ಪುಟದಿಂದ) ದೇಶದಲ್ಲಿ ಧಾರ್ಮಿಕ ಪ್ರಜ್ಞೆ ಮೊದಲಿನಿಂದಲೂ ಇದೆ. ಆದರೆ, ಶ್ರೀ ರಾಮ ಮಂದಿರ ಉದ್ಘಾಟನೆ ಬಳಿಕ ಈ ಧಾರ್ಮಿಕ ಪ್ರಜ್ಞೆ ಹೆಚ್ಚಾಗಿದ್ದು, ವಿಶೇಷ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತಿದೆ.

‘ಶಕ್ತಿ’ಯ ಪ್ರಶ್ನೆ: ಮಠ-ಮಾನ್ಯಗಳಲ್ಲಿ ಮುಖ್ಯವಾಗಿ ಬೇಕಾದುದು ಅಧ್ಯಾತ್ಮಿಕ ವಿಚಾರಗಳ ಪ್ರಚಾರ ಹಾಗೂ ಸಾಂಸ್ಕೃತಿಕ ಜಾಗೃತಿಯ ಕಾರ್ಯ. ಆದರೆ, ಇಂದು ಅನೇಕ ಮಠಗಳಲ್ಲಿ ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಏಕೆ?

ಸ್ವಾಮೀಜಿ : ಮಠಗಳು ವಿದ್ಯಾಲಯಗಳನ್ನು ನಡೆಸುತ್ತಿವೆ. ಆಸಕ್ತರು ಅಲ್ಲಿಗೆ ತೆರಳಿ ಕಲಿಯುವ ವ್ಯವಸ್ಥೆ ವಿಪುಲವಾಗಿದೆ. ಆದರೆ, ಅಧ್ಯಾತ್ಮಿಕ ವಿಚಾರಗಳನ್ನು ಕಲಿಯುವ ಆಸಕ್ತಿಯೇ ಕಡಿಮೆಯಾಗುತ್ತಿದ್ದು, ಪ್ರಾಪಂಚಿಕ ವಿಚಾರಗಳೇ ಹೆಚ್ಚಾಗುತ್ತಿದೆ. ಹಿರಿಯರು ಕೂಡ ಈ ದಿಸೆಯಲ್ಲಿ ಅನಾಸಕ್ತರಾಗುತ್ತಿದ್ದಾರೆ. ಉದಾಹರಣೆಗೆ ಅನೇಕ ಧಾರ್ಮಿಕ ಉಪನ್ಯಾಸಗಳು ಮಠಗಳÀಲ್ಲಿ ನಡೆಯುತ್ತಿರುತ್ತವೆ. ಆದರೆ, ಈ ಉಪನ್ಯಾಸಗಳನ್ನು ಕೇಳಲು ೬೦ಕ್ಕಿಂತ ಅಧಿಕ ವಯೋಮಿತಿಯ ಜನರೇ ಹೆಚ್ಚಾಗಿ ಬರುತ್ತಾರೆ. ಹಿರಿಯರು ತಮ್ಮ ಮಕ್ಕಳನ್ನು ಇಂತಹ ಉಪನ್ಯಾಸಗಳಿಗೆ ಕರೆದೊಯ್ಯುವಂತಹ ಪ್ರಕ್ರಿಯೆ ನಡೆಯಬೇಕಿದೆ. ಮಕ್ಕಳಿಗೆ ವಿದ್ಯೆಯ ಒತ್ತಡವು ವಿದ್ಯಾಸಂಸ್ಥೆಗಳಲ್ಲಿ ದೈನಂದಿನವಾಗಿ ಕಲಿಯುವುದರೊಂದಿಗೆ ಹಾಗೂ ಮತ್ತೆ ಟ್ಯೂಷನ್ ಒತ್ತಡ ಇವೆಲ್ಲಾ ಉದ್ಯೋಗ ಪಡೆಯುವ ತನಕ ಇರುತ್ತವೆ. ಬಳಿಕ ವಿದೇಶಗಳಿಗೆ ಉದ್ಯೋಗಕ್ಕಾಗಿ ಹಾರಿ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಇದರಲ್ಲಿ ಹಿರಿಯರದ್ದೂ ತಪ್ಪು ಇದೆ. ಯುವ ಜನತೆ ಅಧ್ಯಾತ್ಮಿಕ ಚಿಂತನೆ ಮಾಡುವುದಂತೂ ಕಂಡು ಬರುವುದಿಲ್ಲ; ಕನಿಷ್ಟ ಪಕ್ಷ ಕೌಟುಂಬಿಕ ವ್ಯವಸ್ಥೆಯನ್ನಾದರೂ ಮುಂದುವರಿಸಬೇಕು ಎನ್ನುವ ಕಲ್ಪನೆಯು ಕೂಡ ಮಾಯವಾಗುತ್ತಿದೆ. ಮಕ್ಕಳು ವಿದೇಶಗಳಲ್ಲಿದ್ದು ಹಿರಿಯರು, ವಯೋವೃದ್ಧರು ಭಾರತದಲ್ಲಿಯೇ ಇರುವ ಸಂದರ್ಭ ಅವರನ್ನು ಮಕ್ಕಳು ನೋಡಿಕೊಳ್ಳುವ ಪ್ರಮೇಯವೇ ಇಲ್ಲದಂತಾಗಿದೆ. ಅಷ್ಟೇ ಅಲ್ಲ ವಿದೇಶಗಳಲ್ಲಿರುವವರು ತಮ್ಮ ಮಕ್ಕಳನ್ನು ಕೂಡ ವಸತಿ ಶಾಲೆಗಳಲ್ಲಿ ಇರಿಸುವ ಪ್ರಮೇಯದಿಂದಾಗಿ ಕೌಟುಂಬಿಕ ಪ್ರೀತಿಯ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ’’ ಎಂದು ಸ್ವಾಮೀಜಿ ಮಾರ್ನುಡಿದರು.

ಮಠಗಳಲ್ಲಿ ಜಾತಿ ವ್ಯವಸ್ಥೆ

ಅನೇಕ ಮಠಾಧೀಶರುಗಳು ಧಾರ್ಮಿಕ ವ್ಯವಸ್ಥೆಯನ್ನು ಕೈಬಿಟ್ಟು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ ವಿಭಾಗದಲ್ಲಿ ತೊಡಗಿಸಿಕೊಂಡು ತಮ್ಮ ಜನಾಂಗಗಳಿಗೆ ಪ್ರಾತಿನಿಧ್ಯಕ್ಕಾಗಿ ಪ್ರಯತ್ನಿಸುತ್ತಿರುವುದು ಎಷ್ಟು ಸರಿ? ಎಂಬ ‘ಶಕ್ತಿ’ಯ ಪ್ರಶ್ನೆಗೆ ಸ್ವಾಮೀಜಿ ಈ ಕೆಳಗಿನಂತೆ ಪ್ರತಿಕ್ರಿಯಿಸಿದರು. ಕೆಲವು ಮಠಗಳು ಅದೇ ಉದ್ದೇಶದಿಂದಲೇ ಸ್ಥಾಪನೆಗೊಂಡಿರುತ್ತವೆ. ಕೇವಲ ಸಾಮಾಜಿಕ ಭದ್ರತೆಯ ಗುರಿಯನ್ನಷ್ಟೇ ಈ ಕೆಲವು ಮಠಗಳು ಇರಿಸಿಕೊಂಡಿರುವುದರಿAದ ಅಂತಹವರು ಅದೇ ಕಾರ್ಯದಲ್ಲಿ ಆಸಕ್ತಿ ತೋರುತ್ತಿರುವುದು ಆ ಮಠಗಳ ಧೋರಣೆಗೆ ಪೂರಕವಾಗಿಯೇ ಇದೆ ಎನ್ನಬಹುದು ಎಂದು ಸ್ವಾಮೀಜಿ ವಿಮರ್ಶಿಸಿದರು.