ಅನಿಲ್ ಎಚ್.ಟಿ.
ಮಡಿಕೇರಿ, ಮೇ ೨೭ : ಗ್ರಾಮಮಟ್ಟದಲ್ಲಿ ಅಧಿಕಾರದ ಆಧಾರ ಸ್ತಂಭಗಳು ಎಂದೇ ಕರೆಯಲಾಗುವ, ಆಡಳಿತ ವಿಕೇಂದ್ರೀಕರಣದ ಪ್ರಮುಖ ಭಾಗವೇ ಆಗಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸ್ಥಾನಗಳಿಗೆ ಮಳೆಗಾಲದಲ್ಲಿಯೇ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.
ಕೊಡಗೂ ಸೇರಿದಂತೆ ರಾಜ್ಯದಲ್ಲಿ ಜಿ.ಪಂ. ಮತ್ತು ತಾ.ಪಂ. ಆಡಳಿತ ಇಲ್ಲದೇ ೩ ಸುದೀರ್ಘ ವರ್ಷಗಳೇ ಕಳೆದಿವೆ. ಕಳೆದ ವರ್ಷ ವಿಧಾನಸಭೆ ಮತ್ತು ಈ ವರ್ಷ ಲೋಕಸಭಾ ಚುನಾವಣೆಗಳು ಕರ್ನಾಟಕದಲ್ಲಿ ಯಾವುದೇ ವಿಘ್ನಗಳಿಲ್ಲದೇ ಸುಸೂತ್ರವಾಗಿ ನಡೆದಿದ್ದರೂ, ಗ್ರಾಮೀಣ ಭಾಗದಲ್ಲಿ ಅಧಿಕಾರ ಹೊಂದಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣಾ ಭಾಗ್ಯಕ್ಕೆ ಸಮಯ ನಿಗದಿಯಾಗಲೇ ಇಲ್ಲ.
ಇದೀಗ ಚುನಾವಣಾ ಆಯೋಗವು ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳನ್ನು ನಡೆಸಲು ಸಿದ್ದ ಎಂದು ನ್ಯಾಯಾಲಯಕ್ಕೆ ಹೇಳಿರುವ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಕೇಂದ್ರದಲ್ಲಿ ನೂತನ ಸರ್ಕಾರ ರಚನೆಯ ಅಬ್ಬರಗಳೆಲ್ಲಾ ಮುಗಿದ ಕೂಡಲೇ ಅಂದರೆ ಜೂನ್ ಅಂತ್ಯದ ವೇಳೆಗೆ ಜಿ.ಪಂ., ತಾ.ಪಂ. ಚುನಾವಣೆಗೆ ಮುಹೂರ್ತ ನಿಗದಿಯಾಗುವ ಸಾಧ್ಯತೆ ಇದೆ.
ಹೀಗೇನಾದರೂ ಆದಲ್ಲಿ ಜುಲೈ ಅಥವಾ ಸೆಪ್ಟೆಂಬರ್‌ನಲ್ಲಿ ನಡೆಯಬಹುದಾದ ಚುನಾವಣೆಗೆ ಕೊಡಗಿನಲ್ಲಿ ಮಳೆಯ ಅಡ್ಡಿ ಇರಲಿದೆ. ಅಂದರೆ ಮಳೆಯ ನಡುವೇ ಎರಡೂ ಕ್ಷೇತ್ರಗಳ ಚುನಾವಣೆಗಾಗಿ ಅಭ್ಯರ್ಥಿಗಳು ಕಸರತ್ತು ನಡೆಸುವ ಅನಿವಾರ್ಯತೆ ಇದೆ. ಮುಂಗಾರಿನಲ್ಲಿ ಚುನಾವಣೆ ನಡೆದಲ್ಲಿ ಗ್ರಾಮೀಣ ಭಾಗದಲ್ಲಿ ಮತದಾನದ ಪ್ರಮಾಣವೂ ಇಳಿಮುಖವಾಗುವ ಸಾಧ್ಯತೆ ಇಲ್ಲದಿಲ್ಲ. ಹೀಗಾದಲ್ಲಿ ಗ್ರಾಮೀಣ ಭಾಗದ ಹಿತದೃಷ್ಟಿಯ ಜಿ.ಪಂ. ಮತ್ತು ತಾ.ಪಂ.ಗಳಿಗೆ ಗ್ರಾಮೀಣ ವ್ಯಾಪ್ತಿಯಲ್ಲಿಯೇ ಸ್ಪಂದನ ದೊರಕದಂತಾಗುವ ಸಂಭವವೂ ಇದೆ.
ಇದೇ ಮೊದಲ ಬಾರಿಗೆ ಕರ್ನಾಟಕದ ೩೧ ಜಿಲ್ಲಾ ಪಂಚಾಯಿತಿಗಳು, ೨೩೯ ತಾಲೂಕು ಪಂಚಾಯಿತಿಗಳಲ್ಲಿ ಪ್ರತಿನಿಧಿಗಳು ಇಲ್ಲದೇ ಅಧಿಕಾರಿಗಳಿಂದಲೇ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕಾರ್ಯಗಳು ೩ ವರ್ಷಗಳಿಂದ ನಡೆಯುವಂತಾಗಿದೆ. ಕೇಂದ್ರ ಹಣಕಾಸು ಆಯೋಗ ನೀಡುವ ರೂ. ೩ ಕೋಟಿ ಅನುದಾನ ಕೂಡ ಜಿ.ಪಂ.ಗೆ ಲಭಿಸುತ್ತಿಲ್ಲ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರತಿನಿಧಿಗಳೇ ಇಲ್ಲದೇ ತಮ್ಮ ವ್ಯಾಪ್ತಿಯ ಕೆಲಸ ಕಾರ್ಯಗಳ ಒತ್ತಡ ಹೆಚ್ಚುತ್ತಲೇ ಇದೆ. ತಾವು ಆರಿಸಿದ ಪ್ರತಿನಿಧಿ ಮೂಲಕ ತಮ್ಮೂರಿನ ಪ್ರಗತಿ ಕಾರ್ಯ ಕೈಗೊಳ್ಳಬೇಕಾದ ಗ್ರಾಮೀಣ ಜನತೆಗೆ ಪ್ರತಿನಿಧಿಯ ಆಯ್ಕೆಯೇ ಆಗದಿರುವುದರಿಂದಾಗಿ ೩ ವರ್ಷಗಳಿಂದ ಪ್ರತಿನಿಧಿಗಳೇ ಇಲ್ಲದಂತಾಗಿದೆ. ಪ್ರತೀ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲೂ ಪ್ರತಿನಿಧಿಗಳೇ ಇಲ್ಲದಂತಾಗಿದೆ. ಹೀಗಾಗಿ ಯಾವ ಊರಿನಲ್ಲಿ ಯಾವ ರೀತಿಯ ಪ್ರಗತಿ ಕಾರ್ಯ ನಡೆಸಬೇಕೆಂದು ಜನರ ಪ್ರತಿನಿಧಿ ಮೂಲಕ ಸಲ್ಲಿಕೆಯಾಗಬೇಕಾಗಿದ್ದ ಪ್ರಸ್ತಾವನೆಗಳು ವಿಳಂಬವಾಗಿದೆ.
ಪ್ರತೀ ಜಿಲ್ಲೆಯಲ್ಲಿಯೂ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕಚೇರಿಗಳು ಜನಪ್ರತಿನಿಧಿಗಳಿಲ್ಲದೇ, ಜನರು ಕೆಲಸ ಕಾರ್ಯಗಳಿಗೆ ಬರುವುದಿಲ್ಲವಾದ್ದರಿಂದಾಗಿ ಬಿಕೋ ಎನ್ನುತ್ತಿದೆ. ಸಭೆ ನಡೆಸಲು ಇರುವ ಉದ್ದೇಶಿತ ಸಭಾಂಗಣಗಳು ಇತರ ಕಾರ್ಯಗಳ ಸಭೆಗಳಿಗೆ ಬಳಸಲ್ಪಡುವಂತಾಗಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗಲೇ ಜಿ.ಪಂ. ಮತ್ತು ತಾ.ಪಂ.ಗಳಿಗೆ ಚುನಾವಣೆ ನಡೆಯಬೇಕಾಗಿತ್ತು. ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಆದರೆ ಚುನಾವಣಾ ಆಯೋಗಕ್ಕೆ ಇದ್ದ ಕ್ಷೇತ್ರ ಪುನರ್ ವಿಂಗಡಣೆ, ಮೀಸಲು ನಿಗದಿಯ ಅಧಿಕಾರ ತನ್ನ ಬಳಿಯಿರಬೇಕೆಂಬ ಸರ್ಕಾರದ ನಿರ್ಧಾರದಿಂದಾಗಿ ಚುನಾವಣಾ ಆಯೋಗವೂ ಈ ವಿಚಾರದಲ್ಲಿ ತಟಸ್ಥ ದೋರಣೆ ತಳೆಯುವಂತಹ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರವೂ ಕ್ಷೇತ್ರ ಪುನರ್ ವಿಂಗಡಣೆ, ಮೀಸಲು ನಿಗದಿ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸಿತ್ತು. ಹೀಗಾಗಿ ಹೊಸ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ೧ ವರ್ಷವಾದರೂ ಚುನಾವಣಾ ಮಾತ್ರ ನಡೆಸಲು ಸಾಧ್ಯವಾಗಲೇ ಇಲ್ಲ.
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ವಿಳಂಬಕ್ಕೆ ಬಿಜೆಪಿ ಕಾರಣ ಎಂದು ಕಾಂಗ್ರೆಸ್, ಇಲ್ಲ ಕಾಂಗ್ರೆಸ್ ಕಾರಣವೆಂದು ಬಿಜೆಪಿ ಆರೋಪಿಸುವ ಸ್ಥಿತಿಯಲ್ಲಿಯೂ ಇಲ್ಲ. ಎರಡೂ ಸರ್ಕಾರಗಳ ವಿಳಂಬ ಧೋರಣೆ ಕೂಡ ಈ ಚುನಾವಣೆಗಳು ತಡವಾಗುತ್ತಿರಲು ಕಾರಣವಾಗಿದೆ.
ಇದೀಗ ಜಿ.ಪಂ. ತಾ.ಪಂ. ಚುನಾವಣೆಗಳು ವಿಳಂಬವಾಗುತ್ತಿರುವುದನ್ನು ಅರಿತ ಚುನಾವಣಾ ಆಯೋಗವು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದ್ದು ತನಗೆ ಇದ್ದ ಮೀಸಲು ನಿಗದಿ ಮತ್ತು ಕ್ಷೇತ್ರ ಪುನರ್ ವಿಂಗಡಣೆಯ ಅಧಿಕಾರವನ್ನು ಮರಳಿ ನೀಡಬೇಕೆಂದು ಕೋರುವ ಸಾಧ್ಯತೆ ಇದೆ ಎನ್ನಲಾಗಿದೆ.
ಚುನಾವಣಾ ಆಯೋಗವೇನಾದರೂ ನ್ಯಾಯಾಲಯದ ಮೆಟ್ಟಿಲೇರಿದಲ್ಲಿ ನ್ಯಾಯಾಲಯ ಈ ವಿಳಂಬವನ್ನು ಗಂಭೀರವಾಗಿ ಪರಿಗಣಿಸುವ ಎಲ್ಲಾ ಸಾಧ್ಯತೆಗಳಿದೆ. ಸರ್ಕಾರಕ್ಕೆ ಮತ್ತೊಮ್ಮೆ ಛೀಮಾರಿ ಹಾಕಿ ಶೀಘ್ರ ಚುನಾವಣೆ ನಡೆಸುವಂತೆ ಆದೇಶಿಸುವ ಸಾಧ್ಯತೆಯೂ ಇದೆ. ಹೀಗಾದಾಗ ಮುಂಗಾರಿನಲ್ಲಿಯೇ ರಾಜ್ಯದಲ್ಲಿ ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳು ನಡೆಯಬಹುದು.
ಕೊಡಗಿನಲ್ಲಿಯೂ ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳಿಗೆ ಸ್ಪರ್ಧಿಸಲು ಈಗಾಗಲೇ ಅನೇಕರು ಸಿದ್ಧತೆ ನಡೆಸಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಡ ಕಾಂಗ್ರೆಸ್, ಪ್ರತಿಪಕ್ಷವಾಗಿರುವ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಇದೀಗ ಮತ್ತೊಮ್ಮೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಲೋಕಸಭೆ, ವಿಧಾನಸಭಾ ಚುನಾವಣೆಗಳಲ್ಲಿ ಕಂಡುಬAದಿರುವ ಬಿಜೆಪಿ - ಜೆಡಿಎಸ್ ಮೈತ್ರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಇರಲಿದೆಯೇ ಎಂಬುದು ಕುತೂಹಲಕಾರಿಯಾಗಲಿದೆ. ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿ ಬೀಗುತ್ತಿರುವ ಕಾಂಗ್ರೆಸ್ ಪಾಲಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಜಯಸಾಧಿಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ ಸೋಲುಕಂಡಿರುವ ಬಿಜೆಪಿಗೆ ಕೊಡಗಿನ ತನ್ನ ಭದ್ರಕೋಟೆಯನ್ನು ಹೇಗಾದರೂ ಮರಳಿ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಯಾವ ಪಕ್ಷಕ್ಕೆ ಅಧಿಕ ಮತಗಳು ಲಭಿಸಲಿದೆ ಎಂಬುದು ಕೂಡ ಜಿ.ಪಂ., ತಾ.ಪಂ. ಚುನಾವಣೆಯ ಗೆಲುವಿನ ಪೂರ್ವಸೂಚನೆಯನ್ನು ನಿರ್ಧರಿಸಬಹುದಾಗಿದೆ.ಮನಸ್ಸಿಲ್ಲದಿದ್ದಲ್ಲಿ ಈ ವ್ಯವಸ್ಥೆಗೆ ಅಂತ್ಯ ಹೇಳಲಿ - ಯಂ.ಸಿ. ನಾಣಯ್ಯ
ಪ್ರಜಾಪ್ರಭುತ್ವದಲ್ಲಿ ಅಧಿಕಾರ ವಿಕೇಂದ್ರೀಕರಣ ಸೂಕ್ತ ಎಂದು ಬಹಳ ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ ಹಿರಿಯ ರಾಜಕೀಯ ಮುತ್ಸದ್ಧಿ ಯಂ.ಸಿ. ನಾಣಯ್ಯ ಕೂಡ ಜಿ.ಪಂ., ತಾ.ಪಂ. ಚುನಾವಣಾ ವಿಳಂಬದ ವಿರುದ್ಧ ಸಿಡಿದೆದ್ದಿದ್ದಾರೆ. ವಿಧಾನಸಭೆ, ಪರಿಷತ್ ಚುನಾವಣೆಗಿಂತಲೂ ಗ್ರಾಮೀಣ ಭಾಗದ ಅಭ್ಯುದಯಕ್ಕಾಗಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಅತೀ ಮುಖ್ಯ, ಜಿ.ಪಂ., ತಾ.ಪಂ. ನಂತಹ ಸ್ಥಳೀಯ ಚುನಾವಣೆಗಳನ್ನು ನಡೆಸಲು ಆಸಕ್ತಿಯಿಲ್ಲವಾದಲ್ಲಿ ಸಂವಿಧಾನದ ೭೩ ಮತ್ತು ೭೪ನೇ ವಿಧಿಗಳನ್ನು ರದ್ದುಗೊಳಿಸಿ ಪಂಚಾಯತ್ ರಾಜ್ ವ್ಯವಸ್ಥೆಗೇ ಅಂತ್ಯ ಹೇಳಿ. ಸ್ಥಳೀಯವಾಗಿರುವ ಸಮಸ್ಯೆಗಳನ್ನು ಆಯಾ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿಯೇ ಪರಿಹರಿಸುವ ಸಲುವಾಗಿಯೇ ಜಾರಿಗೆ ತಂದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ೩ ವರ್ಷಗಳಿಂದಲೂ ಚುನಾವಣೆ ನಡೆಸಲು ಅಸಾಧ್ಯವಾಯಿತು ಎಂದಾದಲ್ಲಿ ಅದು ಸರ್ಕಾರದ ಇಚ್ಚಾಶಕ್ತಿಯ ಕೊರತೆಗೆ ನಿದರ್ಶನ. ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಸ್ಪಂದಿಸಲು ಇರುವ ಇಂತಹ ವ್ಯವಸ್ಥೆ ಧೂಳುಹಿಡಿದಿರುವುದು ಯಾವುದೇ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದೂ ಯಂ.ಸಿ. ನಾಣಯ್ಯ ತಮ್ಮ ಆಕ್ಷೇಪ ಹೊರಹಾಕಿದ್ದಾರೆ.
ಕೊಡಗಿಗೆ ೨೯ ಜಿ.ಪಂ. ಸ್ಥಾನಗಳು
ಕೊಡಗಿನ ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಪರಿಶ್ರಮದಿಂದಾಗಿ ಕೊಡಗಿನ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಸ್ಥಾನಗಳು ಜಿ.ಪಂ.ನಲ್ಲಿ ದೊರಕಿವೆ. ೨೩ ಸ್ಥಾನಗಳಿಂದ ೨೯ ಸ್ಥಾನಗಳಿಗೆ ಜಿ.ಪಂ. ಕ್ಷೇತ್ರ ಹೆಚ್ಚಳವಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಕೊಡಗಿನ ಶಾಸಕರ ಪ್ರಯತ್ನ ಸಫಲಗೊಂಡಿದೆ.
೧೬ ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಜಿ.ಪಂ. ತಲಾ ಕ್ಷೇತ್ರ ಮಂಜೂರಾಗಲಿದೆ. ಇನ್ನು ಮೀಸಲು ನಿಗದಿ ಅಂತಿಮ ಹಂತದಲ್ಲಿದ್ದು, ನೀತಿಸಂಹಿತೆ ಮುಗಿದ ಕೂಡಲೇ ಈ ಹಂಚಿಕೆ ಕೂಡ ನಡೆಯಲಿದೆ. ಆದರೆ ತಾಲೂಕು ಪಂಚಾಯಿತಿಗಳಿಗೆ ಮಾತ್ರ ಜಿಲ್ಲೆಗೆ ಈ ಹಿಂದಿನAತೆಯೇ ೫೧ ಸ್ಥಾನಗಳು ಮಾತ್ರ ದೊರಕಿದೆ. ಇದನ್ನು ಕೂಡ ಹೆಚ್ಚಿಸುವ ಚಿಂತನೆಗೆ ಹಿನ್ನೆಡೆಯಾಗಿದೆ. ಮುಂದಿನ ದಿನಗಲ್ಲಿ ತಾ.ಪಂ. ಸ್ಥಾನ ಹೆಚ್ಚಳಕ್ಕೂ ಪ್ರಯತ್ನಿಸಲಾಗಿದೆ
- ವಿ.ಪಿ. ಶಶಿಧರ್, ಕಾಂಗ್ರೆಸ್ ಮುಖಂಡ ವಿಳಂಬಕ್ಕೆ ಕಾರಣಗಳೇನು?
* ಕೊಡಗೂ ಸೇರಿದಂತೆ ರಾಜ್ಯದಲ್ಲಿ ೩೧ ಜಿ.ಪಂ. ಮತ್ತು ೨೭೬ ತಾ.ಪಂ.ಗಳ ಅಧಿಕಾರ ೨೦೨೧ ರ ಮೇ ತಿಂಗಳಿನಲ್ಲಿಯೇ ಮುಕ್ತಾಯವಾಗಿದೆ.
* ೨೦೨೧ ರ ಆಗಸ್ಟ್ನಲ್ಲಿ ಚುನಾವಣೆ ಸಿದ್ಧತೆಗಳು ಮುಕ್ತಾಯವಾಗಿ ಸೆಪ್ಟೆಂಬರ್‌ನಿAದ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಳ್ಳಬೇಕಾಗಿತ್ತು.
* ಈ ಹಂತದಲ್ಲಿ ಅಂದಿನ ಬಿಜೆಪಿ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ, ಮೀಸಲು ನಿಗದಿಗೆ ಮುಂದಾಯಿತು.
* ಇದನ್ನು ವಿರೋಧಿಸಿ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಚುನಾವಣೆ ನಿಗದಿಪಡಿಸಬೇಕಾದ ಹಂತದಲ್ಲಿಯೇ ಈ ರೀತಿ ಮಾಡುವುದು ಬೇಡ ಎಂದು ಹೇಳಿತ್ತು.
* ಆದರೆ ರಾಜ್ಯ ಸರ್ಕಾರವೇ ಕ್ಷೇತ್ರ ಪುನರ್ ವಿಂಗಡಣೆ, ಕ್ಷೇತ್ರ ನಿಗದಿ ಮಾಡುತ್ತೇವೆ. ಇದಕ್ಕಾಗಿ ಪಂಚಾಯತ್ ರಾಜ್ ಕಾನೂನಿಗೆ ತಿದ್ದುಪಡಿ ತರುತ್ತೇವೆ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
* ಹೀಗಿದ್ದರೂ ನಿಗದಿತ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿಸದೇ ಇದ್ದ ಅಂದಿನ ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿ ರೂ. ೫ ಲಕ್ಷದಂಡ ವಿಧಿಸಿತ್ತು
* ಹಿರಿಯ ಐಎಎಸ್ ಅಧಿಕಾರಿ ಎಂ. ಲಕ್ಷಿö್ಮನಾರಾಯಣ ನೇತೃತ್ವದಲ್ಲಿ ಕ್ಷೇತ್ರ ಪುನರ್ ವಿಂಗಡಣೆಗಾಗಿ ಸೀಮಾ ನಿರ್ಣಯ ಆಯೋಗ ರಚನೆ ಮಾಡಿತ್ತು. ಈ ಆಯೋಗವು ೩೦ ಜಿ.ಪಂ.ಗಳನ್ನು ೩೧ಕ್ಕೆ ಮತ್ತು ೧೭೬ ತಾ.ಪಂ.ಗಳನ್ನು ೨೩೯ಕ್ಕೆ ಹೆಚ್ಚಿಸಿ ತನ್ನ ವರದಿಯನ್ನು ಸರ್ಕಾರಕ್ಕೆ ನೀಡಿದೆ.
* ಆದರೂ ಕೂಡ ಸರ್ಕಾರ, ಕ್ಷೇತ್ರ ಪುನರ್ ವಿಂಗಡಣೆ, ಮೀಸಲು ನಿಗದಿಗೆ ಮೀನಾಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಜಿ.ಪಂ. ತಾ.ಪಂ.ಗಳಿಗೆ ಚುನಾವಣೆ ವಿಳಂಬವಾಗುತ್ತಲೇ ಇದೆ.
* ಲೋಕಸಭಾ ಮತ್ತು ವಿಧಾನಪರಿಷತ್ ಚುನಾವಣೆಗಳ ನೀತಿಸಂಹಿತೆ ಮುಗಿದ ಕೂಡಲೇ ಸರ್ಕಾರ ಜಿ.ಪಂ., ತಾ.ಪಂ.ಗಳಿಗೆ ಚುನಾವಣೆ ನಡೆಸಲು ಮುಂದಾಗದೇ ಇದ್ದಲ್ಲಿ, ಚುನಾವಣಾ ಆಯೋಗ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಿ ನ್ಯಾಯಾಧೀಶರ ಗಮನ ಸೆಳೆಯಲಿದೆ. ಮೊದಲಿದ್ದ ಅಧಿಕಾರವನ್ನೇ ಚುನಾವಣಾ ಆಯೋಗಕ್ಕೆ ನೀಡಬೇಕೆಂದು ಕೋರಲಿದೆ, ನೀತಿಸಂಹಿತೆ ಮುಕ್ತಾಯವಾದ ಕೂಡಲೇ ಆಯೋಗ ಈ ನಿಟ್ಟಿನಲ್ಲಿ ಮುಂದಡಿಯಿಡಲಿದೆ. ಹೀಗಾಗಿ ಇನ್ನು ಚುನಾವಣೆಗೆ ವಿಳಂಬವಾಗುವುದಿಲ್ಲ ಎಂದು ರಾಜ್ಯ ಚುನಾವಣಾ ಆಯುಕ್ತ ಬಸವರಾಜು ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.