ಕೂಡಿಗೆ, ಮೇ ೨೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವತ್ತೂರು ಮತ್ತು ಕೂಡುಮಂಗಳೂರು ಬೆಟ್ಟದ ನೀರು ಸಮರ್ಪಕವಾಗಿ ನದಿಗೆ ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಸಮೀಪದ ಜಮೀನಿಗೆ ನುಗ್ಗಿದ ಪರಿಣಾಮವಾಗಿ ಬೆಳೆ ನಷ್ಟ ಉಂಟಾಗಿದೆ.

ಕೂಡುಮಂಗಳೂರು ಬೆಟ್ಟದ ಕಡೆಯಿಂದ ಬಂದ ರಭಸದ ನೀರು ಚರಂಡಿ ವ್ಯವಸ್ಥೆ ಇಲ್ಲದೆ ಇರುವ ಕಾರಣದಿಂದಾಗಿ ಸಮೀಪದ ಮನೆಗಳಿಗೆ ಮತ್ತು ಮಂಜುನಾಥ, ಸಣ್ಣಪ್ಪ, ನಟೇಶ್ ಎಂಬವರಿಗೆ ಸೇರಿದ ೩ ಎಕರೆಗಳಷ್ಟು ಪ್ರದೇಶದಲ್ಲಿ ಅರೆ ಬೇಸಾಯದ ಬೆಳೆಯಾದ ಮೆಕ್ಕೆಜೋಳದ ಜಮೀನಿಗೆ ನುಗ್ಗಿ ಅಪಾರ ಬೆಳೆ ನಷ್ಟಗೊಂಡಿದೆ. ಈಗಾಗಲೇ ತೆನೆ ಕಟ್ಟುವ ಹಂತದಲ್ಲಿದ್ದು ನೀರಿನ ರಭಸಕ್ಕೆ ಮುರಿದು ಬಿದ್ದಿದೆ. ಅಲ್ಲದೆ ಮೂರು ಎಕರೆಗಳಷ್ಟು ಪ್ರದೇಶದಲ್ಲಿ ಮಳೆ ನೀರು ನಿಂತಿದೆ. ಸಂಬAಧಿಸಿದ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡುವಂತೆ ಈ ಭಾಗದ ರೈತರು ಒತ್ತಾಯಿಸಿದ್ದಾರೆ.