ಮಡಿಕೇರಿ, ಮೇ ೨೮ : ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್, ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳನ್ನು ಮಾನ್ಯ ಮಾಡಬೇಕು ಸೇರಿದಂತೆ ಇಡೀ ಕೊಡವ ಜನಾಂಗದ ಯೋಗಕ್ಷೇಮಕ್ಕಾಗಿ ತಲಕಾವೇರಿ ಮತ್ತು ಪಾಡಿ ಶ್ರೀಇಗ್ಗುತ್ತಪ್ಪ ದೇವನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವಿಶೇಷ ಪ್ರಾರ್ಥನೆ ಸಲ್ಲಿಸಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಆದಿಮಸಂಜಾತ ಕೊಡವರ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಹಾಗೂ ಶ್ರೀಇಗ್ಗುತ್ತಪ್ಪ ದೇವನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಮುಖರು ರಾಜ್ಯಾಂಗದತ್ತವಾಗಿ ಕರ್ನಾಟಕದ ಅಧೀನದಲ್ಲಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್ ಮತ್ತು ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕನ್ನು ಮಾನ್ಯ ಮಾಡುವುದರೊಂದಿಗೆ ಕೊಡವ ಜನಾಂಗದ ಅಭ್ಯುದಯಕ್ಕೆ ಆಶೀರ್ವದಿಸುವಂತೆ ಕೋರಿದರು.
ಭೂಪರಿವರ್ತನೆ ವಿರುದ್ಧ ಜನಜಾಗೃತಿ
ಸಿದ್ದಾಪುರದ ೨೪೦೦ ಎಕರೆ ಖಾಸಗಿ ಕಾಫಿ ತೋಟದ ಭೂಪರಿವರ್ತನೆ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಭೂಪರಿವರ್ತನೆಗಳ ವಿರುದ್ಧ ಜೂ.೩ ರಿಂದ ಜಿಲ್ಲಾವ್ಯಾಪಿ ಸಿಎನ್‌ಸಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು.
ಮಡಿಕೇರಿ, ಸುಂಟಿಕೊಪ್ಪ, ಮಾದಾಪುರ, ಚೆಟ್ಟಳ್ಳಿ, ಚೇರಂಬಾಣೆ, ಮೂರ್ನಾಡು, ಕಕ್ಕಬೆ, ನಾಪೋಕ್ಲು, ವೀರಾಜಪೇಟೆ, ಸಿದ್ದಾಪುರ, ಗೋಣಿಕೊಪ್ಪ, ತಿತಿಮತಿ, ಬಾಳೆಲೆ, ಪೊನ್ನಂಪೇಟೆ, ಹುದಿಕೇರಿ, ಕುಟ್ಟ, ಶ್ರೀಮಂಗಲ, ಟಿ ಶೆಟ್ಟಿಗೇರಿ, ಬಿರುನಾಣಿಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ. ಜೂ. ೩ ರಂದು ಬಿರುನಾಣಿ, ಜೂನ್ ೧೦ ರಂದು ಬಾಳೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ಕಾರ್ಯಕ್ರಮದ ಸ್ಥಳ ಮತ್ತು ದಿನಾಂಕವನ್ನು ಪ್ರಕಟಿಸಲಾಗುವುದು ಎಂದರು.
ಭೂಪರಿವರ್ತನೆಯ ಮೂಲಕ ದೈತ್ಯಾಕಾರದ ವಿಲ್ಲಾಗಳು, ಮೆಗಾ ಟೌನ್‌ಶಿಪ್‌ಗಳು ಮತ್ತು ಮನೆ ನಿವೇಶನ ಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ನಿರ್ದಿಷ್ಟವಾಗಿ ಗಾಳಿಬೀಡಿನ ಹಸಿರು ಬೆಲ್ಟ್ ಪ್ರದೇಶದಲ್ಲಿ ಮತ್ತು ಒಟ್ಟಾರೆಯಾಗಿ ಕೊಡಗಿನಾದ್ಯಂತ ಎಲ್ಲಾ ಕುಗ್ರಾಮಗಳು ಮತ್ತು ಹಳ್ಳಿಗಳು ನಾಶವಾಗುತ್ತಿವೆ. ಇದು ನಮ್ಮ ಪವಿತ್ರ ಭೂದೃಶ್ಯವನ್ನು ನಾಶಪಡಿಸುತ್ತಿದೆ. ಈ ಮಣ್ಣು ಅಗೆಯುವ ಕೆಲಸದಲ್ಲಿ ನಮ್ಮ ಬಹುವಾರ್ಷಿಕ ಜಲಮೂಲಗಳ ನರ ಕೇಂದ್ರಗಳು ಈಗಾಗಲೇ ಮುಚ್ಚಿವೆ ಎಂದು ನಾಚಪ್ಪ ಆರೋಪಿಸಿದರು.
ಕೊಡವ ತಾಯ್ನಾಡು, ನಮ್ಮ ತಾಯಿ ಮಣ್ಣು, ಚಿಲುಮೆ ನೀರು, ಪ್ರಕೃತಿ ಮಾತೆ, ಬುಡಕಟ್ಟು ಮನೆತನ, ಯೋಧ ಲಕ್ಷಣ, ಕೃಷಿ ಬದ್ಧತೆ, ಪ್ರಾಣಿ, ಸಸ್ತನಿ, ಪಕ್ಷಿಗಳು, ಸಸ್ಯ ಮತ್ತು ಪ್ರಾಣಿಗಳಂತಹ ಜೀವವೈವಿಧ್ಯ, ಪರ್ವತಗಳು, ತೊರೆಗಳು ಮತ್ತು ಜಲಪಾತಗಳನ್ನು ನಮ್ಮ ಜಾನಪದ ಹಾಡು ಬಾಳೋಪಾಟ್ ನಲ್ಲಿ ಮನಮೋಹಕವಾಗಿ ಚಿತ್ರಿಸಲಾಗಿದೆ. ಈಗ ನಮ್ಮ ಮುಂದೆ, ನಮ್ಮ ಭೂಮಿ, ನಮ್ಮ ಸಂಸ್ಕöÈತಿ, ಪರಿಸರ, ಜಲ ಮೂಲದ ಬುಗ್ಗೆ, ನದಿ ಪಾತ್ರಗಳು, ನೀರಿನ ತೊರೆಗಳು ಮತ್ತು ಪರ್ವತಗಳನ್ನು ರಾಜ್ಯ ಪ್ರಾಯೋಜಿತ ಬೃಹತ್ ಉದ್ಯಮ ಸಂಸ್ಥೆಗಳು ನಾಶಪಡಿಸುತ್ತಿವೆ ಎಂದರು.
ಈ ಸಂದರ್ಭ ಪಟ್ಟಮಾಡ ಕುಶ, ಚಂಬAಡ ಜನತ್, ಮಂದಪAಡ ಮನೋಜ್, ಕಾಂಡೇರ ಸುರೇಶ್, ಬೇಪಡಿಯಂಡ ಬಿದ್ದಪ್ಪ, ಬಾಚಮಂಡ ರಾಜ ಪೂವಣ್ಣ, ಬೇಪಡಿಯಂಡ ದಿನು, ಪಾರ್ವಂಗಡ ನವೀನ್, ನಂದೇಟಿರ ರವಿ, ಶ್ರೀಮತಿ ನಂದೇಟಿರ ಕವಿತಾ ಸುಬ್ಬಯ್ಯ, ಪುಟ್ಟಿಚಂಡ ದೇವಯ್ಯ, ಅಪ್ಪಾರಂಡ ವಿಜು, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ಪ್ರಕಾಶ್, ನಾಟೋಳಂಡ ಶಂಭು ಉಪಸ್ಥಿತರಿದ್ದರು.