ಮಡಿಕೇರಿ, ಮೇ ೨೮: ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ತಾ.೨೯ ರಿಂದ (ಇಂದಿನಿAದ) ಪುನರ್ ಆರಂಭವಾಗಲಿದ್ದು, ತಾ.೩೧ ರಂದು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಪ್ರಾರಂಭೋತ್ಸವ ಜರುಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಎಂ.ಮಹದೇವಸ್ವಾಮಿ ತಿಳಿಸಿದ್ದಾರೆ.

ಪ್ರಸಕ್ತ (೨೦೨೪-೨೫) ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳನ್ನು ಪುನರ್ ಆರಂಭಿಸುವ ಸಂಬAಧ ಅಗತ್ಯ ಪೂರ್ವ ಸಿದ್ಧತೆಯು ತಾ.೨೯ ರಂದು (ಇಂದು) ನಡೆಯಲಿದೆ. ಶಾಲಾ ಆವರಣ, ಶಾಲಾ ಕೊಠಡಿ ಹಾಗೂ ಶೌಚಾಲಯ ಸ್ವಚ್ಚತೆ, ಕುಡಿಯುವ ನೀರು, ಸಂಪು, ಟ್ಯಾಂಕ್ ಸ್ವಚ್ಚತೆ, ಅಡುಗೆ ಮನೆ ಪಾತ್ರೆಗಳು, ಆಹಾರ ಧಾನ್ಯಗಳ ವ್ಯವಸ್ಥೆ, ಶಾಲಾ ವೇಳಾಪಟ್ಟಿ, ತರಗತಿ ವೇಳಾಪಟ್ಟಿ, ಶಿಕ್ಷಕರಿಗೆ ವಿಷಯ ಮತ್ತು ತರಗತಿ ಹಂಚಿಕೆ ಮತ್ತಿತರ ಕಾರ್ಯಗಳು ನಡೆಯಲಿವೆ ಎಂದು ವಿವರಿಸಿದರು.

ತಾ.೩೦ ರಂದು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಪೋಷಕರ ಜೊತೆ ಪೂರ್ವಭಾವಿ ಸಭೆಯು ಆಯಾಯ ಶಾಲೆಗಳಲ್ಲಿ ನಡೆಯಲಿದೆ. ತಾ.೩೧ ರಂದು ಶಾಲಾ ಪ್ರಾರಂಭೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.

ತಾ.೩೧ ರಂದು ಶಾಲೆಗಳಿಗೆ ತಳಿರು-ತೋರಣ ಕಟ್ಟಿ, ಗುಲಾಬಿ ಹೂವು ನೀಡಿ, ಸಿಹಿ ಹಂಚುವ ಮೂಲಕ ಮಕ್ಕಳನ್ನು ಬರಮಾಡಿಕೊಳ್ಳಲಾಗುತ್ತದೆ. ಹಾಗೆಯೇ ಪಠ್ಯಪುಸ್ತಕ ಹಾಗೂ ಸಮವಸ್ತç ವಿತರಣೆ ಮಾಡಲಾಗುತ್ತದೆ. ಪಾಠ ಪ್ರವಚನ ಪ್ರಾರಂಭಿಸಿ ಬಿಸಿಯೂಟದೊಂದಿಗೆ ಕಾರ್ಯಕ್ರಮ ಶುರುವಾಗಲಿದೆ ಎಂದು ವಿವರಿಸಿದರು.

ಶಾಲೆಯ ಮಕ್ಕಳು ಶಾಲೆಗೆ ದಾಖಲಾಗುವ ಸಂಬAಧ ಎಸ್‌ಎಟಿಎಸ್ ತಂತ್ರಾAಶದಲ್ಲಿ ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ಪ್ರಗತಿ ಪತ್ರವನ್ನು ಹಾಗೂ ಬೇರೆ ಶಾಲೆಗೆ ವರ್ಗಾವಣೆ ಪತ್ರಗಳನ್ನು ಕೋರಿಕೆ ಮೇರೆಗೆ ವರ್ಗಾಯಿಸುವುದು, ಪ್ರಸಕ್ತ ಸಾಲಿಗೆ ೧ ನೇ ತರಗತಿಗೆ ದಾಖಲಾಗುವ ಮಕ್ಕಳ ಮಾಹಿತಿಯನ್ನು ಎಸ್‌ಎಟಿಎಸ್ ತಂತ್ರಾAಶದಲ್ಲಿ ಇಂದೀಕರಿಸಲಾಗುತ್ತದೆ (ಮಕ್ಕಳ ದಾಖಲಾತಿ) ಎಂದು ಮಾಹಿತಿ ನೀಡಿದರು.

(ಮೊದಲ ಪುಟದಿಂದ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ತರಗತಿಗಳು ನಡೆಯಲಿವೆ. ತಾ.೩೧ ರಿಂದ ಮೂರನೇ ತರಗತಿ ಮಕ್ಕಳಿಗೆ ೪೦ ದಿನಗಳ ವಿದ್ಯಾ ಪ್ರವೇಶ ಕಾರ್ಯಕ್ರಮದ ಮಾರ್ಗಸೂಚಿ ಮತ್ತು ವೇಳಾಪಟ್ಟಿಯಂತೆ ತರಗತಿ ನಡೆಸಲಾಗುತ್ತದೆ. ಸೇತುಬಂಧ ಚಟುವಟಿಕೆ ಮತ್ತು ಮೂಲ ಕಲಿಕಾಂಶ ಆಧಾರಿತ ಕಲಿಕೆಯನ್ನು ಅನುಷ್ಠಾನಗೊಳಿಸಿ ಮಕ್ಕಳಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನವನ್ನು ಅಭಿವೃದ್ಧಿಪಡಿಸಿ ಕಲಿಕಾ ಅಂತರವನ್ನು ನೀಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಎಲ್ಲಾ ಸಿಆರ್‌ಪಿ, ಡಿಆರ್‌ಪಿ, ಬಿಐಇಆರ್‌ಟಿ ಹಾಗೂ ಇಸಿಒ ಗಳು ತಮ್ಮ ವ್ಯಾಪ್ತಿಗೆ ಬರುವ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಗಮನಹರಿಸುವುದು, ಶಾಲೆಯಲ್ಲಿ ಮಾಡಿಕೊಂಡಿರುವ ಪೂರ್ವ ಸಿದ್ಧತೆಗಳನ್ನು ಖಾತರಿಪಡಿಸಿಕೊಳ್ಳಲು ತಿಳಿಸಲಾಗಿದೆ.

ತಾ.೨೯ ರಿಂದ ದಾಖಲಾತಿ ಆಂದೋಲನ ನಡೆಸಿ ಮನೆ ಮನೆಗೆ ಭೇಟಿ ನೀಡಿ ನಿಗದಿತ ವಯೋಮಾನದ ಮಕ್ಕಳನ್ನು ಶಾಲೆಗೆ ಬರ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುತ್ತದೆ.

ಮಳೆಗಾಲ ಆರಂಭ ಆಗಿರುವುದರಿಂದ ಶಾಲಾ ಕೊಠಡಿ ಸುರಕ್ಷತೆ ಬಗ್ಗೆ ಆದ್ಯ ಗಮನಹರಿಸುವುದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಾಲ ಕಾಲಕ್ಕೆ ಹೊರಡಿಸುವ ಮಾರ್ಗಸೂಚಿ, ಸುತ್ತೋಲೆ, ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಹಿತಿ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಳೆದ ವರ್ಷ(೨೦೨೩-೨೪ ನೇ ಸಾಲಿನಲ್ಲಿ ಸರ್ಕಾರಿ ಅನುದಾನಿತ, ಅನುದಾನ ರಹಿತ) ೧ ರಿಂದ ೧೦ನೇ ತರಗತಿವರೆಗೆ ೭೨,೧೬೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.

ಪೂರಕ ಪರೀಕ್ಷೆ-೨: ಜೂನ್, ೧೪ ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ-೨ ನಡೆಯಲಿದೆ, ಸಿ ಮತ್ತು ಸಿ+ ಪಡೆದಿರುವ ೬೦ ವಿದ್ಯಾರ್ಥಿಗಳು, ಪುನರಾವರ್ತಿತ ೬೨೯ ಮತ್ತು ಖಾಸಗಿಯಾಗಿ ೧೫ ಒಟ್ಟು ೭೦೪ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ-೨ ಬರೆಯಲಿದ್ದಾರೆ.

ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆಯ ಜೂನಿಯರ್ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ-೨ ಬರೆಯುವ ವಿದ್ಯಾರ್ಥಿಗಳಿಗೆ ‘ವಿಶೇಷ ಪರಿಹಾರ ಬೋಧನೆ’ ತರಗತಿಗಳು ಮೇ, ೨೯ ರಿಂದ ಜೂನ್, ೧೩ ರವರೆಗೆ ಆಯಾಯ ಶಾಲೆಗಳಲ್ಲಿ ನಡೆಯಲಿದೆ.

ಕೊಡಗು ಜಿಲ್ಲೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ೪ನೇ ಸ್ಥಾನ ಪಡೆದಿದ್ದು, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿರುವುದು ವಿಶೇಷವಾಗಿದೆ ಎಂದು ಅವರು ವಿವರಿಸಿದ್ದಾರೆ.