ಮಡಿಕೇರಿ, ಮೇ ೨೫: ಚಿಂತಕರ ಚಾವಡಿಯಾಗಿರುವ ಮೇಲ್ಮನೆಯ ಪ್ರತಿನಿಧಿಯಾಗಲು ಅವಕಾಶ ದೊರೆತರೆ ಜನರ ಧ್ವನಿಯಾಗಿ ಕೆಲಸ ಮಾಡುವುದಲ್ಲದೆ, ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಅಭ್ಯರ್ಥಿ ಹೇಗಿರಬೇಕೆಂಬ? ಚೌಕಟ್ಟನ್ನು ಸೃಷ್ಟಿ ಮಾಡುವೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಸ್ವಾತಂತ್ರö್ಯ ಅಭ್ಯರ್ಥಿಯಾಗಿರುವ ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದರು.

‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜಕಾರಣ ತನ್ನ ಆಸಕ್ತಿಕರ ಕ್ಷೇತ್ರವಾಗಿದೆ. ಶಾಸಕನಾಗಿ ಮೂರು ಬಾರಿ ಜನರ ನಿರೀಕ್ಷೆಗೆ ತಕ್ಕ ಕೆಲಸ ಮಾಡಿದ ತೃಪ್ತಿ ಹೊಂದಿದ್ದೇನೆ. ರಾಷ್ಟçದಲ್ಲಿ ಯಾವೊಬ್ಬ ಶಾಸಕನೂ ಮಾಡದ ಕೆಲಸವನ್ನು ಮಾಡಿ ತೋರಿಸಿದ್ದೇನೆ. ೧,೫೦೦ ಎಕರೆ ಬರಡು ಕೃಷಿ ಭೂಮಿಯನ್ನು ಪುನಶ್ಚೇತನಗೊಳಿಸಿ ಫಸಲು ತೆಗೆಯುವಲ್ಲಿ ಯಶಸ್ವಿಯಾಗಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಕೆಲಸ ಮಾಡಿದ್ದೇನೆ. ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಉಚಿತ ಯಕ್ಷಗಾನ ತರಬೇತಿ ಮೂಲಕ ಸಂಸ್ಕೃತಿಯನ್ನು ಜೀವಂತವಾಗಿಡುವ ಕೆಲಸ, ಸಾಧಕ ಶಿಕ್ಷಕ ಪ್ರಶಸ್ತಿ ನೀಡುವ ಮೂಲಕ ಶಿಕ್ಷಕರನ್ನು ಪ್ರೇರೇಪಿಸುವ ಕಾರ್ಯ, ಉಡುಪಿಯ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯದಲ್ಲಿ ಪ್ರಥಮ ಎಂಬAತೆ ಸ್ನಾತಕೋತ್ತರ ಪದವಿ ಕಾಲೇಜು ಆರಂಭಿಸಿದ್ದೇನೆ. ಶಾಸಕನಾಗಿದ್ದ ಸಮಯದಲ್ಲಿ ಉಡುಪಿಯ ಸರ್ವಾಂಗೀಣ ಅಭಿವೃದ್ಧಿ ಮಾಡಿ ಮಾದರಿ ಕ್ಷೇತ್ರವಾಗಿ ರೂಪಿಸಿದ್ದೇನೆ ಎಂದರು.

ಒಳ್ಳೆಯ ಅವಕಾಶ ಸಿಕ್ಕಿದೆ

ಬದಲಾದ ರಾಜಕೀಯ ಸನ್ನಿವೇಶಗಳಿಂದ ಕೊನೆ ಘಳಿಗೆಯಲ್ಲಿ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೈ ತಪ್ಪಿತು. ಬಿಜೆಪಿ ಪಕ್ಷದೊಳಗೆ ಕೆಲವೊಬ್ಬರ ಪ್ರಾಬಲ್ಯದಿಂದ ನೈಜ ಕಾರ್ಯಕರ್ತರ ಕಡೆಗಣನೆ ಆಗುತ್ತಿದೆ. ಇದನ್ನು ಬದಲಾವಣೆ ಮಾಡುವ ಉದ್ದೇಶದಿಂದ ತಾನು ಸ್ಪರ್ಧೆಗಿಳಿದಿದ್ದೇನೆ. ಹೊರತು ಅಧಿಕಾರ ದಾಹವಾಗಲಿ, ವೈಯಕ್ತಿಕ ಬೆಳವಣಿಗೆ ಸಾಧಿಸುವ ತವಕವಿಲ್ಲ ಎಂದು ರಘುಪತಿ ಭಟ್ ನೇರವಾಗಿ ಹೇಳಿದರು.

ಮೂರು ಬಾರಿ ಟಿಕೆಟ್ ತಪ್ಪಿದಾಗಲೂ ತಾನು ಸುಮ್ಮನಿದ್ದು, ಪಕ್ಷದ ಪರ ಕೆಲಸ ಮಾಡಿದ್ದೆ. ಈ ಚುನಾವಣೆಯಲ್ಲಿ ಒಬ್ಬ ನಿಷ್ಠಾವಂತ ಕಾರ್ಯಕರ್ತನಿಗೆ ಅವಕಾಶ ನೀಡಿದ್ದರೂ ತಾನು ಸ್ಪರ್ಧೆ ಮಾಡುತ್ತಿರಲಿಲ್ಲ. ಆದರೆ, ಇತ್ತೀಚಿಗೆ ಪಕ್ಷಕ್ಕೆ ಬಂದ ವ್ಯಕ್ತಿಗೆ ಟಿಕೆಟ್ ನೀಡಿರುವುದು ಸರಿಯಲ್ಲ. ಈ ಹಿಂದಿನಿAದಲೂ ಪದವೀಧರ ಕ್ಷೇತ್ರ ಅಭ್ಯರ್ಥಿ ಸ್ಥಾನ ತನಗೆ ದೊರೆಯುತ್ತದೆ ಎಂಬ ನಂಬಿಕೆ ಕಾರ್ಯಕರ್ತರಲ್ಲಿತ್ತು. ಇದೀಗ ಪರಿಸ್ಥಿತಿ ಬದಲಾಗಿದೆ. ಪಕ್ಷದೊಳಗೆ ಲೋಪದೋಷ ಸರಿ ಮಾಡಲು ಒಳ್ಳೆಯ ಅವಕಾಶ ತನಗೆ ದೊರಕಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವೆ. ತಾನು ಸ್ವಾತಂತ್ರö್ಯವಾಗಿ ಸ್ಪರ್ಧೆಯಿಂದ ಪಕ್ಷ ಪಾಠ ಕಲಿಯುತ್ತದೆ. ಅತ್ಯಂತ ಶಿಸ್ತಿನ ಪಕ್ಷದಲ್ಲಿ ಕೆಲವರ ಪ್ರಾಬಲ್ಯದಿಂದ ಈ ರೀತಿ ‘ರೆಬೆಲ್’ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಇದರ ಬದಲಾವಣೆಯಾಗಬೇಕಾದರೆ ಪಕ್ಷಾಂತರ ಅಥವಾ ತಟಸ್ಥ ನಿಲುವಿನಿಂದ ಸಾಧ್ಯವಾಗಲಾರದು ಎಂದು ವಿಶ್ಲೇಷಿಸಿದರು.

ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿಯೇ ತಾನು ಸ್ಪರ್ಧೆ ಮಾಡುತ್ತಿದ್ದು, ತನ್ನ ಸ್ಪರ್ಧೆಯಿಂದ ಬೇರೆ ಅಭ್ಯರ್ಥಿಗಳಿಗೆ ಪರೋಕ್ಷ ಸಹಾಯವಾಗುತ್ತದೆ ಎಂಬ ವಾದ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಈ ಚುನಾವಣೆ ಯಾವ ಪಕ್ಷದ ಚಿಹ್ನೆಯಡಿ ನಡೆಯುವುದಿಲ್ಲ. ಇದರಿಂದ ಸರಕಾರದ ರಚನೆಯೂ ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಸ್ವಾತಂತ್ರö್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಯಾರನ್ನೋ ಸೋಲಿಸುವ ಉದ್ದೇಶದಿಂದ ತಾನು ಕಣದಲ್ಲಿಲ್ಲ. ನಾನು ಗೆಲ್ಲಬೇಕೆಂಬ ಹಠದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಗೆದ್ದ ನಂತರ ತನ್ನ ಬೆಂಬಲ ಬಿಜೆಪಿಗೆ ಇರಲಿದೆ ಎಂದು ಹೇಳಿದರು.

ಮಾದರಿ ಪ್ರತಿನಿಧಿಯಾಗುವೆ

ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಕಾರಣಕ್ಕೆ ಶಾಸಕನಿಂದ, ಎಂಎಲ್‌ಸಿಗೆ ಆಗುವ ‘ಡಿಮೋಷನ್’ ಅಲ್ಲ. ಬದಲಾಗಿ ಕಾನೂನು ರೂಪುಗೊಳ್ಳುವ ಪ್ರಬಲ ಸ್ಥಾನದಲ್ಲಿರುವ ದೊಡ್ಡ ಅವಕಾಶವೆಂದು ರಘುಪತಿ ನುಡಿದರು.

ಇದು ‘ಆಟಕ್ಕುಂಟು ಲೆಕ್ಕಕಿಲ್ಲ’ ಎಂಬ ಸ್ಥಾನವಲ್ಲ. ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪ ಮಾಡಲು ದೊರೆತ ಸೌಭಾಗ್ಯ. ನೇರವಾಗಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ದೊರೆಯದಿದ್ದರೂ ಇಲಾಖೆಗಳ ಸಂಪರ್ಕ ಸಾಧಿಸಿ ಜನಪರ ಕೆಲಸ ಮಾಡುವ ವಿಪುಲ ಅವಕಾಶಗಳಿವೆ. ಅದನ್ನು ಪ್ರತಿನಿಧಿ ಸದ್ಬಳಕೆ ಮಾಡಿಕೊಳ್ಳಬೇಕು. ಈ ಹಿಂದಿನ ಎಂಎಲ್‌ಸಿಗಳು ಗೆದ್ದ ನಂತರ ಕಣ್ಣಿಗೆ ಕಂಡಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಕೆಲಸಗಳೂ ಆಗಿಲ್ಲ. ತಾನು ಆ ರೀತಿ ಅಲ್ಲ. ಜನರ ಧ್ವನಿಯಾಗಿ, ಕಾರ್ಯಕರ್ತರ ಬೆನ್ನೆಲುಬಾಗಿರುವೆ. ಪದವೀಧರರ ಸಮಸ್ಯೆಗಳಿಗೆ ಮಿಡಿಯುವೆ. ತ್ವರಿತ ಸ್ಪಂದನ ಮೂಲಕ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಿರುಪಯುಕ್ತ ಶಾಸಕನಾಗದೆ ಅತ್ಯಂತ ಕ್ರಿಯಾಶೀಲನಾಗಿ ದುಡಿಯುವೆ. ಇದು ಪಕ್ಷದ ನಡುವಿನ ಚುನಾವಣೆಯಲ್ಲ. ವ್ಯಕ್ತಿಗಳ ಸಾಧನೆ ಆಧಾರಿತ ಚುನಾವಣೆಯಾಗಿದೆ ಎಂದು ಹೇಳಿದ ಅವರು, ಕೊಡಗಿನ ಸಮಸ್ಯೆ ಬಗ್ಗೆ ತನಗೆ ಅಷ್ಟು ಅರಿವಿಲ್ಲ. ಮುಂದಿನ ದಿನಗಳಲ್ಲಿ ಅಧ್ಯಯನ ನಡೆಸಿ ತಿಳಿದುಕೊಳ್ಳುವೆ. ಪದವೀಧರರು ತನನ್ನು ಬೆಂಬಲಿಸಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಗ್ರಾö್ಯಜ್ಯುಯೆಟ್ಸ್ ನೆಟ್‌ವರ್ಕ್

ನೈಋತ್ಯ ಕ್ಷೇತ್ರದಲ್ಲಿ ೨೦ ಲಕ್ಷಕ್ಕೂ ಹೆಚ್ಚು ಪದವೀಧರರಿದ್ದಾರೆ. ಆದರೆ, ಚುನಾವಣೆ ಮತದಾರರಾಗಿ ನೋಂದಾಣಿ ಮಾಡಿಕೊಂಡವರು ೧.೮೫ ಲಕ್ಷ ಅಷ್ಟೆ. ಮುಂದಿನ ದಿನಗಳಲ್ಲಿ ‘ಗ್ರಾö್ಯಜ್ಯುಯೆಟ್ಸ್ ನೆಟ್‌ವರ್ಕ್’ (ಪದವೀಧರರ ಜಾಲ) ಸೃಷ್ಟಿಸಿ ಪರಸ್ಪರ ಸಂಪರ್ಕ ಕಲ್ಪಿಸುವ ಕೆಲಸ ಮಾಡುವೆ ಎಂದು ರಘುಪತಿ ತಮ್ಮ ಚಿಂತನೆ ಬಗ್ಗೆ ತಿಳಿಸಿದರು.

ಈ ಮೂಲಕ ಪರಸ್ಪರ ಪರಿಚಯವಾಗಿ ಉದ್ಯೋಗ ವಂಚಿತರು ಉದ್ಯೋಗ ಪಡೆಯಲು ಅಥವಾ ವೃತ್ತಿಯ ಕುರಿತು ಸಲಹೆ ಪಡೆಯಲು ವೇದಿಕೆಯಂತಾಗುತ್ತದೆ ಎಂದ ಅವರು, ಪ್ರತಿ ೬ ವರ್ಷಕ್ಕೊಮ್ಮೆ ನೋಂದಣಿ ಮತದಾರರರು ಮತ್ತೊಮ್ಮೆ ನೋಂದಣಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಈ ನಿಯಮ ಬದಲಾವಣೆ ಆಗಬೇಕು. ಒಮ್ಮೆ ಪದವೀಧರ ಆದವರು ಸಾಯುವ ತನಕವೂ ಪದವೀಧರರೇ. ಈ ಕಾರಣಕ್ಕಾಗಿ ಹೊಸ ಮತದಾರರನ್ನು ಮಾತ್ರ ನೋಂದಾಯಿಸಿಕೊAಡು ಹಳೇ ಪದವೀಧರ ಮತದಾರರನ್ನು ಪಟ್ಟಿಯಲ್ಲಿ ಮುಂದುವರೆಸಬೇಕು. ಈ ಸಮಸ್ಯೆ ನಿವಾರಣೆಗೆ ಮುಂದಾಗಲಾಗುವುದು ಎಂದರು.

ಪದವೀಧರರು ಸರಕಾರಿ ಹುದ್ದೆಗಳಲ್ಲಿದ್ದು, ಅವರಿಗಿರುವ ಪಿಂಚಣಿ ಸಮಸ್ಯೆ, ವೇತನ ತಾರತಮ್ಯ ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು. ಪದವಿ ಮುಗಿಸಿ ೩ ವರ್ಷ ಕಳೆದವರು ಮತದಾನಕ್ಕೆ ಅರ್ಹರಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಗೂ ಕಾರ್ಯಕ್ರಮ ಮಾಡುವ ಚಿಂತನೆಗಳು ಮುಂದಿವೆ ಎಂದರು.

ಕಿರುಪರಿಚಯ

ಮೂಲತಃ ಉಡುಪಿ ಜಿಲ್ಲೆಯವರಾಗಿರುವ ರಘುಪತಿ ಭಟ್ ಮೂರು ಬಾರಿ ಉಡುಪಿ ಶಾಸಕರಾಗಿ ದುಡಿದ್ದಿದ್ದಾರೆ. ಇದಕ್ಕೂ ಮುನ್ನ ಉಡುಪಿ ನಗರಸಭಾ ಸದಸ್ಯನಾಗಿ, ೧೯೯೪ರಲ್ಲಿ ಬಿಜೆಪಿ ಶಿವಳ್ಳಿ ಸ್ಥಾನೀಯ ಸಮಿತಿ ಅಧ್ಯಕ್ಷನಾಗಿ, ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ದುಡಿದ ಅನುಭವ ಹೊಂದಿದ್ದಾರೆ.

ಕ್ರೀಡೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕೃಷಿ ವಲಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಪರಿವಾರ ಚಾರಿಟೇಬಲ್ ಟ್ರಸ್ಟ್, ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ, ಯಕ್ಷ ಶಿಕ್ಷಣ ಟ್ರಸ್ಟ್, ಕೇದಾರೋತ್ಥಾನ ಟ್ರಸ್ಟ್ ಸ್ಥಾಪಕಧ್ಯಕ್ಷರಾಗಿ, ಉಡುಪಿ ಜಿಲ್ಲಾ ರಿಕ್ಷಾ ಯೂನಿಯನ್ ಜಿಲ್ಲಾಧ್ಯಕ್ಷರಾಗಿ, ಟ್ಯಾಕ್ಸಿಮೆನ್ ಅಧ್ಯಕ್ಷರಾಗಿ, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷರಾಗಿ ದುಡಿದಿದ್ದಾರೆ.