ಕರಿಕೆ, ಮೇ ೨೩: ಇಲ್ಲಿಗೆ ಸಮೀಪದ ಚೆತ್ತುಕಾಯ ಶ್ರೀ ವನಶಾಸ್ತಾವು ಮತ್ತು ಕರಿಚಾಮುಂಡಿ ದೇವಾಲಯದ ವಾರ್ಷಿಕ ಪ್ರತಿಷ್ಠಾ ಕಾರ್ಯಕ್ರಮ ಕ್ಷೇತ್ರದ ತಂತ್ರಿಗಳಾದ ಕಾಸರಗೋಡಿನ ಶ್ರೀಪತಿ ಅರಳಿತ್ತಾಯ ಅವರ ನೇತೃತ್ವದಲ್ಲಿ ನಡೆಯಿತು.

ಶ್ರೀ ವನಶಾಸ್ತಾವು ದೇವರಿಗೆ ನವಕಾಭಿಷೇಕ, ಪಂಚಾಮ್ರತ ಅಭಿಷೇಕ, ಕ್ಷೀರ, ಎಳನೀರು ಅಭಿಷೇಕ ಸೇರಿದಂತೆ ವಿವಿಧ ಸೇವೆ, ಮಹಾಪೂಜೆ ನಡೆದವು. ನಂತರ ನಾಗ ದೇವರಿಗೆ ಆಶ್ಲೇಷ ಬಲಿ ಸೇವೆ ನೆರವೇರಿತು. ತಾ. ೨೧ ರಂದು ಶ್ರೀ ಕರಿಚಾಮುಂಡಿ ಹಾಗೂ ಗುಳಿಗ ದೈವಗಳ ಕೋಲ ನೆರವೇರಿತು. ಕಾರ್ಯಕ್ರಮಕ್ಕೆ ಮೊದಲು ಮಾತೆಯರಿಂದ ಹಸಿರು ಹೊರೆ ಕಾಣಿಕೆ ಮೆರವಣಿಗೆ ನಡೆದವು. ಮೂರು ದಿನಗಳ ಕಾಲ ಭಕ್ತರಿಗೆ ದಾನಿಗಳ ಸಹಕಾರದಿಂದ ಅನ್ನಸಂತರ್ಪಣೆ ನೆರವೇರಿತು.

ಕಾರ್ಯಕ್ರಮದಲ್ಲಿ ದೇವಾಲ ಯದ ಗೌರವ ಅಧ್ಯಕ್ಷ ನಿಡ್ಯಮಲೆ ಮಾಧವ, ಅಧ್ಯಕ್ಷ ಕೆ.ಎ. ನಾರಾಯಣ, ಉಪಾಧ್ಯಕ್ಷ ಕೆ.ಡಿ. ಬಾಲಕೃಷ್ಣ, ಕಾರ್ಯದರ್ಶಿ ಹೊದ್ದೆಟ್ಟಿ ತಾರೇಶ್, ಪ್ರಮುಖ ರಾದ ಕುಂಞಣ್ಣ ಆಚಾರಿ, ಅಮೆ ಜಗದೀಶ್, ದೇವರಾಜ ಕೆ.ಜೆ., ಜನಾರ್ದನ ಸೇರಿದಂತೆ ಇತರ ಪ್ರಮುಖರು, ಆಡಳಿತ ಮಂಡಳಿಯ ಸದಸ್ಯರು, ಗ್ರಾಮಸ್ಥರು, ಪರ ಊರಿನ ಭಕ್ತರು ಉಪಸ್ಥಿತರಿದ್ದರು.

ಈ ಸಂದರ್ಭ ಶೀಲಾವತಿ ಮತ್ತು ಮಕ್ಕಳು ಕೊಡುಗೆ ನೀಡಿದ ದೇವಳದ ಮಹಾದ್ವಾರದ ಲೋಕಾರ್ಪಣೆಯನ್ನು ತಂತ್ರಿಗಳಾದ ಶ್ರೀಪತಿ ಅರಳಿತ್ತಾಯ ಅವರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.