ಮಡಿಕೇರಿ, ಮೇ ೨೭: ಸೂರ್ಲಬ್ಬಿಯ ಕುಂಬಾರಗಡಿಗೆಯಲ್ಲಿ ಇತ್ತೀಚೆಗೆ ನಡೆದ ಶಾಲಾ ವಿದ್ಯಾರ್ಥಿನಿ ಮೀನಾ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಗರ್ವಾಲೆ ಕೊಡವ ಸಮಾಜ ಮತ್ತು ಬೆಂಗಳೂರಿನ ಏಳ್‌ನಾಡ್ ಕೊಡವ ಸಂಘಗಳು ಆಗ್ರಹಿಸಿವೆ. ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಏಳ್‌ನಾಡ್ ಕೊಡವ ಸಂಘದ ಅಧ್ಯಕ್ಷ ಮಂಡೀರ ಬೋಪಯ್ಯ, ಕುಂಬಾರಗಡಿಗೆಯ ವಿದ್ಯಾರ್ಥಿನಿ ಮೀನಾಳ ಹತ್ಯೆಗೆ ಸಂಬAಧಿಸಿದAತೆ ಜಿಲ್ಲಾ ಪೊಲೀಸ ರಿಂದ ಸಮರ್ಪಕ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಗರ್ವಾಲೆ ಕೊಡವ ಸಮಾಜ ನಿರ್ದೇಶಕರಾದ ಸರ್ಕಂಡ ಸೋಮಯ್ಯ ಮಾತನಾಡಿ, ವಿದ್ಯಾರ್ಥಿ ನಿಯನ್ನು ಹತ್ಯೆ ಮಾಡಿದ ಘಟನೆ ನಡೆದ ಬಳಿಕ ಆರೋಪಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರೂ ಕೂಡ ಪೊಲೀಸರು ತಾವೇ ಬಂಧಿಸಿರುವುದಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ. ಸ್ಥಳ ಮಹಜರು ನಡೆಸುವ ಸಂದರ್ಭ ಪೊಲೀಸರಿಗೆ ದುಷ್ಕೃತ್ಯಕ್ಕೆ ಬಳಸಿದ ಮಾರಕಾಯುಧ ಸಿಕ್ಕಿತ್ತು. ಅನತಿ ದೂರದಲ್ಲಿಯೆ ಮೀನಾಳ ರುಂಡವಿದ್ದರೂ ಅದನ್ನು ಆ ವೇಳೆಯೇ ಪತ್ತೆ ಮಾಡಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ದುಷ್ಕೃತ್ಯ ಎಸಗಿದ ಆರೋಪಿಯನ್ನು ವಾಹನದಲ್ಲಿ ಕರೆತಂದ ವ್ಯಕ್ತಿ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಸ್ಥಳೀಯ ಪ್ರಭಾವಿಯಾಗಿದ್ದಾನೆ. ಈತನ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದರೂ, ಆರೋಪಿಯೊಂದಿಗೆ ಇದ್ದ ವ್ಯಕ್ತಿ ಇಂದಿಗೂ ಸೂಕ್ತ ವಿಚಾರಣೆಯಿಲ್ಲದೆ ಹೊರಗಿದ್ದಾನೆ ಎಂದು ಆಕ್ಷೇಪ ವ್ಯಕಪಡಿಸಿದರು. ಕೊಲೆ ಕೃತ್ಯ ಎಸಗಿದ ಆರೋಪಿಯೊಂದಿಗೆ ಇದ್ದವರನ್ನು ಕೂಡ ಬಂಧಿಸಿ ಸೂಕ್ತ ವಿಚಾರಣೆ ಮತ್ತು ತನಿಖೆ ನಡೆಸುವುದು ಅತ್ಯವಶ್ಯ ಎಂದರು. ಕೃತ್ಯ ನಡೆದ ಹಂತದಲ್ಲಿ ಸ್ಥಳದಲ್ಲಿದ್ದ ಕೆಲವರು ಅಲ್ಲಿಂದ ಪರಾರಿಯಾಗಿದ್ದಾರೆ. ಆ ವ್ಯಕ್ತಿಗಳು ತಪ್ಪು ಮಾಡಿಲ್ಲ ಎಂದಾದಲ್ಲಿ ದುಷ್ಕೃತ್ಯ ನಡೆದ ಸಂದರ್ಭ ಪೊಲೀಸರಿಗೆ ಅಥವಾ ಸ್ಥಳೀಯರಿಗೆ ಮಾಹಿತಿಯನ್ನು ಏಕೆ ನೀಡಿಲ್ಲವೆಂದು ಪ್ರಶ್ನಿಸಿದ ಸರ್ಕಂಡ ಸೋಮಯ್ಯ, ಈ ಘಟನೆಯಲ್ಲಿ ಹಲವು ವಿಚಾರಗಳು ಅನುಮಾನಕ್ಕೆ ಆಸ್ಪದವನ್ನು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.

ಸಿಐಡಿ ತನಿಖೆಗೆ ಸಂಬAಧಿಸಿದAತೆ ಜಿಲ್ಲಾಧಿಕಾರಿ, ಎಸ್.ಪಿ, ಜಿಲ್ಲೆಯ ಇಬ್ಬರು ಶಾಸಕರುಗಳಿಗೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊಡವ ಸಮಾಜ ಗರ್ವಾಲೆಯ ಕಾರ್ಯದರ್ಶಿ ತಾಚಮಂಡ ಈರಪ್ಪ, ಏಳ್‌ನಾಡ್ ಕೊಡವ ಸಂಘದ ಉಪಾಧ್ಯಕ್ಷ ಐಮುಡಿಯಂಡ ಭೀಮಯ್ಯ, ಖಜಾಂಚಿ ಕನ್ನಿಕಂಡ ದೇವಯ್ಯ, ಸಹ ಕಾರ್ಯದರ್ಶಿ ಗೌಡಂಡ ಕುಂಞಪ್ಪ ಉಪಸ್ಥಿತರಿದ್ದರು.