ಸೋಮವಾರಪೇಟೆ, ಮೇ ೨೭: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಸಿ ತಾಣ ಮಕ್ಕಳ ಗುಡಿ ಬೆಟ್ಟಕ್ಕೆ ತೆರಳುವ ರಸ್ತೆ ಅವ್ಯವಸ್ಥೆ ಹಾಗೂ ಅಶುಚಿತ್ವದ ಪರಿಸರವನ್ನು ಕಂಡ ಬೆಂಗಳೂರಿನ ಉದ್ಯಮಿಯೋರ್ವರು, ಸ್ವಂತ ಖರ್ಚಿನಿಂದ ರಸ್ತೆ ಅಗಲೀಕರಣ ಮಾಡಿ, ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಮಾದರಿಯಾಗಿದ್ದಾರೆ.

ಮಕ್ಕಳ ಗುಡಿ ಬೆಟ್ಟವು ಇತ್ತೀಚಿನ ದಿನಗಳಲ್ಲಿ ಸ್ಥಳೀಯಾಡಳಿತದ ಅನಾದರಕ್ಕೆ ಒಳಗಾಗಿದ್ದು, ನಿರ್ವಹಣೆಯಿಲ್ಲದೆ ಕಾಡುಪಾಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದರೆ, ಮಕ್ಕಳಗುಡಿ ಬೆಟ್ಟದ ಆವರಣ ಪುಂಡ ಪೋಕರಿಗಳ ಮೋಜಿನ ತಾಣವಾಗಿ ಪರಿವರ್ತನೆಯಾಗಿತ್ತು.

ಇದರಿಂದಾಗಿ ಪ್ರಾಕೃತಿಕ ಸೌಂದರ್ಯ ಸವಿಯಲು ಆಗಮಿಸುವ ಪ್ರಕೃತಿ ಪ್ರೇಮಿಗಳಿಗೆ, ಪ್ರವಾಸಿಗರಿಗೆ ಇಲ್ಲಿನ ವಾತಾವರಣ ಅಸಹನೀಯವಾಗಿತ್ತು. ಮಕ್ಕಳಗುಡಿ ಬೆಟ್ಟದ ವ್ಯೂ ಪಾಯಿಂಟ್ ನಲ್ಲಿ ಯಾವುದೇ ರೀತಿಯ ಸುರಕ್ಷತೆಗಳು ಇಲ್ಲ. ಎಲ್ಲಿ ನೋಡಿದರೂ ಮದ್ಯದ ಬಾಟಲಿಗಳು ಬಿದ್ದಿದ್ದರೆ, ಸಂಜೆಯಾದರೆ ಬೆಟ್ಟಕ್ಕೆ ಹೋಗಲು ಭಯಪಡುವ ಸನ್ನಿವೇಶ ನಿರ್ಮಾಣವಾಗಿತ್ತು.

ಒಟ್ಟಾರೆ ಈ ಸ್ಥಳವು ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದನ್ನು ಮನಗಂಡ ಬೆಂಗಳೂರಿನ ಉದ್ಯಮಿ ಸುರೇಶ್ ಅವರು, ಸ್ವಂತ ಖರ್ಚಿನಿಂದ ಯಂತ್ರದ ಮೂಲಕ ರಸ್ತೆಯ ಬದಿಯಲ್ಲಿದ್ದ ಮಣ್ಣು ಗುಡ್ಡಗಳು, ಗಿಡಗಂಟಿಗಳನ್ನು ತೆರವುಗೊಳಿಸಿ, ಇಡೀ ಪ್ರದೇಶದಲ್ಲಿ ಬಿದ್ದದ್ದ ಪ್ಲಾಸ್ಟಿಕ್, ಬಾಟಲ್ ಸಹಿತ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ ಮಕ್ಕಳ ಗುಡಿ ಬೆಟ್ಟವನ್ನು ಸ್ವಚ್ಛವಾಗಿಸಿದ್ದಾರೆ.

ಮಕ್ಕಳಗುಡಿ ಬೆಟ್ಟದ ಬಗ್ಗೆ ಸ್ಥಳೀಯ ಪಂಚಾಯತ್ ಮತ್ತು ಪ್ರವಾಸೋದ್ಯಮ ಇಲಾಖೆ ಗಮನ ಹರಿಸಿಲ್ಲ. ಇಲ್ಲಿಗೆ ಹೊರ ರಾಜ್ಯದಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಇದೀಗ ರಸ್ತೆ ದುರಸ್ತಿ, ಸ್ವಚ್ಛತಾ ಕಾರ್ಯವನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಗ್ರಾ.ಪಂ. ಹಾಗೂ ಸಂಬAಧಿಸಿದ ಇಲಾಖೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು. ಆಗ ಮಾತ್ರ ನಮ್ಮ ಸೇವೆ ಸಾರ್ಥಕವಾಗುತ್ತದೆ ಎಂದು ಬೆಂಗಳೂರಿನ ಉದ್ಯಮಿ ಸುರೇಶ್ ಅಭಿಪ್ರಾಯಿಸಿದ್ದಾರೆ.