ಸುAಟಿಕೊಪ್ಪ, ಮೇ ೨೪: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾಫಿ ತೋಟಗಳು ಕಣ್ಮರೆಯಾಗಿ ಬಡಾವಣೆಗಳು ರೂಪುಗೊಳ್ಳುತ್ತಿದ್ದು ಅವೈಜ್ಞಾನಿಕವಾಗಿದೆ. ಬಡಾವಣೆಯ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶ ಗಳಲ್ಲಿ ಮನೆ ನಿರ್ಮಿಸಿರುವವರಿಗೆ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವ ಅತಂಕದೊAದಿಗೆ ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುವುದರೊಂದಿಗೆ ಕಲುಷಿತ ನೀರು ನುಗ್ಗುವ ಸಂಕಷ್ಟ ಎದುರಾಗಲಿದೆ.

ಅಭಿವೃದ್ಧಿ ಮತ್ತು ಪಟ್ಟಣ ಬೆಳೆಯುವುದರ ಜೊತೆಗೆ ವಾಣಿಜ್ಯ ಕಟ್ಟಡಗಳು ಪರಿವರ್ತನೆಗೊಂಡ ಹಾಗೂ ಪರಿವರ್ತನೆಗೊಳ್ಳದ ಕೃಷಿಭೂಮಿಯಲ್ಲಿ ಮತ್ತು ಕಾಫಿ ತೋಟಗಳಲ್ಲಿ ಬಡಾವಣೆಗಳು ತಲೆ ಎತ್ತುತ್ತಿದೆ. ಅನುಮತಿ ನೀಡುವಾಗ ಸ್ಥಳ ಪರಿಶೀಲನೆ ಮಾಡಿ ತಗ್ಗು ಪ್ರದೇಶ ಜೌಗುಪ್ರದೇಶ ರಾಜಕಾಲುವೆ ಚರಂಡಿ ಮತ್ತು ಇತರೆ ವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ನೀರಾಕ್ಷೇಪಣಾ ಪತ್ರವನ್ನು ನೀಡಬೇಕಾಗುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಜನಪ್ರತಿನಿಧಿಗಳು ಅಧಿಕಾರಿ ವರ್ಗ ಯಾವುದೋ ಅಮಿಷ ಮತ್ತು ಒತ್ತಡಗಳಿಗೆ ಬಲಿಯಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ಅವೈಜ್ಞಾನಿಕ ಕಟ್ಟಡ ಮತ್ತು ಬಡಾವಣೆಗಳ ನಿರ್ಮಾಣಕ್ಕೆ ಕಾರಣೀ ಭೂತರಾಗುತ್ತಿದ್ದಾರೆ.

ಈಗಾಗಲೇ ಜಿಲ್ಲೆಯ ಆನೇಕ ಕಡೆಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಕಾನೂನಿನ ಚೌಕಟ್ಟನ್ನು ಮೀರಿ ಬೆಟ್ಟಗುಡ್ಡ ಏರು ತಗ್ಗು ಪ್ರದೇಶವೆಂದು ಲೆಕ್ಕವಿಲ್ಲದೆ ಕಟ್ಟಡ ಮತ್ತು ಬಡಾವಣೆಗಳ ನಿರ್ಮಾಣ ನಡೆದಿದೆ. ಅನಾಹುತದ ಬಳಿಕ ಎಚ್ಚೆತುಕೊಂಡು ಪ್ರಯೋಜನವಿಲ್ಲ. ೨೦೧೮ರ ಮಹಾಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣಗಳು ತಿಳಿದಿದ್ದರೂ ಕೂಡ ಹೆಚ್ಚಿನ ಸಂದರ್ಭದಲ್ಲಿ ಕುರುಡು ಕಾಂಚಾಣ ಕುಣಿಯುವ ಹಿನ್ನೆಲೆಯಲ್ಲಿ ವೈಜ್ಞಾನಿಕ ಮತ್ತು ಕಾನೂನುಬದ್ಧ ಅನುಮತಿಗೆ ಬದಲಾಗಿ ಹೇಗೆ ಬೇಕಾದರೂ ಯಾರು ಬೇಕಾದರೂ ಏನು ಬೇಕಾದರೂ ಮಾಡಬಹುದು ಎನ್ನುವ ಪರಿಸ್ಥಿತಿ ನಿರ್ಮಾಣ ವಾಗಿರುವುದು ನಮ್ಮ ಕಣ್ಣು ಎದುರು ಇರುವ ಸತ್ಯವಾಗಿದೆ.

ಇದೀಗ ದಿನನಿತ್ಯ ಮಳೆ ಸುರಿಯುತ್ತಿದೆ ಕಳೆದ ೩ ದಿನಗಳಿಂದ ಭಾರೀ ಮಳೆಗೆ ತತ್ತರಿಸಿ ಹೋಗಿರುವ ಜನತೆ ಆದರಲ್ಲಿಯೂ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಹೆಚ್ಚಿನ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಸುಂಟಿಕೊಪ್ಪ ಪಟ್ಟಣದಲ್ಲಿ ಹೊಸದಾದ ಲೇಔಟ್ ಆಗುತ್ತಿದ್ದು, ಅಲ್ಲಿಂದ ಪಕ್ಕದ ಬಿಎಸ್‌ಎನ್‌ಎಲ್ ಕಚೇರಿಯ ಮುಂಭಾಗದಿAದ ಹರಿದು ಸುಂಟಿಕೊಪ್ಪ ಎರಡನೇ ವಿಭಾಗದ ಹತ್ತಾರು ಮನೆಗಳಿಗೆ ನೀರು ನುಗ್ಗಿದ್ದಲ್ಲದೆ ಮಸೀದಿ ಒಳಗೂ ನೀರು ನುಗ್ಗಿದೆ.

ಬಡ ಕಾರ್ಮಿಕ ವರ್ಗ ಮನೆ ಕಟ್ಟಿಕೊಂಡಿದ್ದು, ಮಳೆಗಾಲ ಪ್ರಾರಂಭವಾದAತೆ ಹೊಸದಾಗಿ ಪ್ರಾರಂಭವಾಗಿರುವ ಲೇಔಟ್‌ನಿಂದ ನಿರಂತರವಾಗಿ ಕಲುಷಿತ ನೀರು ಹರಿದು ಬರುತ್ತಿದ್ದು ಮನೆ ಒಳಗಿನ ಸಾಮಗ್ರಿಗಳು ಹಾನಿಯಾಗುತ್ತಿದೆ ಎಂದು ಈ ಭಾಗದ ನಿವಾಸಿಗಳು ಆರೋಪಿಸಿದ್ದಾರೆ. ಜೋತೆಗೆ ಮಳೆಯ ಅಬ್ಬರದಿಂದಾಗಿ ಪ್ರವಾಹದ ರೀತಿಯ ನೀರು ಬರುವುದರಿಂದ ಭಯದಿಂದಲೇ ಬದುಕು ಸಾಗಿಸುವ ಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಲೇಔಟ್ ನ ಮಾಲೀಕರು, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೂಡಲೇ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡ ಲತೀಫ್ ಈ ನಿವಾಸಿಗಳ ಪರವಾಗಿ ಮನವಿ ಮಾಡಿಕೊಂಡಿದ್ದಾರೆ.

ಪತ್ರಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಎಲ್ಲದಕ್ಕೂ ಅವೈಜ್ಞಾನಿಕವಾದ ಕೆಲಸ ಕಾರಣ ಎಂಬುದು ಕಂಡು ಬಂದಿತು. ಚರಂಡಿಗಳನ್ನು ನಿರ್ಮಿಸಿದ್ದು ಇದರಿಂದ ತಗ್ಗು ಪ್ರದೇಶದ ಜನವಸತಿಗೆ ಅತ್ಯಂತ ರಭಸವಾಗಿ ಮಳೆ ನೀರು ಬರುವ ಹಿನ್ನೆಲೆಯಲ್ಲಿ ಮನೆಗಳಿಗೆ ಆಗುವ ಹಾನಿಯ ಪ್ರಮಾಣ ಹೆಚ್ಚು ಎನ್ನುವುದು ಇಲ್ಲಿನ ನಿವಾಸಿಗಳ ಅಭಿಪ್ರಾಯವಾಗಿದೆ.