ನಾಪೋಕ್ಲು, ಮೇ ೨೭: ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಶ್ರೀ ಭಗವತಿ ದೇವಿಯ ಉತ್ಸವವು ಎರಡು ದಿನಗಳ ಕಾಲ ಜರುಗಿತು. ದೇವಿಯನ್ನು ರಾಟೆಯ ಉಯ್ಯಾಲೆಯಲ್ಲಿ ತೂಗುವ ವಿಶಿಷ್ಟ ಆಚರಣೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಬಲ್ಲಮಾವಟಿ, ಪೇರೂರು ಹಾಗೂ ಪುಲಿಕೋಟು ಗ್ರಾಮಗಳ ವ್ಯಾಪ್ತಿಗೆ ಸೇರಿದ ಬಲ್ಲತ್ತನಾಡಿನ ಪುರಾತನ ಭಗವತಿ ಭದ್ರಕಾಳಿ ದೇವಾಲಯದಲ್ಲಿ ಈ ಉತ್ಸವಕ್ಕಾಗಿ ದೇವಾಲಯದ ಮುಂಭಾಗದಲ್ಲಿ ದೊಡ್ಡ ಕಬ್ಬಿಣದ ರಾಟೆಯನ್ನು ನಿರ್ಮಿಸಲಾಗಿದೆ. ಉತ್ಸವದ ಅಂಗವಾಗಿ ಭದ್ರಕಾಳಿ ಅಮ್ಮನ ವಿಗ್ರಹವನ್ನು ರಾಟೆ ಉಯ್ಯಾಲೆಯಲ್ಲಿ ತೂಗುವುದು ಮಾತ್ರವಲ್ಲದೆ ಬೇಡು ಹಬ್ಬ, ಪೀಲಿಯಾಟ್ ಮುಂತಾದ ಸಾಂಪ್ರದಾಯಿಕ ಆಚರಣೆಗಳು ಜರುಗಿದವು.

ಶುಕ್ರವಾರ ಬೆಳಿಗ್ಗೆ ಎಡಿಕೇರಿ ದೊಡ್ಡ ಮನೆಯಿಂದ ಭಂಡಾರ ತಂದು ದೇವಾಲಯದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು. ಉತ್ಸವದ ಅಂಗವಾಗಿ ಆರಾಟ್, ಬೊಳಕಾಟ್, ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಮಧ್ಯಾಹ್ನ ದೇವರನ್ನು ರಾಟೆಯಲ್ಲಿ ಕೂರಿಸಿ ಸಾಂಪ್ರದಾಯಿಕವಾಗಿ ತೂಗಲಾಯಿತು. ಬಳಿಕ ಕ್ಷೇತ್ರಪಾಲ, ಶಾಸ್ತಾವು ಹಾಗೂ ಭದ್ರಕಾಳಿ ತೆರೆಗಳು, ಸಾಂಪ್ರದಾಯಿಕ ಆಚರಣೆ ನಡೆದವು. ಈ ಸಂದರ್ಭ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ದಿಗೆ ವಿವಿಧ ಹರಕೆ, ಕಾಣಿಕೆ ಒಪ್ಪಿಸಿದರು.