ಸೇನಾ ಮುಖ್ಯಸ್ಥ ಸೇವಾವಧಿ ವಿಸ್ತರಣೆ

ನವದೆಹಲಿ, ಮೇ ೨೬: ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರ ಸೇವಾವಧಿ ಕೇಂದ್ರ ಸರ್ಕಾರ ಭಾನುವಾರ ಒಂದು ತಿಂಗಳ ಅವಧಿಗೆ ವಿಸ್ತರಿಸಿದೆ. ಮೇ ೩೧ ರಂದು ಜನರಲ್ ಪಾಂಡೆ ಸೇವೆಯಿಂದ ನಿವೃತ್ತಿಯಾಗಬೇಕಿತ್ತು. ಸೇನಾ ನಿಯಮಗಳು ೧೯೫೪ರ ನಿಯಮ ೧೬ (ಎ) ೪ ಅಡಿಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಪಾಂಡೆ ಅವರ ನಿವೃತ್ತಿ ಅವಧಿಯನ್ನು ಜೂನ್ ೩೦ ರವರೆಗೆ ವಿಸ್ತರಿಸಲು ನೇಮಕಾತಿ ಸಂಪುಟ ಸಮಿತಿ ಮೇ ೨೬ ರಂದು ಅನುಮೋದನೆ ನೀಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಆಸ್ಪತ್ರೆಗೆ ಬೆಂಕಿ - ೭ ನವಜಾತ ಶಿಶುಗಳ ಮರಣ

ನವದೆಹಲಿ, ಮೇ ೨೬: ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ತಡರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡು ಹತ್ತಿ ಉರಿದು ಕನಿಷ್ಟ ೭ ನವಜಾತ ಶಿಶುಗಳು ಮೃತಪಟ್ಟಿವೆ. ನಿನ್ನೆ ರಾತ್ರಿ ೧೧.೩೦ ರ ಸುಮಾರಿಗೆ ‘ಬೇಬಿ ಕೇರ್ ನ್ಯೂ ಬಾರ್ನ್ ಆಸ್ಪತ್ರೆ' ಮತ್ತು ಅದರ ಪಕ್ಕದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶಹದಾರದ ಕೃಷ್ಣ ನಗರದಲ್ಲಿನ ಬಹುಮಹಡಿ ವಸತಿ ಕಟ್ಟಡದಲ್ಲಿ ಮತ್ತೊಂದು ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಮೃತಪಟ್ಟಿದ್ದಾರೆ. ಅಧಿಕಾರಿಗಳ ಪ್ರಕಾರ, ಒಟ್ಟು ೧೨ ಶಿಶುಗಳನ್ನು ರಕ್ಷಿಸಲಾಗಿದೆ, ಅವರಲ್ಲಿ ೭ ಶಿಶುಗಳು ಮೃತಪಟ್ಟಿದ್ದು, ಐವರನ್ನು ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ರಕ್ಷಿಸಲ್ಪಟ್ಟ ನವಜಾತ ಶಿಶುಗಳನ್ನು ಪೂರ್ವ ದೆಹಲಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮಾಸ್ಟರ್ಸ್ ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧುಗೆ ಸೋಲು

ಮಲೇಷ್ಯಾ, ಮೇ ೨೬: ಭಾರತದ ಬ್ಯಾಡ್ಮಿಂಟನ್ ತಾರೆ, ಎರಡು ಬಾರಿಯ ಒಲಿಂಪಿಕ್ ಮೆಡಲಿಸ್ಟ್ ಪಿ.ವಿ. ಸಿಂಧು ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ವಾಂಗ್ ಝಿಯಿ ವಿರುದ್ಧ ಸೋತು ನಿರಾಸೆ ಮೂಡಿಸಿದ್ದಾರೆ. ಎದುರಾಳಿ ವಿರುದ್ಧ ಸಿಂಧು ೨೧-೧೬, ೫-೨೧ ಮತ್ತು ೧೬-೨೧ ಸೆಟ್‌ಗಳಿಂದ ಸೋತು ನಿರ್ಗಮಿಸಿದರು. ಮೊದಲ ಸೆಟ್‌ನಲ್ಲಿ ೨೧-೧೬ರ ಮೂಲಕ ಗೆಲುವು ಸಾಧಿಸುವ ಮೂಲಕ ಸಿಂಧು ಉತ್ತಮ ಆರಂಭ ಮಾಡಿದ್ದರು. ಎರಡನೇ ಸೆಟ್‌ನಲ್ಲಿ ಚೀನಾದ ಆಟಗಾರ್ತಿ ಕಮ್ ಬ್ಯಾಕ್ ಮಾಡಿದರು. ಬಳಿಕ, ಮೂರನೇ ಸೆಟ್‌ನಲ್ಲೂ ಸಿಂಧುಗೆ ಅವಕಾಶ ನೀಡದೆ ೨೧-೧೬ ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ, ನಡೆದ ಸೆಮಿಫೈನಲ್‌ನಲ್ಲಿ ಬೂಸನ್‌ನ ಅಂಗ್ಲಾಮೃಗ್‌ಫಾನ್ ಅವರ ವಿರುದ್ಧ ೧೩-೨೧, ೨೧-೧೬ ಮತ್ತು ೨೧-೧೨ ಸೆಟ್‌ಗಳಿಂದ ಗೆದ್ದು ಸಿಂಧು ಫೈನಲ್‌ಗೆ ಏರಿದ್ದರು. ಶುಕ್ರವಾರ ಚೀನಾದ ನಂ.೬ ಶ್ರೇಯಾಂಕಿತ ಆಟಗಾರ್ತಿ ಹಾನ್ ಯೂ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಮಣಿಸಿದ್ದರು.

ಭೀಕರ ಅಪಘಾತ - ಒಂದೇ ಕುಟುಂಬದ ಆರು ಮಂದಿ ಸಾವು

ಹಾಸನ, ಮೇ ೨೬: ಟೊಯೋಟಾ ಇಟಿಯೋಸ್ ಕಾರು ಕಂಟೇನರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ನಡೆದಿದೆ. ಹಾಸನ ನಗರ ಹೊರವಲಯದ ರಾಷ್ಟಿçÃಯ ಹೆದ್ದಾರಿ ೭೫ರ ಕಂದಲಿ ಸಮೀಪದಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮಹಿಳೆಯರು, ಮೂರು ಪುರುಷರು, ಒಂದು ಮಗು ಸೇರಿ ೬ ಮಂದಿ ಮೃತರಾಗಿದ್ದಾರೆ. ಒಂದೇ ಕುಟುಂಬದ ನಾರಾಯಣ ಸ್ವಾಮಿ, ಸುನಂದಾ, ರವಿಕುಮಾರ್, ನೇತ್ರ, ಚೇತನ್, ರಾಕೇಶ್ ಮೃತರು. ಎಲ್ಲರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ, ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬAಧಿಕರನ್ನು ನೋಡಲು ಇಟಿಯೋಸ್ ಕಾರಿನಲ್ಲಿ ತೆರಳಿದ್ದ ಕುಟುಂಬ ಸದಸ್ಯರು ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಬೆಳಿಗ್ಗಿನ ಜಾವ ನಿದ್ದೆ ಮಂಪರಿನಲ್ಲಿ ವಾಹನ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಲೇನ್‌ಗೆ ಹಾರಿ ಕಂಟೇನರ್‌ಗೆ ಗುದ್ದಿದೆ. ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ.

ಉಡುಪಿ ಗ್ಯಾಂಗ್ ವಾರ್ ಪ್ರಕರಣ - ಒಟ್ಟು ೬ ಮಂದಿ ಬಂಧನ

ಉಡುಪಿ, ಮೇ ೨೬: ಉಡುಪಿ ನಗರ ಪೊಲೀಸ್ ವ್ಯಾಪ್ತಿಯ ಕುಂಜಿಬೆಟ್ಟುವಿನಲ್ಲಿ ಮೇ ೧೯ ರಂದು ಮುಂಜಾನೆ ನಡೆದಿದ್ದ ಗ್ಯಾಂಗ್ ವಾರ್‌ಗೆ ಸಂಬAಧಿಸಿದAತೆ ಪೊಲೀಸರು ಭಾನುವಾರ ಮತ್ತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರ ಒಟ್ಟು ಸಂಖ್ಯೆ ಈಗ ಆರಕ್ಕೇರಿದೆ. ಬಂಧಿತ ಆರೋಪಿಗಳನ್ನು ಮಜೀದ್, ಅಲ್ಫಾಜ್ ಮತ್ತು ಶರೀಫ್ ಎಂದು ಗುರುತಿಸಲಾಗಿದೆ. ಈ ಮೂವರೂ ಗರುಡ ಗ್ಯಾಂಗ್‌ನ ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮೊದಲು ಮೇ ೨೪ ರಂದು ಪೊಲೀಸರು ಅದೇ ಗ್ಯಾಂಗ್‌ನ ಆಶಿಕ್, ರಕೀಬ್ ಮತ್ತು ಸಕ್ಲೇನ್ ಎಂಬ ಮೂವರನ್ನು ಬಂಧಿಸಿದ್ದರು. ಡಿಕ್ಕಿ ಹೊಡೆಸಿಕೊಂಡಿದ್ದ ಶರೀಫ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ಡಿಸ್ಚಾರ್ಜ್ ಆಗಿದ್ದಾರೆ. ಈತ ಈಗ ಉಡುಪಿ ಟೌನ್ ಪೊಲೀಸರ ವಶದಲ್ಲಿದ್ದಾನೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಆಧಾರದ ಮೇಲೆ ಪೊಲೀಸರು ಮೇ ೨೦ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಈ ವೀಡಿಯೋವನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ರಿಯಲ್ ಎಸ್ಟೇಟ್ ವಿವಾದವೊಂದಕ್ಕೆ ಸಂಬAಧಿಸಿದAತೆ ಉಭಯ ಗ್ಯಾಂಗ್‌ನ ಸದಸ್ಯರು ಆಯುಧಗಳಿಂದ ಪರಸ್ಪರ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ : ೨೩ ಆರೋಪಿಗಳ ಬಂಧನ

ದಾವಣಗೆರೆ, ಮೇ ೨೬: ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂಗೊಳಿಸಿದ್ದ ಪ್ರಕರಣದಲ್ಲಿ ಪೊಲೀಸರು ಭಾನುವಾರ ೨೩ ಆರೋಪಿಗಳನ್ನು ಬಂಧಿಸಿದ್ದಾರೆ. ಸಿ.ಸಿ. ಕ್ಯಾಮೆರಾ, ಮೊಬೈಲ್ ವೀಡಿಯೋ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದಡಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾಗಲೇ ಆರೋಪಿ ಆದಿಲ್ ಮೃತಪಟ್ಟಿದ್ದರು. ಆದಿಲ್ ಅವರದ್ದು ಲಾಕಪ್ ಡೆತ್ ಎಂದು ಆರೋಪಿಸಿ ಸಂಬAಧಿಕರು, ಸಮುದಾಯದವರು ಶುಕ್ರವಾರ ತಡರಾತ್ರಿ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ೧೧ ಜನ ಪೊಲೀಸರಿಗೆ ಗಾಯಗಳಾಗಿದ್ದವು. ಚನ್ನಗಿರಿಯಲ್ಲಿ ಪೊಲೀಸರ ಬಿಗಿ ಭದ್ರತೆ ಮುಂದುವರಿದಿದೆ.

ಬಿಟ್‌ಕಾಯಿನ್ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ

ಬೆಂಗಳೂರು, ಮೇ ೨೬: ಬಿಟ್‌ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀ ಕೃಷ್ಣ ರಮೇಶ್ ಮತ್ತು ಆತನ ಸಹಚರ ರಾಬಿನ್ ಖಂಡೇಲ್‌ವಾಲ್ ವಿರುದ್ಧ ಕೋಕಾ (ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ಅಡಿ ಎಸ್‌ಐಟಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ೨೦೧೭ರಲ್ಲಿ ತುಮಕೂರು ಸಿಇಎನ್ ಠಾಣೆಯಲ್ಲಿ ದಾಖಲಾಗಿದ್ದ ಯುನೋ ಕಾಯಿನ್ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ತಂಡ, ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲಾನನ್ನ ಕೋಕಾ ಕಾಯ್ದೆಯಡಿ ಜೈಲಿಗಟ್ಟಲು ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ಬಿಟ್ ಕಾಯಿನ್ ಅಕ್ರಮ ಪ್ರಕರಣದಲ್ಲಿ ತನಿಖೆಗೆ ಹಾಜರಾಗದೆ ಕಳ್ಳಾಟವಾಡುತ್ತಿದ್ದ ಶ್ರೀಕಿಯನ್ನು ಮೇ ೭ ರಂದು ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಆತನ ಸಹವರ್ತಿ ರಾಬಿನ್ ಖಂಡೇವಾಲಾನನ್ನು ರಾಜಸ್ಥಾನದಲ್ಲಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಇಬ್ಬರು ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಕ್ರಮ ಕೈಗೊಂಡು, ಜೈಲಿಗಟ್ಟಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪದೇ ಪದೇ ಸಂಘಟಿತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿಗಳನ್ನು ಈ ಕಾಯ್ದೆಯಡಿ ಬಂಧನಕ್ಕೊಳಪಡಿಸಬಹುದು. ಕೋಕಾ ಕಾಯ್ದೆಯಡಿ ಬಂಧಿಸಲ್ಪಡುವ ಅಪರಾಧಿಗೆ ಕನಿಷ್ಟ ಒಂದು ವರ್ಷ ಜಾಮೀನು ಸಿಗುವುದಿಲ್ಲ.