ಮಡಿಕೇರಿ, ಮೇ ೨೪: ಕಾಡಾನೆಗಳ ನಡುವಿನ ಕಾದಾಟ ಹಾಗೂ ಅನಾರೋಗ್ಯದಿಂದಾಗಿ ಪ್ರತ್ಯೇಕ ಪ್ರಕರಣದಲ್ಲಿ ಎರಡು ಕಾಡಾನೆಗಳು ಸಾವನ್ನಪ್ಪಿವೆ.

ಕರಿಕೆ: ಮಡಿಕೇರಿ ವನ್ಯಜೀವಿ ಉಪವಿಭಾಗದ ತಲಕಾವೇರಿ ವಲಯದ ತಲಕಾವೇರಿ ಅಭಯಾರಣ್ಯದೊಳಗೆ ಗಂಡು ಕಾಡಾನೆಯೊಂದು ಮೃತ ಪಟ್ಟಿದೆ. ತಲಕಾವೇರಿ ಬೆಟ್ಟದ ಬನ್ನೇರುಪಟ್ಟಿ ಕೆರೆ ಬಳಿಯ ಇಳಿಜಾರು ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಗಳು ಆನೆ ಗಣತಿ ನಡೆಸುವ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸಂದರ್ಭದಲ್ಲಿ ಬೃಹತ್ ದಂತದ ಮೃತ ಗಂಡು ಕಾಡಾನೆಯ ಕಳೇಬರ ಪತ್ತೆಯಾಗಿದೆ. ಸುತ್ತಮುತ್ತಲಿನ ಪ್ರದೇಶದ ಮಣ್ಣಿನ ಮೇಲ್ಮೆöÊ ಕಿತ್ತು ಹೋಗಿದ್ದು, ಮೇಲ್ನೋಟಕ್ಕೆ ಕಾದಾಟದಲ್ಲಿ ಮೃತಪಟ್ಟಿರುವ ಶಂಕೆ ಇದ್ದು, ಮರಣೋತ್ತರ ಪರೀಕ್ಷೆ ನಡೆಸಿ ,ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ವನ್ಯಜೀವಿ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಭಾಸ್ಕರ್, ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಶ್ರೀನಿವಾಸ ನಾಯಕ್, ವಲಯ ಅರಣ್ಯ ಅಧಿಕಾರಿ ಕೆ. ಕೊಟ್ರೇಶ್, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಸಿದ್ದಾಪುರ: ಕಾಫಿ ತೋಟದೊಳಗೆ ಕಾಡಾನೆ ಸಾವನ್ನಪ್ಪಿರುವ ಘಟನೆ ತ್ಯಾಗತ್ತೂರು ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ತ್ಯಾಗತ್ತೂರು ಗ್ರಾಮದ ನಿವಾಸಿ ಎಂ.ಕೆ. ಗಿರೀಶ ಎಂಬವರ ಕಾಫಿ ತೋಟದಲ್ಲಿ ಕಾಡಾನೆ ಸಾವನ್ನಪ್ಪಿದೆ. ಅಂದಾಜು ೨೦ ವರುಷ ಪ್ರಾಯದ ಗಂಡಾನೆ ಮೃತಪಟ್ಟಿದ್ದು, ಕಾರ್ಮಿಕರು ಕಾಫಿ ತೋಟದೊಳಗೆ ಕೆಲಸಕ್ಕೆ ತೆರಳುವ ಸಂದರ್ಭ ಸಾವನ್ನಪ್ಪಿರುವ ಕಾಡಾನೆ ದುರ್ನಾತ ಬೀರುತ್ತಿರುವುದರಿಂದ ತೋಟದ ಮಾಲೀಕ ಗಿರೀಶ್‌ಗೆ ತಿಳಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಕಳೆದ ಒಂದು ವಾರದ ಹಿಂದೆ ಅನಾರೋಗ್ಯದಿಂದಾಗಿ ಸಾವನ್ನಪ್ಪಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವನ್ಯಜೀವಿ ಅರಣ್ಯ ಅಧಿಕಾರಿ ಡಾ. ಚಿಟ್ಟಿಯಪ್ಪ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ತ್ಯಾಗತ್ತೂರು ಗ್ರಾಮದಲ್ಲಿ ಗುಂಡಿ ತೆಗೆದು ಹೂತು ಹಾಕಲಾಯಿತು. ಸ್ಥಳಕ್ಕೆ ಮಡಿಕೇರಿ ಡಿಸಿಎಫ್ ಶಂಕರ್, ಸೋಮವಾರಪೇಟೆ ತಾಲೂಕು ಎಸಿಎಫ್ ಎ.ಎ. ಗೋಪಾಲ್, ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್, ಉಪವಲಯ ಅರಣ್ಯ ಅಧಿಕಾರಿ ಸುಬ್ರಾಯ, ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.