ಕುಶಾಲನಗರ, ಮೇ ೨೬: ಪತ್ರಿಕೆಗಳು ಓದುಗರನ್ನು ಹಿಡಿದಿಟ್ಟುಕೊಳ್ಳುವಂತಹ ವರದಿಗಳನ್ನು ನಿರಂತರವಾಗಿ ಪ್ರಕಟಿಸಬೇಕು ಎಂದು ಕುಶಾಲನಗರ ವಿವೇಕಾನಂದ ಎಜುಕೇಶನ್ ಟ್ರಸ್ಟ್ ಆಡಳಿತ ಅಧಿಕಾರಿ ಮಹೇಶ್ ಅಮೀನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ಕುಶಾಲನಗರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಕಾಲೇಜು ಆಡಳಿತ ಮಂಡಳಿ ಸಹಯೋಗದೊಂದಿಗೆ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ನಡೆದ ‘ಪರಿಸರ ಮತ್ತು ಮಾಧ್ಯಮ’ ವಿಷಯ ಗಳ ಬಗ್ಗೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳಲ್ಲಿ ಮುಳುಗಿರುವ ಯುವಪೀಳಿಗೆ ಓದುವ ಹವ್ಯಾಸವನ್ನು ಮರೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಪತ್ರಿಕೆಗಳನ್ನು ಓದುವ ಮೂಲಕ ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯ ಎಂದರು.
ಈ ಸಂದರ್ಭ ಮಾತನಾಡಿದ ಕುಶಾಲನಗರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ವಿದ್ಯಾ ರ್ಥಿಗಳು ದಿನನಿತ್ಯದ ಆಗುಹೋಗುಗಳ ಬಗ್ಗೆ ಅರಿವು ಪಡೆಯಬೇಕು. ಪತ್ರಿಕೆಯನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಈ ಮೂಲಕ ಸಾಮಾನ್ಯ ಜ್ಞಾನಗಳಿಸಲು ಸಾಧ್ಯ ಎಂದರು. ಕಾಲೇಜಿನ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮಾನ್ಯ ಪರಿಸರ ಸಂರಕ್ಷಣೆಯ ಬಗ್ಗೆ ಮತ್ತು ಎಂಜಿಎA ಪದವಿ ಕಾಲೇಜಿನ ವಿದ್ಯಾರ್ಥಿನಿ ಖುಷಿ ‘ಮಾಧ್ಯಮ ಹಾಗೂ ಸಮಾಜ’ ಎಂಬ ವಿಷಯ ಮಂಡಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಟಿ.ಆರ್. ಪ್ರಭುದೇವ್ ಮಾತನಾಡಿದರು.
ಕಳೆದ ಸಾಲಿನ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಬಿ.ಎಸ್. ತನುಷ ಪೋಷಕರನ್ನು ಮತ್ತು ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಅಂಕಗಳಿಸಿದ ಎಂ.ವೈ. ನಿಹಾರಿಕಾ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಳೊಂದಿಗೆ ‘ಪರಿಸರ ಮತ್ತು ಮಾಧ್ಯಮ’ದ ಬಗ್ಗೆ ಸಂವಾದ ನಡೆಸಲಾಯಿತು. ಖಜಾಂಚಿ ಕುಡೆಕಲ್ ಗಣೇಶ್, ಜಿಲ್ಲಾ ನಿರ್ದೇಶಕರಾದ ಷಂಶುದ್ದೀನ್, ಸಂಘದ ನಿರ್ದೇಶಕರುಗಳಾದ ವಿನೋದ್, ಮಹಮ್ಮದ್ ಮುಸ್ತಾಫಾ, ಸದಸ್ಯರಾದ ಜಯಪ್ರಕಾಶ್ ಹಾಗೂ ಚೈತನ್ಯ ಇದ್ದರು.
ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಕಾರ್ಯಕ್ರಮ ಸಂಚಾಲಕರಾದ ಕೆ.ಕೆ. ನಾಗರಾಜ ಶೆಟ್ಟಿ ನಿರೂಪಿಸಿದರು. ಪ್ರಧಾನ ಕಾರ್ಯ ದರ್ಶಿ ವನಿತಾ ಚಂದ್ರಮೋಹನ್ ಸ್ವಾಗತಿಸಿ, ಸಂಘದ ನಿರ್ದೇಶಕ ಕೆ.ಜೆ. ಶಿವರಾಜ್ ವಂದಿಸಿದರು.