ಮಡಿಕೇರಿ ಮೇ ೨೮: ನಿರುದ್ಯೋಗ ದಿಂದಾಗಿ ಸಮಾಜದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತಿದ್ದು, ತಾವು ಗೆದ್ದು ಬಂದರೆ ನಿರುದ್ಯೋಗದ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡುವುದಾಗಿ ಕರ್ನಾಟಕ ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಿ.ಮಹಮ್ಮದ್ ತುಂಬೆ ಹೇಳಿದರು.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಪ್ರಜ್ಞಾವಂತ ಮತದಾರರು ನನಗೆ ಹೆಚ್ಚಿನ ಮತಗಳನ್ನು ನೀಡುತ್ತಾರೆ ಎನ್ನುವ ವಿಶ್ವಾಸವಿದೆ.
ಇಂದು ಅಸಂಖ್ಯಾತ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ತಮ್ಮ ಮುಂದಿನ ಭವಿಷ್ಯದ ಬಗ್ಗೆ ಅತಂತ್ರತೆಯ ಬದುಕನ್ನು ಸಾಗಿಸುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಅನೇಕ ಸಮಸ್ಯೆಗಳು ತಲೆದೋರುತ್ತಿವೆ. ಸರಕಾರಗಳು ಈ ಕುರಿತು ಯಾವುದೇ ಯೋಜನೆಗಳನ್ನು ರೂಪಿಸುವಂತೆ ಕಂಡು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಗೆದ್ದು ಬಂದರೆ ನಿರುದ್ಯೋಗಿ ಪದವೀಧರರ ಬೇಡಿಕೆಗಳ ಪರ ಧ್ವನಿಯಾಗುತ್ತೇನೆ. ನಿರುದ್ಯೋಗಿ ಪದವೀಧರರಿಗೆ ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳನ್ನು ಆರಂಭಿಸುವAತೆ ಸರಕಾರದ ಗಮನ ಸೆಳೆಯುತ್ತೇನೆ. ಕರ್ನಾಟಕದಲ್ಲಿರುವ ವಿವಿಧ ವಿಶ್ವವಿದ್ಯಾನಿಲಯಗಳ ಪದವಿ/ಸ್ನಾತಕೋತ್ತರ ವಿದ್ಯಾರ್ಥಿಗಳ ಅಂಕಪಟ್ಟಿ ಸಕಾಲದಲ್ಲಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೋವಿಡ್ ಕಾರಣದಿಂದ ಸರಕಾರಿ ಹುದ್ದೆಗಳ ನೇಮಕಾತಿ ಹೊಂದದೆ. ಬಾಕಿ ಉಳಿದಿರುವ ಉದ್ಯೋಗಾಕಾಂಕ್ಷಿಗಳ ನೇಮಕಾತಿ ಯಲ್ಲಿ ವಯೋಮಿತಿ ಸಡಿಲಿಕೆ ಬಗ್ಗೆ ಪ್ರಯತ್ನಿಸುತ್ತೇನೆ. ಎನ್ಇಪಿ ಮತ್ತು ಎಸ್ಇಪಿ ನಡುವಿನ ಗೊಂದಲವನ್ನು ಸರಿಪಡಿಸುವ ಬಗ್ಗೆ ಸರಕಾರದ ಗಮನ ಸೆಳೆಯುತ್ತೇನೆ.
ತತ್ಸಮಾನ ಪದವಿಗಳ(ಹಿಂದಿ, ಸಂಸ್ಕೃತ) ಬಗ್ಗೆ ಇರುವ ಗೊಂದಲಗಳ ನಿವಾರಣೆಗೆ ಪ್ರಯತ್ನ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಸರಕಾರದೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲು ಶ್ರಮಿಸುತ್ತೇನೆ ಎಂದು ಬಿ.ಮಹಮ್ಮದ್ ತುಂಬೆ ಹೇಳಿದರು.