ಸೋಮವಾರಪೇಟೆ, ಮೇ ೨೭: ಪಂಚಾಯತ್ ರಾಜ್ ಇಲಾಖೆ ವತಿಯಿಂದ ನೇರುಗಳಲೆ ಗ್ರಾ.ಪಂ. ಗ್ರಂಥಾಲಯದ ಮೂಲಕ ಸ್ಥಳೀಯ ಸಮುದಾಯ ಭವನದಲ್ಲಿ ಮಕ್ಕಳ ಬೇಸಿಗೆ ಶಿಬಿರ ನಡೆಯಿತು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿನೋದ್ ಕುಮಾರ್ ಅವರು ಶಿಬಿರಕ್ಕೆ ಚಾಲನೆ ನೀಡಿ, ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಅಡಗಿರುವ ಕಲಾತ್ಮಕತೆಯನ್ನು ಗುರುತಿಸಿ, ಪ್ರೋತ್ಸಾಹ ನೀಡಲು ಸಹಕಾರಿಯಾಗಿವೆ ಎಂದರು.

ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ಮೂಲಕ ಭವಿಷ್ಯದಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಛಾಪು ಮೂಡಿಸಲು ಶಿಬಿರಗಳು ಹೆಚ್ಚು ಅನುಕೂಲವಾಗಿವೆ. ಪೋಷಕರು ತಮ್ಮ ಮಕ್ಕಳ ಶಿಕ್ಷಣ, ಕ್ರೀಡೆ ಸೇರಿದಂತೆ ಇನ್ನಿತರ ರಚನಾತ್ಮಕ ಕಲೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಕೃಷ್ಣಪ್ಪ ಅವರು ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿದರು. ವಿವೇಕಾನಂದ ಟ್ರಸ್ಟ್ನ ಸುನಿತಾ ಅವರು ಬೇಸಿಗೆ ಶಿಬಿರದ ಮಹತ್ವದ ಬಗ್ಗೆ ವಿವರಿಸಿದರಲ್ಲದೆ, ಸ್ಥಳೀಯ ಗ್ರಂಥಾಲಯದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಗ್ರಂಥಾಲಯ ಮೇಲ್ವಿಚಾರಕಿ ಪದ್ಮಾವತಿ ಅವರು ಡಿಜಿಟಲ್ ಗ್ರಂಥಾಲಯದ ಉಪಯೋಗ, ಮಕ್ಕಳಲ್ಲಿ ಓದುವ ಮತ್ತು ಬರೆಯುವ ಹವ್ಯಾಸ ವೃದ್ಧಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಶಿಬಿರದಲ್ಲಿ ಒಟ್ಟು ೨೯ ಮಕ್ಕಳು ಭಾಗಿಯಾಗಿದ್ದರು.