*ಸಿದ್ದಾಪುರ ಮೇ ೨೪: ಅಪರೂಪಕ್ಕೊಮ್ಮೆ ಸಾಕಾನೆಯನ್ನು ಕಂಡರೆ ಮಕ್ಕಳು ಅದನ್ನು ಹಿಂಬಾಲಿಸಿ ಸಂತಸ ಪಡುವ ಕಾಲವೊಂದಿತ್ತು. ಕೇವಲ ಕಾಡಾನೆಗಳ ಹೆಜ್ಜೆ ಗುರುತು ಕಂಡರೆ ದೊಡ್ಡವರು ಆತಂಕ ವ್ಯಕ್ತಪಡುವ ಸಂದರ್ಭ ಹಿಂದೆ ಇತ್ತು. ಆದರೆ ಇಂದು ಕಾಡಾನೆಗಳ ಹಿಂಡೇ ಊರು ಊರುಗಳಲ್ಲಿ ಇದೆ, ಇದನ್ನು ಕಂಡು ಮಕ್ಕಳು ಮಾತ್ರವಲ್ಲ ದೊಡ್ಡವರೂ ಓಡಿ ಹೋಗುವ ಆತಂಕದ ಪರಿಸ್ಥಿತಿ ಉದ್ಭವಿಸಿದೆ.

ಕಾಡಾನೆಗಳ ಉಪಟಳದ ಅತಿರೇಕಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷö್ಯ ಮತ್ತು ಅರಣ್ಯ ಇಲಾಖೆಯ ನಿಷ್ಪçಯೋಜಕ ಯೋಜನೆಗಳೇ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಹಸಿರನಾಡು ಕೊಡಗು ಜಿಲ್ಲೆಯ ಜನ ಇಲ್ಲಿಯವರೆಗೆ ಕಂಡು ಕೇಳರಿಯದಷ್ಟು ಸಂಖ್ಯೆಯ ಕಾಡಾನೆಗಳ ದರ್ಶನವನ್ನು ಪ್ರಸ್ತುತ ವರ್ಷ ಮಾಡಿ ಬಿಟ್ಟಿದ್ದಾರೆ. ಹಸುಗಳು ತೋಟಗಳಿಗೆ ನುಗ್ಗುವ ಕಾಲವೊಂದಿತ್ತು, ಆದರೆ ಇಂದು ದೈತ್ಯ ಕಾಡಾನೆಗಳು ಹಸುಗಳಿಗಿಂತ ದೊಡ್ಡ ಸಂಖ್ಯೆಯಲ್ಲಿ ತೋಟಗಳ ನಾಶದಲ್ಲಿ ತೊಡಗಿವೆ. ಬೆಳೆಗಾರರು ಹಾಗೂ ರೈತರು ಅಸಹಾಯಕರಾಗಿದ್ದಾರೆ, ಹತಾಶರಾಗಿದ್ದಾರೆ.

ಕಾಡಾನೆಗಳು ಮನುಷ್ಯರ ಮೇಲಿನ ದಾಳಿಯನ್ನು ಮುಂದುವರೆಸಿವೆ. ಅರಣ್ಯ ಇಲಾಖೆ ಪರಿಹಾರದ ಚೆಕ್ ನೀಡಿ ಕೈತೊಳೆದುಕೊಳ್ಳುತ್ತಿದೆಯೇ ಹೊರತು ನಾಳಿನ ಅಪಾಯದ ಬಗ್ಗೆ ಅದಕ್ಕೆ ಚಿಂತೆ ಇಲ್ಲದಾಗಿದೆ. "ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯನ್ನು ಶಾಶ್ವತವಾಗಿ ತಡೆಯಲು ಉನ್ನತ ಮಟ್ಟದ ತಜ್ಞರ ವರದಿ ತರಿಸಿಕೊಂಡು ಆನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಬಿ.ಖಂಡ್ರೆ ಅವರು ೨೦೨೩ ಆಗಸ್ಟ್ ತಿಂಗಳಿನಲ್ಲಿ ಕೊಡಗಿಗೆ ಬಂದಿದ್ದಾಗ ಹೇಳಿದ್ದರು. ಆದರೆ ಅವರ ಮಾತು ಇಲ್ಲಿಯವರೆಗೆ ಸತ್ಯವಾಗಿಲ್ಲ. ತಾವು ನೀಡಿದ ಭರವಸೆಯ ಬಗ್ಗೆ ಚಿಂತಿಸದೆ ತೋಟಗಳಲ್ಲಿರುವ ಮರಗಳ ಸರ್ವೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಬಳಕೆಯಾಗುತ್ತಿರುವ ವನ್ಯಜೀವಿಗಳ ವಸ್ತುಗಳ ಸ್ವಾಧೀನದ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ.

ಕಳೆದ ನಾಲ್ಕು ತಿಂಗಳಿನಲ್ಲಿ ಜಿಲ್ಲೆಯಲ್ಲಿ ಕಾಡಾನೆಗಳು ಮಾಡಿದ ದಾಳಿಯಿಂದ ಅನೇಕ ಮಾನವ ಜೀವಗಳು ಮರೆಯಾಗಿವೆ ಮತ್ತು ಕೃಷಿ ಫಸಲುಗಳು ನಾಶವಾಗಿವೆ. ಗ್ರಾಮೀಣ ಭಾಗದಲ್ಲಿ ವನ್ಯಜೀವಿಗಳು ನಿತ್ಯ ಆತಂಕವನ್ನು ಸೃಷ್ಟಿಸುತ್ತಿವೆ. ಹಾಡಹಗಲೇ ಮುಖ್ಯ ರಸ್ತೆಗಳಲ್ಲಿ ಸಂಚರಿಸುತ್ತಿರುವ ಕಾಡಾನೆಗಳು ಜೀವ ಭಯ ಮೂಡಿಸುತ್ತಿವೆ. ಇಷ್ಟು ದಿನ ಹೇಗೋ ನಡೆದು ಹೋಗಿದೆ, ಆದರೆ ಮೇ ತಿಂಗಳ ಕೊನೆಯ ವಾರದಿಂದ ಶಾಲೆಗಳು ಆರಂಭಗೊಳ್ಳುತ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ ಎನ್ನುವ ಆತಂಕ ಪೋಷಕರನ್ನು ಈಗಿನಿಂದಲೇ ಕಾಡುತ್ತಿದೆ.

ಜಿಲ್ಲಾವ್ಯಾಪಿ ಕಾಡಾನೆಗಳ ಆತಂಕ ಆವರಿಸಿದ್ದರೂ ಅರಣ್ಯ ಇಲಾಖೆ ಮಾತ್ರ ನಿಶ್ಚಿಂತೆಯಿAದ ನಿದ್ರಾವಸ್ಥೆಯಲ್ಲಿದೆ. ತೋಟಗಳಲ್ಲಿರುವ ಮರಗಳ ಸರ್ವೆ ಕಾರ್ಯವೇ ದೊಡ್ಡದು ಎಂದು ತಲ್ಲೀನವಾಗಿದೆ. ಕಾಡಾನೆಗಳನ್ನು ಕಾಡಿಗಟ್ಟಿದಂತೆ ಮಾಡುವುದು, ಪಟಾಕಿ ಸಿಡಿಸುವುದು, ಮಾನವ ಜೀವಹಾನಿಯಾದಾಗ ಚೆಕ್ ವಿತರಿಸುವುದು, ಜನ ಗಲಾಟೆ ಮಾಡಿದಾಗ ತಾತ್ಕಾಲಿಕ ಭರವಸೆ ನೀಡುವುದಷ್ಟೇ ಇಲಾಖೆಯ ಕೆಲಸವೆಂದು ಅಧಿಕಾರಿಗಳು ತಿಳಿದಂತಿದೆ. ಮುಂದಾಲೋಚನೆಯ ಯಾವುದೇ ಯೋಜನೆಗಳು ಸಾಕಾರಗೊಳ್ಳುತ್ತಿಲ್ಲ. ಪ್ರತಿಯೊಂದು ವಿಭಾಗಕ್ಕೂ ಅರಣ್ಯ ಅಧಿಕಾರಿಗಳಿದ್ದಾರೆ. ಆದರೆ ಕಾಡಿನಲ್ಲಿರಬೇಕಾದ ಕಾಡಾನೆಗಳು ಯಾಕೆ ನಾಡಿಗೆ ಬರುತ್ತಿವೆ, ಅವುಗಳಿಗೆ ಆಹಾರ ಮತ್ತು ನೀರಿನ ಕೊರತೆ ಇದೆಯೇ ಎನ್ನುವ ಬಗ್ಗೆ ಅಧಿಕಾರಿಗಳಿಗೆ ಚಿಂತನೆ ಇಲ್ಲದಾಗಿದೆ.

ಬಡತನದ ಹಸಿವಿನಿಂದ ಮನುಷ್ಯ ಸಾಯಬಾರದು ಎನ್ನುವ ನಿಯಮವನ್ನು ಮನುಷ್ಯರೇ ಮಾಡಿಕೊಂಡಿದ್ದಾರೆ. ಮೂಕ ವನ್ಯಜೀವಿಗಳಿಗೆ ಈ ನಿಯಮ ಪಾಲನೆಯಾಗದೆ ಇರುವುದು ಮಾತ್ರ ವಿಪರ್ಯಾಸ. ಆನೆಗಳ ಆಹಾರದಲ್ಲಿ ಅರ್ಧಭಾಗದಷ್ಟು ಹುಲ್ಲು, ಉಳಿದಂತೆ ಎಲೆ, ಚಿಗುರು, ಬೇರುಗಳು, ಸ್ವಲ್ಪ ಪ್ರಮಾಣದಲ್ಲಿ ಹಣ್ಣುಗಳು, ಬೀಜಗಳು ಮತ್ತು ಹೂವುಗಳು ಇರುತ್ತವೆ. ತಾನು ತಿಂದ ಆಹಾರದಲ್ಲಿ ಶೇ.೪೦ ಭಾಗದಷ್ಟನ್ನು ಮಾತ್ರ ಜೀರ್ಣಿಸಿಕೊಳ್ಳಬಹುದಾದ ಶಕ್ತಿ ಆನೆಗಳಿಗಿರುವುದರಿಂದ ದೊಡ್ಡ ಪ್ರಮಾಣದಲ್ಲಿ ತಿನ್ನಲೇಬೇಕಾಗುತ್ತದೆ. ಆನೆ ದಿನಕ್ಕೆ ಏನಿಲ್ಲವೆಂದರೂ ೨೭೦-೩೦೦ ಕೆ.ಜಿ ಮೇವು ತಿನ್ನುತ್ತದೆ. ೭೫-೧೫೦ ಲೀಟರ್ ನೀರು ಕುಡಿಯುತ್ತದೆ.

ಆನೆಗಳು ದೈತ್ಯ ಜೀವಿಗಳಾಗಿದ್ದು, ಕೇವಲ ೪ ತಾಸು ಮಾತ್ರ ನಿದ್ರಿಸುತ್ತವೆ. ಇನ್ನುಳಿದ ೨೦ ತಾಸು ತಿನ್ನುವುದರಲ್ಲಿ, ಆಹಾರ ಹುಡುಕುವುದರಲ್ಲಿ ಮಗ್ನವಾಗಿ ರುತ್ತವೆ. ಆನೆ ಒಂದು ಅರಣ್ಯ ಪ್ರದೇಶದಲ್ಲಿ ಇದೆ ಎಂದರೇ ಅದಕ್ಕೆ ಬೇಕಾದ ಸಮೃದ್ಧ ಆಹಾರ, ಸಾಕಾಗುವಷ್ಟು ನೀರು ಸಿಗುತ್ತಿದೆ ಎಂದು ಅರ್ಥ. ಆನೆ ಗಂಟೆಗೆ ೪೦ ಕಿ.ಮೀ ವೇಗದಲ್ಲಿ ಓಡಬಲ್ಲದು. ಮತ್ತೊಂದು ಆನೆಯ ಘೀಳಿನ ಶಬ್ದವನ್ನು ಇನ್ನೊಂದು ಆನೆ ೧೦ ಕಿ.ಮೀ. ದೂರದಲ್ಲಿದ್ದರೂ ಗ್ರಹಿಸಬಲ್ಲದು. ಬೀಜ ಪ್ರಸಾರದ ಕಾರ್ಯದಲ್ಲೂ ಪರಿಸರಕ್ಕೆ ಆನೆ ಬಹುಮುಖ್ಯ ಪ್ರಾಣಿಯಾಗಿದೆ. ಪರಿಸರ ಸ್ನೇಹಿ ಪ್ರಾಣಿಯಾಗಿರುವ ಆನೆಯ ಬೇಕು ಬೇಡಿಕೆಗಳನ್ನು ಅವುಗಳ ಮಾತೃ ಸ್ಥಾನದಲ್ಲಿರುವ ಅರಣ್ಯ ಇಲಾಖೆ ಮರೆತಂತಿದೆ. ಅರಣ್ಯದಲ್ಲಿ ಸಮೃದ್ಧ ಆಹಾರ, ಸಾಕಾಗುವಷ್ಟು ನೀರು ಸಿಗದೆ ಇರುವುದರಿಂದಲೇ ಇಂದು ಅಸಂಖ್ಯಾತ ಕಾಡಾನೆಗಳು ಊರಿನೊಳಗೆ ಬಂದು ಸೇರಿಕೊಂಡಿವೆ. ಇವುಗಳಿಂದ ಮನುಷ್ಯ ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದಾನೆ.

-ಅಂಚೆಮನೆ ಸುಧಿ