ಕುಶಾಲನಗರ, ಮೇ ೨೬: ದೇವತಾ ಕಾರ್ಯಗಳನ್ನು ಮಾಡುವ ಮೂಲಕ ಮಾನವನ ಅಜ್ಞಾನ, ಕಲ್ಮಶ ಮನಸ್ಸು ಶುದ್ಧವಾಗುವುದರೊಂದಿಗೆ ಸುಜ್ಞಾನ ಲಭಿಸುತ್ತದೆ ಎಂದು ಶ್ರೀ ಕ್ಷೇತ್ರ ಬೆಲಗೂರು ಶ್ರೀ ವೀರ ಪ್ರತಾಪ ಆಂಜನೇಯ ಸ್ವಾಮಿ ಸನ್ನಿಧಿಯ ಮಾರುತಿ ಪೀಠದ ಅವಧೂತರಾದ ಶ್ರೀ ವಿಜಯ ಮಾರುತಿ ಶರ್ಮ ತಿಳಿಸಿದರು.
ಕುಶಾಲನಗರದಲ್ಲಿ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯ ಆಶ್ರಯದಲ್ಲಿ ನಡೆದ ಶತ ಚಂಡಿಕಾ ಯಾಗ ಕಾರ್ಯದಲ್ಲಿ ಪಾಲ್ಗೊಂಡ ಶ್ರೀಗಳು ಮಾತನಾಡಿದರು. ಧರ್ಮಾಚರಣೆಗಳು ನಿರಂತರವಾಗಿರ ಬೇಕು, ದಾನದಿಂದ ಮಾತ್ರ ತೃಪ್ತಿ, ಮೋಕ್ಷ ಲಭಿಸುತ್ತದೆ ಎಂದು ಹೇಳಿದರು.
ಕುಶಾಲನಗರ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್, ಆರ್ಯ ವೈಶ್ಯ ಮಂಡಳಿ ಆರ್ಯ ವೈಶ್ಯ ಮಹಿಳಾ ಮಂಡಳಿ ,ವಾಸವಿ ಯುವಜನ ಸಂಘ, ಯುವತಿಯರ ಸಂಘ, ಬಾಲಕಿಯರ ಮಂಡಳಿ ಮತ್ತು ಕನ್ನಿಕಾ ವಿವಿಧೋದ್ದೇಶ ಸಹಕಾರಿ ಸಂಘ ಆಶ್ರಯದಲ್ಲಿ ನಡೆದ ಐದು ದಿನಗಳ ವಿಶೇಷ ಪೂಜಾ ಕಾರ್ಯಕ್ರಮಗಳು ಮತ್ತು ವೇದಿಕೆ ಕಾರ್ಯಕ್ರಮಗಳ ಮೂಲಕ ಭಾನುವಾರ ಯಾಗ ಕಾರ್ಯಕ್ರಮ ಮಹಾಪೂರ್ಣಾಹುತಿ ಯೊಂದಿಗೆ ಸಂಪನ್ನವಾಯಿತು.
ಶನಿವಾರ ಸಂಜೆ ನಡೆದ ಡಾ. ವಿದ್ಯಾಭೂಷಣ್ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು. ಭಾನುವಾರ ಸಂಜೆ ಕೇರಳದ ಪ್ರಸಿದ್ಧ ಚೆಂಡೆ ವಾದಕರಾದ ಚೇರುದಾರನ್ ಚಂದ್ರನ್ ಮಾರಾರ್ ಸಂಗಡಿಗರಿAದ ಚಂಡೆ ಸೇವೆ ಮತ್ತು ನರ್ತನ ಸೇವೆ ನಡೆಯಿತು.
ದೇವಾಲಯದ ಪ್ರಧಾನ ಅರ್ಚಕರಾದ ಗಿರೀಶ್ ಭಟ್, ಯೋಗೇಶ್ ಭಟ್, ರಾಘವೇಂದ್ರ ಭಟ್ ನೇತೃತ್ವದಲ್ಲಿ ನಡೆದ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಶೃಂಗೇರಿ, ದಕ್ಷಿಣ ಕನ್ನಡ ವ್ಯಾಪ್ತಿಯಿಂದ ಆಗಮಿಸಿದ ೩೦ಕ್ಕೂ ಅಧಿಕ ಋತ್ವಿಕರು ಯಾಗ ಕಾರ್ಯಕ್ರಮದಲ್ಲಿ ಐದು ದಿನಗಳ ಕಾಲ ತೊಡಗಿಸಿಕೊಂಡಿದ್ದರು.
ಆರ್ಯವೈಶ್ಯ ಮಂಡಳಿ ವಾಸವಿ ಯುವಜನ ಸಂಘ ಮತ್ತು ಸಮುದಾಯದ ಸಂಘಟನೆಗಳ ಪ್ರಮುಖರಾದ ಬಿ.ಆರ್. ನಾಗೇಂದ್ರ ಪ್ರಸಾದ್, ಬಿ.ಎಲ್. ಸತ್ಯನಾರಾಯಣ, ಬಿ.ಎಲ್. ಉದಯಕುಮಾರ್ ಲಕ್ಷಿö್ಮ ಶ್ರೀನಿವಾಸ್, ಪ್ರವೀಣ್, ಕವಿತಾ ಪ್ರವೀಣ್, ಅಮೃತರಾಜ್, ಸ್ಪೂರ್ತಿ ಮತ್ತು ಪದಾಧಿಕಾರಿಗಳು, ಸಮುದಾಯ ಬಾಂಧವರು, ಭಕ್ತಾದಿಗಳು ಪಾಲ್ಗೊಂಡಿದ್ದರು.