ಮಡಿಕೇರಿ, ಮೇ ೨೭: ರಾಮಾಯಣದ ಪಾತ್ರಗಳನ್ನು ಪರಿಚಯಿಸುವ ಕಾರ್ಯಕ್ರಮಗಳು ಮೌಲ್ಯಗಳನ್ನು ಪ್ರತಿಪಾದಿಸಬೇಕು. ಅವು ಕೇವಲ ಮನೋರಂಜನೆಗಷ್ಟೇ ಸೀಮಿತವಾಗಬಾರದು ಎಂದು ಹಿರಿಯ ವಕೀಲ, ಲೇಖಕ ಬಾಲಸುಬ್ರಮಣ್ಯ ಕಂಜರ್ಪಣೆ ಅವರು ಅಭಿಪ್ರಾಯಪಟ್ಟರು.

ಮಡಿಕೇರಿಯ ಸಾಂಸ್ಕೃತಿಕ ಯಕ್ಷಗಾನ ಮಿತ್ರ ಮಂಡಳಿಯ ಬಿ ವತಿಯಿಂದ ಮಡಿಕೇರಿಯ ರೆಡ್ ಬ್ರಿಕ್ಸ್ ಸಭಾಂಗಣದಲ್ಲಿ ನಡೆದ ಸ್ವಗತ ಕಥನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪುರಾಣದ ಒಂದು ಪಾತ್ರದ ಒಳ ಹೊಕ್ಕು ತಾನೇ ಆ ವ್ಯಕ್ತಿಯಾಗಿ ಮಾತನಾಡುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ವೃತ್ತಿಯಲ್ಲಿ ಪುರೋಹಿತರೂ ಯಕ್ಷಗಾನ ಅರ್ಥಧಾರಿಯೂ ಆಗಿರುವ ಬೆಂಗಳೂರಿನ ವಿದ್ವಾನ್ ಅಜಿತ ಕಾರಂತ್ ಅವರು ರಾಮಾಯಣದ ವಿಭೀಷಣನಾಗಿ ಆ ಪಾತ್ರದ ಅಂತರAಗವನ್ನು ಸಭೆಯೆದುರು ಎಳೆ ಎಳೆಯಾಗಿ ತೆರೆದಿಟ್ಟರು.

ದಿವಂಗತ ಪಾದೇಕಲ್ಲು ನಾರಾಯಣ ಭಟ್ಟರ ಜನ್ಮ ಶತಮಾನದ ಪ್ರಯುಕ್ತ ರಾಮಾಯಣದ ಪಾತ್ರಗಳ ಅಂತರAಗ ಪರಿಚಯಿಸುವ ಈ ಸರಣಿ ನಾಡಿನಾದ್ಯಂತ ನಡೆಯುತ್ತಿದ್ದು, ಆರನೆಯ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು.

ಹಿರಿಯ ವಿದ್ವಾಂಸ ಪಾದೇಕಲ್ಲು ವಿಷ್ಣು ಭಟ್, ಯಕ್ಷಗಾನ ಅರ್ಥಧಾರಿ ಹಾಗೂ ಸರಣಿ ಸಂಚಾಲಕ ಗಣರಾಜ ಭಟ್, ಕುಂಬ್ಳೆ, ಸಾಂಸ್ಕೃತಿಕ ಯಕ್ಷಗಾನ ಮಿತ್ರ ಮಂಡಳಿಯ ಪ್ರಮುಖರೂ ಕಾರ್ಯಕ್ರಮ ಸಂಯೋಜಕರೂ ಆದ ನ್ಯಾಯವಾದಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮತ್ತು ಲೆಕ್ಕ ಪರಿಶೋಧಕ ಮಿತ್ತೂರು ಈಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು. ಬಾಲ ಕಲಾವಿದೆ ಮಿನುಗು ಪ್ರಾರ್ಥಿಸಿದರೆ, ವಿದ್ವಾನ್ ಪಾದೇಕಲ್ಲು ಶ್ರೀಹರಿ ಭಟ್ ಸರ್ವರನ್ನೂ ವಂದಿಸಿದರು.