ಕೂಡಿಗೆ, ಮೇ ೨೫: ಕವಿಹೃದಯಗಳು, ಸಾಹಿತಿಗಳು ಕನ್ನಡಾಭಿಮಾನಿಗಳು ಜೊತೆಗೆ ಒಂದಿಷ್ಟು ಗಾಯಕರು ಒಟ್ಟಿಗೆ ಯಾವುದಾದರೊಂದು ಸಂದರ್ಭದಲ್ಲಿ ಒಟ್ಟಿಗೆ ಸೇರಿದರೆಂದರೆ ಅಲ್ಲೊಂದು ಸಾಹಿತ್ಯ ಸಂಭ್ರಮ ಇರುತ್ತದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಅವರ ಹೊಸಹಟ್ಟಿ ಸೇರುವ ಸಂದರ್ಭದಲ್ಲಿ (ಗೃಹಪ್ರವೇಶ) ಅನೇಕ ಕವಿಗಳು, ಸಾಹಿತಿಗಳು ಜೊತೆಗೆ ಗಾಯಕರೇ ಹೆಚ್ಚಾಗಿ ಆಗಮಿಸಿದ್ದು, ಸಾಹಿತಿ ಹಾಗೂ ಮಡಿಕೇರಿ ತಾಲೂಕು ಸಮ್ಮೇಳನದ ಅಧ್ಯಕ್ಷರಾಗಿದ್ದ ಶೋಭ ಸುಬ್ಬಯ್ಯ ಅವರ ಪುಸ್ತಕವನ್ನು ನಿವೃತ್ತ ಹಿರಿಯ ಶಿಕ್ಷಣ ತಜ್ಞ ನಜೀರ್ ಅಹಮದ್ ಬಿಡುಗಡೆ ಮಾಡಿದರು. ಪ್ರಸ್ತುತ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಕವಿಗಳು, ಸಾಹಿತಿಗಳು ತಮ್ಮ ಬರವಣಿಗೆಯ ಮುಖಾಂತರ ಉತ್ತಮ ಸಂದೇಶ ನೀಡುವುದು ಅನಿವಾರ್ಯವಾಗಿದೆ. ಕಾರ್ಯಕ್ರಮ ಏನೇ ಇರಲಿ ಅಲ್ಲಿ ಸಾಹಿತಿಗಳು, ಗಾಯಕರು ಇದ್ದರೆ ಆ ಕಾರ್ಯಕ್ರಮದ ಮೌಲ್ಯ ಹೆಚ್ಚುತ್ತದೆ ಎಂದು ನಜೀರ್ ಹೇಳಿದರು.

ಗೀತಾ ಗಾಯನದಲ್ಲಿ ಜಿಲ್ಲಾ ಜನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ, ಕಬ್ಬಚೀರ ರಶ್ಮಿ ಪಾಲ್ಗೊಂಡಿದ್ದರು. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಗೌರವ ಕಾರ್ಯದರ್ಶಿ ಮುನೀರ್ ಅಹಮದ್, ಖಜಾಂಚಿ ಸಂಪತ್ ಕುಮಾರ್, ಹಿರಿಯ ಸಾಹಿತಿಗಳಾದ ನಾಗೇಶ್ ಕಾಲೂರ್, ಭಾರಧ್ವಾಜ್, ಜಲಕಾಳಪ್ಪ, ಕಿಗ್ಗಾಲು ಗಿರೀಶ್, ವೈಲೇಶ್ ಸೇರಿದಂತೆ ನೂರಾರು ಸಾಹಿತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.