ಸಿದ್ದಾಪುರ, ಮೇ ೨೮: ಹಾಡಹಗಲೇ ಕಾಡಾನೆಗಳ ಹಿಂಡು ಮುಖ್ಯರಸ್ತೆಗಾಗಿ ಸಂಚರಿಸುವ ಮೂಲಕ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿದ ಘಟನೆ ಸಿದ್ದಾಪುರದ ಸಮೀಪ ಅಂಬೇಡ್ಕರ್ ಕಾಲೋನಿಯ ಬಳಿ ಇಂದು ಸಂಜೆ ನಡೆದಿದೆ.
ಸಿದ್ದಾಪುರದ ಗುಯ್ಯಾ ಗ್ರಾಮದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಮರಿ ಆನೆಗಳು ಸೇರಿದಂತೆ ೨೩ಕ್ಕೂ ಅಧಿಕ ಕಾಡಾನೆಗಳ ಎರಡು ಗುಂಪುಗಳಾಗಿ ಬೇರ್ಪಟ್ಟು ರಸ್ತೆ ಮೂಲಕ ಸಂಚರಿಸುತ್ತಿರುವ ದೃಶ್ಯ ಸಂಜೆ ಕಂಡು ಬಂದಿತು. ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳು ಕಾಫಿ ತೋಟಗಳಲ್ಲಿ ಬಿಡು ಬಿಟ್ಟು ದಾಂಧಲೆ ನಡೆಸುತ್ತಿವೆ.
ಈ ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಂಗಳವಾರ ಸಂಜೆ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಲು ಪ್ರಯತ್ನಿಸಿದರೂ, ಕಾಡಾನೆಗಳು ಬೇರೆ ಬೇರೆ ಗುಂಪುಗಳಾಗಿ ಸಿದ್ದಾಪುರದ ಇಂಜಲಗೆರೆಯ ಮಂಡೇಪAಡ ಪ್ರವೀಣ್ ಬೋಪಯ್ಯ ಎಂಬವರ ಕಾಫಿ ತೋಟದೊಳಗೆ ನುಸುಳಿದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮ್ಮತಿ ಹೋಬಳಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರವೀಣ್, ಕಾಡಾನೆಗಳು ಕಾಫಿ ತೋಟದೊಳಗೆ ಬೀಡು ಬಿಟ್ಟು ದಾಂಧಲೆ ನಡೆಸುತ್ತಿವೆ. ಕೂಡಲೇ ಉಪಟಳ ನೀಡುತ್ತಿರುವ ಕಾಡಾನೆಯನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಭಾಗದಲ್ಲಿ ಒಂಟಿ ಸಲಗ ಒಂದು ಮಾನವನ ಮೇಲೆ ದಾಳಿ ನಡೆಸಲು ಯತ್ನಿಸುತ್ತಿದೆ. ಅದನ್ನು ಗುರುತಿಸಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳಿಗೆ ರೈತ ಸಂಘದ ವತಿಯಿಂದ ಪತ್ರ ರವಾನಿಸಲಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. - ವಾಸು