ಸೋಮವಾರಪೇಟೆ ,ಮೇ ೨೪ : ಬೇಸಿಗೆಯಲ್ಲಿ ಎಲ್ಲೆ ಮೀರಿದ್ದ ಕಾಡಾನೆ ಹಾವಳಿ ಮಳೆಯ ನಂತರ ಬಗೆಹರಿಯಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಆಶಾದಾಯಕ ಮಳೆಯಿಂದ ಹೊಳೆಗಳಲ್ಲಿ ನೀರಿನ ಪ್ರಮಾಣ ಕೊಂಚ ಹೆಚ್ಚಿದ್ದರೂ ಸಹ ಕಾಡಾನೆಗಳ ಹಾವಳಿಗೆ ಅಂಕೆಯಿಲ್ಲದಾಗಿದೆ.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಸಜ್ಜಳ್ಳಿ, ಯಡವಾರೆ, ಕೋವರ್‌ಕೊಲ್ಲಿ ಎಸ್ಟೇಟ್ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮತ್ತೆ ಕಂಡುಬAದಿದ್ದು, ಇಂದು ನಸುಕಿನ ಜಾವ ಸಜ್ಜಳ್ಳಿ ಹಾಡಿಗೆ ಆಗಮಿಸಿದ ಕಾಡಾನೆ ಮನಸೋಯಿಚ್ಛೆ ರಂಪಾಟ ಮಾಡಿವೆ.

ಮನೆಯ ಮುಂಭಾಗ ನಿಲ್ಲಿಸಿದ್ದ ಬೈಕ್‌ನ್ನು ಜಖಂಗೊಳಿಸಿ, ಆದಿವಾಸಿಗಳ ಟೆಂಟನ್ನು ಮುರಿದು ಹಾಕಿರುವ ಕಾಡಾನೆ, ನೀರು ಸಂಗ್ರಹಣೆಯ ಟ್ಯಾಂಕ್, ಪಾತ್ರೆಗಳನ್ನು ತುಳಿದು ಜಖಂಗೊಳಿಸಿವೆ. ಕಾಡಾನೆ ಆಗಮಿಸಿದ ಸಂದರ್ಭ ಟೆಂಟ್‌ನಿAದ ಓಡಿರುವ ಹಿನ್ನೆಲೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಜ್ಜಳ್ಳಿ ಹಾಡಿಯ ಜೆ.ಆರ್. ಕರಿಯಪ್ಪ ಅವರಿಗೆ ಸೇರಿದ ಶೆಡ್, ಜೆ.ಎ. ಶಾಮ್‌ಗೆ ಸೇರಿದ ಟ್ಯಾಂಕ್, ಜೆ.ಆರ್. ಶಿವು ಅವರಿಗೆ ಸೇರಿದ ಬೈಕ್‌ನ್ನು ಕಾಡಾನೆ ತುಳಿದು ನಷ್ಟಪಡಿಸಿದೆ. ಲಿಂಗಪ್ಪ ಎಂಬವರಿಗೆ ಸೇರಿದ ಹಂದಿ ಸಾಕಾಣಿಕೆ ದೊಡ್ಡಿಯ ಮೇಲೂ ದಾಳಿ ನಡೆಸಿದೆ. ಬೆಳಗ್ಗಿನ ಜಾವ ಶೆಡ್‌ನೊಳಗಿರುವ ಒಲೆಗೆ ಬೆಂಕಿ ಹಾಕುತ್ತಿದ್ದ ಸಂದರ್ಭ ಕಾಡಾನೆ ಆಗಮಿಸಿದ್ದು, ಈ ಸಂದರ್ಭ ಶಿವು ಅವರು ಶೆಡ್‌ನಿಂದ ಹೊರಗೆ ಓಡಿದ್ದಾರೆ. ಇದರಿಂದ ಸಿಟ್ಟುಗೊಂಡ ಕಾಡಾನೆ ಶೆಡ್‌ನ್ನು ಎಳೆದು ರಂಪಾಟ ನಡೆಸಿದೆ.

ಕಾಡಾನೆಗಳ ಹಾವಳಿಯು ಈ ಭಾಗದ ಸಾರ್ವಜನಿಕರಲ್ಲಿ ಭಯಾತಂಕ ಸೃಷ್ಟಿಸಿದೆ. ಕೋಟ್ಯಂತರ ರೂಪಾಯಿ ವ್ಯಯಿಸಿ ಅರಣ್ಯ ಇಲಾಖೆಯ ಮೂಲಕ ರೈಲ್ವೇ ಬ್ಯಾರಿಕೇಡ್, ಸೋಲಾರ್ ಬೇಲಿ, ಆನೆಕಂದಕ ನಿರ್ಮಿಸಿದ್ದರೂ ಯಾವುದೇ ಪ್ರಯೋಜನ ಇಲ್ಲವಾಗಿದೆ ಎಂದು ಯಡವಾರೆಯ ಕೃಷಿಕ ಮಚ್ಚಂಡ ಅಶೋಕ್ ಹೇಳಿದ್ದಾರೆ. ಕಳೆದ ತಿಂಗಳು ಈ ಭಾಗದಲ್ಲಿ ೧೦ಕ್ಕೂ ಅಧಿಕ ಆನೆಗಳು ಸಂಚರಿಸುತ್ತಿದ್ದವು. ಆಗಾಗ್ಗೆ ಜನರ ಮೇಲೆ, ವಾಹನಗಳ ಮೇಲೆ ದಾಳಿಯನ್ನೂ ನಡೆಸುತ್ತಿದ್ದವು. ಇದರೊಂದಿಗೆ ಕೃಷಿ ಪ್ರದೇಶಕ್ಕೆ ಲಗ್ಗೆಯಿಟ್ಟು ಹಾನಿಯುಂಟುಮಾಡುತ್ತಿದ್ದವು. ಮಳೆಯ ನಂತರ ಕಾಡಾನೆಗಳ ಕಾಟತಪ್ಪಿತು ಎನ್ನುವಷ್ಟರಲ್ಲಿ ಮತ್ತೆ ಆನೆ ಹಾವಳಿ ಕಂಡುಬAದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.

ಅರಣ್ಯದಿಂದ ಜನವಸತಿ ಪ್ರದೇಶಕ್ಕೆ ಬಾರದಂತೆ ತಡೆಗಟ್ಟಲು ರೈಲ್ವೇ ಬ್ಯಾರಿಕೇಡ್ ಹಾಕಲಾಗಿದೆ. ಆದರೆ ರೈಲ್ವೇ ಬ್ಯಾರಿಕೇಡ್‌ಗಳನ್ನೇ ಮುರಿದು ಆನೆಗಳು ಜನವಸತಿ ಹಾಗೂ ಕೃಷಿ ಪ್ರದೇಶಕ್ಕೆ ಬರುತ್ತಿವೆ. ಇದರಿಂದಾಗಿ ರೈಲ್ವೇ ಬ್ಯಾರಿಕೇಡ್ ಇದ್ದರೂ ನೆಮ್ಮದಿಯಿಲ್ಲದಂತಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ. ಇಂದು ನಸುಕಿನ ಜಾವ ಸಜ್ಜಳ್ಳಿ ಹಾಡಿಗೆ ಆಗಮಿಸಿ ಮನಸೋಯಿಚ್ಛೆ ದಾಳಿ ನಡೆಸಿರುವ ಕಾಡಾನೆಗಳನ್ನು ಅರಣ್ಯ ಇಲಾಖೆಯ ಕಾಡಾನೆ ಕಾರ್ಯಪಡೆಯ ಸಿಬ್ಬಂದಿಗಳು ಹರಸಾಹಸ ಪಟ್ಟು ಮತ್ತೆ ಅರಣ್ಯಕ್ಕೆ ಅಟ್ಟಿದ್ದಾರೆ.

ಈ ಭಾಗದಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅರಣ್ಯ ಇಲಾಖೆ ಈವರೆಗೆ ವಿಫಲವಾಗಿವೆ. ಜನ ಸಾಮಾನ್ಯರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಜೀವನ ಸಾಗಿಸುವಂತಾಗಿದೆ. ಕಾಡಾನೆಗಳ ಉಪಟಳ ತಡೆಗೆ ಶಾಶ್ವತ ಪರಿಹಾರ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.