ಕಣಿವೆ, ಮೇ ೨೫: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹವಾಗುವ ಕಸ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಕಸ ಸಂಗ್ರಹಣಾ ವ್ಯಾಪ್ತಿಯ ಭುವನಗಿರಿ ನಿವಾಸಿಗಳು ದುರ್ನಾತದ ನರಕಯಾತನೆಯಲ್ಲಿ ದಿನಕಳೆ ಯುತ್ತಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಕಳೆದ ೧೫ ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಕಸ ತ್ಯಾಜ್ಯಗಳ ನಿರ್ವಹಣಾ ಘಟಕದಿಂದ ಕೇವಲ ಭುವನಗಿರಿ ಗ್ರಾಮಸ್ಥರು ಮಾತ್ರವಲ್ಲ, ಭುವನಗಿರಿ ಸಮೀಪವಿರುವ ಕಣಿವೆ ಗ್ರಾಮಸ್ಥರ ಮೂಗನ್ನು ಮುಚ್ಚಿಸುತ್ತಿದೆ ಇಲ್ಲಿನ ಕೊಳೆತು ದುರ್ನಾತ ಬೀರುವ ಕಸ.
ಕಳೆದ ಹತ್ತು ದಿನಗಳ ದಿನಗಳಿಂದ ಈ ವ್ಯಾಪ್ತಿಯಲ್ಲಿ ನಿರಂತರವಾಗಿ ಸುರಿಯುತ್ತಲೇ ಇರುವ ಮಳೆಯಿಂದಾಗಿ ಭುವನಗಿರಿ ಗ್ರಾಮದ ಕಸ ವಿಲೇವಾರಿ ಘಟಕದಲ್ಲಿ ಕೊಳೆತು ನಾರುತ್ತಿರುವ ಕಸದಿಂದ ಸ್ಥಳೀಯ ನಿವಾಸಿಗಳ ನೆಮ್ಮದಿಗೆ ಭಂಗ ಉಂಟಾಗಿರುವ ಬಗ್ಗೆ ನಿವಾಸಿಗಳಾದ ಸುರೇಶ್, ಭಾಗ್ಯಮ್ಮ, ದಶರಥ, ಕೃಷ್ಣ, ತಮ್ಮಯ್ಯ, ರವಿ ಮೊದಲಾದವರು ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ಕಣ್ಣೀರಿಟ್ಟರು.
ನಿತ್ಯವೂ ನಾಲ್ಕು ಲಾರಿ ಲೋಡುಗಳಷ್ಟು ಕಸ ಹಾಗೂ ತ್ಯಾಜ್ಯಗಳು ಸಂಗ್ರಹವಾಗುವ ಈ ಕಸ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕ ವಾಗಿ ಅಗತ್ಯ ಯಂತ್ರಗಳನ್ನು ಬಳಸಿಕೊಂಡು ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡಲಾಗುವುದು ಎಂದು ಕಳೆದ ಹದಿನೈದು ವರ್ಷಗಳಿಂದಲೂ ಪುರಸಭೆ ಅಧಿಕಾರಿಗಳು ಹೇಳಿಕೊಂಡು ಬರುತ್ತಲೇ ಇದ್ದಾರೆ. ಇದಕ್ಕೋಸ್ಕರ ಸರ್ಕಾರದಿಂದ ಇದುವರೆಗೂ ಎರಡು ಕೋಟಿ ರೂಗಳಿಗೂ ಅಧಿಕ ಹಣವನ್ನು ವ್ಯಯಿಸಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ಸ್ಥಳೀಯ ನಿವಾಸಿಗಳ ನೆಮ್ಮದಿಗೆ ಭಂಗ ಉಂಟು ಮಾಡುತ್ತಿರುವ ಕಸ ತ್ಯಾಜ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಪುರಸಭೆ ಆಡಳಿತ ಹಾಗೂ ಅಧಿಕಾರಿಗಳು ನಿರ್ಲಕ್ಷö್ಯ ತೋರುತ್ತಿದ್ದಾರೆ ಎಂಬುದು ಸ್ಥಳೀಯ ನೊಂದ ನಿವಾಸಿಗಳ ನೇರ ಆರೋಪವಾಗಿದೆ.
ನೊಣ ಸೊಳ್ಳೆಗಳ ಕಾಟ
ಮಳೆಯಿಂದ ಕಸದ ರಾಶಿ ನೆನೆದ ಪರಿಣಾಮ ಕಸ ತ್ಯಾಜ್ಯಗಳ ರಾಶಿಯೊಳಗೆ ಮಳೆಯ ನೀರು ಸೇರಿ ದುರ್ನಾತ ಬೀರುತ್ತಿದೆ. ಊಟ, ತಿಂಡಿ ಮಾಡೋಣ ಎಂದರೆ ಹಗಲು ಹೊತ್ತಿನಲ್ಲಿ ಸೊಳ್ಳೆ ಹಾಗೂ ನೊಣದ ಕಾಟ ಮಿತಿ ಮೀರಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಪರಿ ಪರಿಯಾಗಿ ಬೇಡಿಕೊಂಡರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ಸ್ವತಃ ನಾವುಗಳೇ ಹಣ ಕೊಟ್ಟು ಖರೀದಿಸಿ ನೊಣಗಳನ್ನು ನಿಯಂತ್ರಿಸುವ ಫ್ಲೆöÊ ಎಂಡ್ ಪವರ್ ಬ್ಯಾಂಡ್ ಗಂ ಟೇಪು ತಂದು ಮನೆಯ ಬಾಗಿಲಿಗೆ ಸುತ್ತಲೂ ತೂಗು ಹಾಕುತ್ತೇವೆ.
ಇದರಲ್ಲಿ ಒಂದಷ್ಟು ನೊಣಗಳು ಬಂದು ಕೂರುತ್ತವೆ. ಇದಕ್ಕೆ ನಮಗೆ ವಾರಕ್ಕೆ ೨೫೦೦ ರೂ. ಹಣ ಖರ್ಚಾಗುತ್ತಿದೆ ಎಂದು ಪರಿಶಿಷ್ಟ ಜಾತಿಗೆ ಸೇರಿದ ಬಡ ರೈತ ದಂಪತಿಗಳಾದ ಭಾಗ್ಯ ಹಾಗೂ ಸುರೇಶ್ ದೂರುತ್ತಾರೆ.
ಅವೈಜ್ಞಾನಿಕ ಕಾಮಗಾರಿಗಳು
ಭುವನಗಿರಿ ಗ್ರಾಮಸ ಕಸ ವಿಲೇವಾರಿ ಘಟಕದಲ್ಲಿ ಯಂತ್ರಗಳನ್ನು ಅಳವಡಿಸಲು ಬೇಕಾದ ಹೊರಾಂಗಣ ಭವನವನ್ನು ಸುಮಾರು ೫೦ ಲಕ್ಷ ಹಣ ವ್ಯಯಿಸಿ ನಿರ್ಮಿಸಿದ್ದಾರೆ. ಆದರೆ, ಈ ಕಾಮಗಾರಿ ಅವೈಜ್ಞಾನಿಕ ಹಾಗೂ ಅಸಡ್ಡೆಯಿಂದ ನಿರ್ಮಿಸಿದ್ದು ಮಳೆಯ ನೀರು ಇದರೊಳಗೆ ನಿಂತಿದ್ದು ನೋಡುಗರಿಗೆ ಕೆರೆಯಂತೆ ಕಂಡು ಬರುತ್ತಿದೆ.
ತೂಕ ಅಳತೆಯ ಯಂತ್ರ ನಿರ್ಮಾಣ
ಈ ಘಟಕದೊಳಗೆ ಕಸ ತ್ಯಾಜ್ಯಗಳನ್ನು ಅಳತೆ ಮಾಡಲು ವೇ ಬ್ರಿಡ್ಜ್ ಕೂಡ ನಿರ್ಮಿಸಲಾಗಿದೆ. ಆದರೆ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ.
ಇನ್ನೂ ಆರು ತಿಂಗಳ ಹಿಂದಷ್ಟೇ ಕಸ ವಿಲೇವಾರಿ ಘಟಕದೊಳಗೆ ನಿರ್ಮಿಸಿರುವ ಡಾಂಬರು ರಸ್ತೆ ಕಿತ್ತು ನಿಂತಿದೆ.
ಜಿಲ್ಲಾಧಿಕಾರಿಗಳು ಪರಿಶೀಲನೆಗೆ ಕೋರಿಕೆ
ಭುವನಗಿರಿ ಗ್ರಾಮದ ಕಸ ವಿಲೇವಾರಿ ಘಟಕದಲ್ಲಿ ನಿರಂತರ ವಾಗಿ ಅನುಭವಿಸುತ್ತಿರುವ ಕಸದ ವಾಸನೆಯ ಸಮಸ್ಯೆಯಿಂದ ನಮ್ಮನ್ನು ಮುಕ್ತಿಗೊಳಿಸಿ ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿ ಎಂದು ಸುರೇಶ್ ದಂಪತಿಗಳು ಒತ್ತಾಯಿಸಿದರು.
೩ಐದನೇ ಪುಟಕ್ಕೆ
(ಮೊದಲ ಪುಟದಿಂದ)
ಕಣ್ಣು ಮುಚ್ಚಿ ಕುಳಿತ ಪಂಚಾಯಿತಿ
ಕುಶಾಲನಗರದ ಕಸದಿಂದ ಸ್ಥಳೀಯ ನಿವಾಸಿಗಳಿಗೆ ವಿಪರೀತ ತೊಂದರೆ ಆಗುತ್ತಿದ್ದರೂ ಕೂಡ ಸೂಕ್ತ ನ್ಯಾಯ ಹಾಗೂ ರಕ್ಷಣೆ ನೀಡಬೇಕಾದ ಸ್ಥಳೀಯ ಕೂಡಿಗೆ ಗ್ರಾಮ ಪಂಚಾಯಿತಿ ಆಡಳಿತ ಕಣ್ಣು ಮುಚ್ಚಿ ಕುಳಿತಿದೆ.
ಈ ಬಗ್ಗೆ ನಾವುಗಳು ಪಂಚಾಯಿತಿಗೆ ಅಲೆದು ಅಲೆದು ಚಪ್ಪಲಿ ಸವೆಸಿದರೂ ಕೂಡ ಪಂಚಾಯಿತಿ ಆಡಳಿತ ಮಂದಿಯಾಗಲೀ, ಅಧಿಕಾರಿ ಗಳಾಗಲೀ ಇತ್ತ ಓಗೊಡುತ್ತಿಲ್ಲ ಎಂದು ನಿವಾಸಿಗಳು ನೊಂದು ನುಡಿಯುತ್ತಿದ್ದಾರೆ. ಕೂಡಲೇ ಇಲ್ಲಿನ ಜನರು ಅನುಭವಿಸುತ್ತಿರುವ ಸಮಸ್ಯೆಗೆ ಸೂಕ್ತ ನ್ಯಾಯ ಒದಗಿಸಬೇಕಿದೆ. -ಕೆ.ಎಸ್.ಮೂರ್ತಿ