ಮಡಿಕೇರಿ, ಮೇ ೨೫: ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ ಸೇವಾ ಭದ್ರತೆ ಒದಗಿಸಿಕೊಡುವ ಸಲುವಾಗಿ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಡಾ. ಎಸ್.ಆರ್. ಹರೀಶ್ ಆಚಾರ್ಯ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಪ್ರೇರಕ ಶಕ್ತಿ ಎಂದು ಕರೆಸಿಕೊಳ್ಳುವ ಶಿಕ್ಷಕ ಸಮೂಹ ಇಂದು ಅನಿಶ್ಚಿತತೆಯಲ್ಲಿದೆ. ಶಿಕ್ಷಕರು ಮಾರಾಟದ ಸರಕಲ್ಲ.
ಆದರೆ, ಶಿಕ್ಷಕರ ಮತವನ್ನು ಹಣ, ಹೆಂಡ ಇತ್ಯಾದಿ ಅಮಿಷಗಳಿಂದ ಕೊಂಡುಕೊಳ್ಳಬಹುದು ಎಂಬ ಮಾನಸಿಕತೆ ಸೃಷ್ಟಿಯಾಗಿರುವುದು ವಿಷಾದನೀಯ. ಶಿಕ್ಷಕ ಸಮುದಾಯದ ಸ್ವಾಭಿಮಾನ ಹಾಗೂ ವೃತ್ತಿ ಗೌರವದ ಪಾವಿತ್ರö್ಯತೆ ಎತ್ತಿಹಿಡಿಯುವ ನಿಟ್ಟಿನಲ್ಲಿ ಸ್ಪರ್ಧೆ ಮಾಡುತ್ತಿದ್ದು, ಶಿಕ್ಷಕರ ಕನಿಷ್ಟ ವೇತನ, ಸೇವಾ ಭದ್ರತೆ, ಸೇವಾ ಸೌಲಭ್ಯ ಇನ್ನಿತರ ಬೇಡಿಕೆಗೆ ಇದುವರೆಗೂ ಸ್ಪಂದನ ಸಿಕ್ಕಿಲ್ಲ.
ಪ್ರತಿಕೂಲ ಪರಿಸ್ಥಿತಿಯ ನಡುವೆ ಕೆಲಸ ಮಾಡುವ ದುರ್ದೈವ ಸ್ಥಿತಿ ಶಿಕ್ಷಣ ಕ್ಷೇತ್ರದಲ್ಲಿದೆ. ಇವೆಲ್ಲಕ್ಕೂ ಪರಿಹಾರ ದೊರಕಿಸುವುದು ತನ್ನ ಆದ್ಯತೆಯಾಗಿದೆ ಎಂದರು.
ಹಳೆ ಪಿಂಚಣಿ ಯೋಜನೆಯನ್ನು ಸರಕಾರಿ ಶಿಕ್ಷಕರು, ಅನುದಾನಿತ ಶಿಕ್ಷಕರಿಗೆ ಒಂದೇ ರೀತಿ ಅನ್ವಯಿಸಿ ಜಾರಿಗೊಳಿಸಬೇಕು, ಅನುದಾನಿತ ಶಾಲಾ ಕಾಲೇಜು ಶಿಕ್ಷಕರ ಪಿಂಚಣಿಯಲ್ಲಿ ಉದ್ಯೋಗದಾತರ ಪಾಲನ್ನು ಸರಕಾರವೇ ಭರಿಸಬೇಕು, ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸುವುದು, ಬಡ್ತಿ ವೇತನ ತಾರತಮ್ಯ ನಿವಾರಣೆ, ಹಿರಿಯ ಉಪನ್ಯಾಸಕರುಗಳಿಗೆ ಪ್ರಬಾರ ಭತ್ಯೆ ಒದಗಿಸುವುದು, ಚಿತ್ರಕಲಾ, ಕಸೂತಿ ಶಿಕ್ಷಕರಿಗೆ ಗೌರವ ಒದಗಿಸುವುದು, ಎಲ್ಲಾ ಹಂತದ ತರಗತಿಗಳಿಗೂ ಬೋಧಕ, ಸಿಬ್ಬಂದಿ ವರ್ಗ ಒದಗಿಸುವುದು, ಸಮರ್ಪಕ ವೇತನ ಪಾವತಿಗೆ ಕ್ರಮ ಸೇರಿದಂತೆ ನಾನಾ ಚಿಂತನೆಗಳಿವೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಉಪನ್ಯಾಸಕರುಗಳಾದ ಮಧುಕರ್, ಕರ್ಣಾಕರ್ ಹಾಜರಿದ್ದರು.