ಮಡಿಕೇರಿ, ಮೇ ೨೬: ಬೈಲುಕುಪ್ಪೆಯ ಆರ್ಸಿ.ಬಿ. ತಂಡ ಮೂರ್ನಾಡು ಪ್ರೌಢಶಾಲಾ ಮೈದಾನದಲ್ಲಿ ಜರುಗಿದ ಪ್ರಥಮ ವರ್ಷದ ನಾಯ್ಡೂಸ್ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯಾಟದಲ್ಲಿ ಆರ್.ಸಿ.ಬಿ. ಬೈಲುಕುಪ್ಪೆ ತಂಡವು (೬೭/೦) ವೀರಾಜಪೇಟೆ ಕೊಡಗು ಯುವ ವಾರಿಯರ್ಸ್ (೬೬/೫) ತಂಡವನ್ನು ಸೋಲಿಸಿತು. ವಿಜೇತ ತಂಡದ ಪರ ಕಿರಣ್ ಅಜೇಯ (೪೮) ಹಾಗೂ ವಿಜಯ್ ಅಜೇಯ (೧೪) ರನ್ ಗಳಿಸಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ನಲ್ಲಿ ಕೊಡಗು ಯೂತ್ ವಾರಿಯರ್ಸ್ ವೀರಾಜಪೇಟೆ ತಂಡವು ೬ ಓವರ್ನಲ್ಲಿ ಒಟ್ಟು ೭೪ ರನ್ ಗಳಿಸಿತು. ಗುರಿ ಬೆನ್ನತ್ತಿದ ಮೂರ್ನಾಡು ಎಕ್ಸ್ ಟ್ರೀಂ ಬ್ಲಾಸ್ಟರ್ಸ್ ತಂಡವು ಕೇವಲ ೩೪ ರನ್ ಗಳಿಸಿ ಸೋಲನ್ನಪ್ಪಿತು.
ದ್ವಿತೀಯ ಸೆಮಿಫೈನಲ್ನಲ್ಲಿ ಆರ್.ಸಿ.ಬಿ. ಬೈಲುಕುಪ್ಪೆ (೬೪) ತಂಡವು ಪೆರುಂಬಾಡಿ ಪ್ಯಾಂಥರ್ಸ್ (೬೨) ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಪಂದ್ಯ ಪುರುಷೋತ್ತಮನಾಗಿ ಕಿರಣ್ ಬೈಲುಕುಪ್ಪೆ, ಸರಣಿ ಪುರುಷೋತ್ತಮ ವಿಜಯ್ ಬೈಲುಕುಪ್ಪೆ ಹಾಗೂ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಕೊಡಗು ಯೂತ್ ವಾರಿಯರ್ಸ್ ತಂಡದ ಚೇತನ್ ಪಡೆದÀರು.
‘ವರ್ಷಂಪ್ರತಿ ನಡೆಯಲಿ’
ಕ್ರೀಡೆ ಎಲ್ಲರನ್ನೂ ಒಂದುಗೂಡುವAತೆ ಮಾಡುತ್ತದೆ. ಕೊಡಗು ಜಿಲ್ಲೆಯಲ್ಲಿ ಎಲ್ಲಾ ಸಮುದಾಯಗಳೂ ಕ್ರೀಡೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಬಲಿಜ ಸಮುದಾಯವೂ ವರ್ಷಂಪ್ರತಿ ಕ್ರೀಡಾಕೂಟವನ್ನು ನಡೆಸಬೇಕು. ಮಹಿಳೆಯರು, ಬಾಲಕ, ಬಾಲಕಿಯರು, ಯುವತಿಯರೂ ಕ್ರೀಡೆಯಲ್ಲಿ ತೊಡಗಲು ಕಾರ್ಯಕ್ರಮ ಹಾಕಿಕೊಳ್ಳಬೇಕು. ಮುಂದಿನ ವರ್ಷ ನಾಯ್ಡೂಸ್ ಕ್ರಿಕೆಟ್ ಮೊದಲ ಬಹುಮಾನವನ್ನು ಪ್ರಾಯೋಜಿ ಸುವದಾಗಿ ಬಲಿಜ ಮುಖಂಡರಾದ ಟಿ.ಪಿ. ರಮೇಶ್ ಇದೇ ಸಂದರ್ಭ ಘೋಷಣೆ ಮಾಡಿದರು.
ಮಡಿಕೇರಿ ತಾಲೂಕು ಬಲಿಜ ಸಮಾಜ ಅಧ್ಯಕ್ಷೆ ಮೀನಾಕ್ಷಿ ಕೇಶವ್ ಮಾತನಾಡಿ, ಬಲಿಜ ಜನಾಂಗದಲ್ಲಿಯೂ ಕ್ರೀಡಾ ಪ್ರತಿಭೆಗಳಿದ್ದು, ಯುವಕ, ಯುವತಿಯರು ಹೆಚ್ಚಾಗಿ ಪಾಲ್ಗೊಳ್ಳಲು ಕರೆ ನೀಡಿದರು.
ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಮಾತನಾಡಿ, ಕ್ರಿಕೆಟ್ ತಂಡ ಯುವಕರಿಗೆ ಮಾತ್ರ ಸೀಮಿತವಾಗದೆ ಯುವತಿಯರು, ಹಿರಿಯರು, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ನಡೆಸುವಂತಾಗಬೇಕು ಎಂದರು. ನಾಯ್ಡೂಸ್ ಕ್ರಿಕೆಟರ್ಸ್ ಸಂಘಟಕ ಶ್ರೀನಿವಾಸ್ ಹಾಜರಿದ್ದರು.
ಮಹಿಳಾ ವಿಭಾಗದ ವಿಜೇತರು
ವಿವಾಹಿತ ಮಹಿಳೆಯರ ಸಂಗೀತ ಕುರ್ಚಿ ವಿಭಾಗದಲ್ಲಿ ಆಶಾ ರಮೇಶ್ ಪೆರುಂಬಾಡಿ (ಪ್ರಥಮ), ಟಿ.ಪಿ. ಶಶಿಕಲಾ, ಮೈಸೂರು (ದ್ವಿತೀಯ), ಯುವತಿಯರ ವಿಭಾಗದಲ್ಲಿ ಜಸ್ಮಿತಾ ರಮೇಶ್ ಪೆರುಂಬಾಡಿ (ಪ್ರಥಮ) ಹಾಗೂ ನವ್ಯಶ್ರೀ ವೀರಾಜಪೇಟೆ ದ್ವಿತೀಯ ಬಹುಮಾನ ಪಡೆದÀರು.
ಹೆಣ್ಣುಮಕ್ಕಳ ಜಿಗ್ ಜಾಗ್ ಸ್ಪರ್ಧೆಯಲ್ಲಿ ಪ್ರಿಯಾ ರಂಜನ್, ಮೈಸೂರು (ಪ್ರಥಮ) ಹಾಗೂ ರಚನಾ ಪ್ರಕಾಶ್, ಮೈಸೂರು (ದ್ವಿತೀಯ) ಬಹುಮಾನ ಗೆದ್ದುಕೊಂಡರು.
ಅತಿಥಿಗಳಾಗಿ ಗಣೇಶ್ ನಾಯ್ಡು, ಸುಶೀಲಾ ಟಿ.ಎನ್, ಆಶಾ ಎಂ.ಎಸ್, ಟಿ.ಎನ್. ಲೋಗನಾಥ್, ಪದ್ಮನಾಭ, ರಾಮಚಂದ್ರ ಮುಂತಾದವರು ಭಾಗವಹಿಸಿದ್ದರು.
ಇದೇ ಸಂದರ್ಭ ಮಡಿಕೇರಿ ತಾಲೂಕು ಬಲಿಜ ಸಮಾಜದಿಂದ ರೂ.೧೦ ಸಾವಿರ ನಗದನ್ನು ಅಧ್ಯಕ್ಷೆ ಮೀನಾಕ್ಷಿ ಕೇಶವ್ ಘೋಷಣೆ ಮಾಡಿದರು. ತಾ.೨೫ ರಂದು ನಡೆದ ಟೂರ್ನಿಯಲ್ಲಿ ಒಟ್ಟು ೭ ತಂಡಗಳು ಭಾಗವಹಿಸಿದ್ದವು.
- ಟಿ.ಎಲ್.ಎಸ್.