ಮಡಿಕೇರಿ, ಮೇ ೨೭: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಫಲಿತಾಂಶಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದ ನಡುವೆ ಅಭ್ಯರ್ಥಿಗಳು ಎಷ್ಟು ಮತಗಳ ಅಂತರದಿAದ ಗೆಲುವು ಸಾಧಿಸಬಹುದೆಂಬ ಲೆಕ್ಕಾಚಾರಗಳೊಂದಿಗೆ, ಬೆಟ್ಟಿಂಗ್ ಕೂಡ ಕ್ಷೇತ್ರದಲ್ಲಿ ನಡೆಯುತ್ತಿದೆ.

ನಾಲ್ಕು ಬಾರಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿರುವ ಜನತೆ, ಎರಡು ಬಾರಿ ಸೋಲಿನ ರುಚಿ ಕೂಡ ಮಹಾರಾಜರಿಗೆ ನೀಡಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ದತ್ತು ಪುತ್ರ ಯದುವೀರ ಶ್ರೀಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬಿಜೆಪಿಯಿಂದ ಈ ಬಾರಿ ಸ್ಪರ್ಧಿಸಿದ್ದಾರೆ.

ಈ ಕ್ಷೇತ್ರದ ಚುನಾವಣಾ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದಾಗ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ೧೯೮೯ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ೨,೪೯,೩೬೪ ಮತಗಳ ಅಂತರದಿAದ ಗೆದ್ದಿದ್ದರು. ಈ ಅಂತರವನ್ನು ಇದುವರೆಗೆ ಯಾವೊಬ್ಬ ಅಭ್ಯರ್ಥಿಗೂ ಕೂಡ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ.

ಈ ಬಾರಿಯ ಚುನಾವಣೆಗೂ ಮೊದಲು ಯದುವೀರ ಒಡೆಯರ್ ೩ ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂಬ ಲೆಕ್ಕಾಚಾರಗಳಿತ್ತು. ಆದರೆ ಇದೀಗ ಯದುವೀರ ಒಡೆಯರ್ ಗೆದ್ದರೆ ಕೇವಲ ೩೦ ಸಾವಿರ ಮತಗಳ ಅಂತರ ಎಂಬ ಮಾತುಗಳು ಕೇಳಿಬರುತ್ತಿವೆ.

೧೯೭೧ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದ ಹೆಚ್.ಡಿ ತುಳಸೀದಾಸಪ್ಪ ಅವರು ೧,೪೫,೫೦೫ ಮತಗಳ ಅಂತರದಿAದ ಗೆಲುವು ಸಾಧಿಸಿದ್ದರು.

೨೦೧೯ ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಹಾಲಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳ ಅಂತರದಿAದ ಗೆಲುವು ಸಾಧಿಸಿರುವ ಮೂರನೇ ಅಭ್ಯರ್ಥಿ. ಪ್ರತಾಪ್ ಸಿಂಹ ಅವರು ೨೦೧೯ರಲ್ಲಿ ೧,೩೮,೬೪೭ ಮತಗಳ ಅಂತರದಿAದ ಗೆದ್ದಿದ್ದರು.

ಆದರೆ ಇದುವರೆಗೆ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದ ಸಂಸದರಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಮೊದಲಿಗರು. ೨೦೧೯ ರಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರು ೬,೮೮,೯೭೪ ಮತಗಳನ್ನು ಪಡೆದಿದ್ದರು. ಎರಡನೇ ಅತೀ ಹೆಚ್ಚು ಮತಗಳನ್ನು ಪಡೆದ ಹೆಗ್ಗಳಿಕೆ ಕೂಡ ಪ್ರತಾಪ್ ಸಿಂಹ ಅವರಿಗೆ ಸಲ್ಲುತ್ತದೆ. ೨೦೧೪ರಲ್ಲಿ ೫,೦೩,೯೦೮ ಮತಗಳನ್ನು ಪಡೆದು ಪ್ರತಾಪ್ ಸಿಂಹ ಅವರು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ಅತೀ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿರುವ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ.

ಎರಡನೇ ಅತೀ ಹೆಚ್ಚು ಮತಗಳನ್ನು ಪಡೆದಿರುವ ಹೆಗ್ಗಳಿಕೆ ಕ್ಷೇತ್ರದ ಮಾಜಿ ಸಂಸದ ಬಿಜೆಪಿಯ ಸಿ.ಹೆಚ್. ವಿಜಯಶಂಕರ್ ಅವರಿಗೆ ಸಲ್ಲುತ್ತದೆ.

೨೦೧೯ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ.ಹೆಚ್. ವಿಜಯಶಂಕರ್ ಅವರು ೫,೫೦,೩೨೭ ಮತಗಳನ್ನು ಪಡೆದು ಸೋಲು ಕಂಡಿದ್ದರು. ೧೯೯೮ರಲ್ಲಿ ಸಿ.ಹೆಚ್. ವಿಜಯಶಂಕರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ೩,೫೫,೮೪೬ ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಎಸ್. ಚಿಕ್ಕಮಾದು ವಿರುದ್ಧ ೧,೦೩,೦೨೪ ಮತಗಳ ಅಂತರದಿAದ ಗೆಲುವು ಸಾಧಿಸಿದ್ದರು. ಇದುವರೆಗಿನ ಅತೀ ಹೆಚ್ಚು ಮತಗಳ ಅಂತರದಿAದ ಗೆಲುವು ಸಾಧಿಸಿರುವ ನಾಲ್ಕನೇ ಸ್ಥಾನದಲ್ಲಿ ಸಿ.ಎಚ್. ವಿಜಯಶಂಕರ್ ಅವರು ಇದ್ದಾರೆ.

ಮೈಸೂರು ಕ್ಷೇತ್ರದಲ್ಲಿ ಸಿ.ಹೆಚ್. ವಿಜಯಶಂಕರ್ ೧೯೯೮ರಲ್ಲಿ ಗೆಲುವು ಸಾಧಿಸುವುದರ ಮೂಲಕ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದಿದ್ದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಮತಗಳ ಅಂತರದಿAದ ಗೆಲುವು ಸಾಧಿಸಿರುವ ಅಭ್ಯರ್ಥಿ ಹೆಚ್. ವಿಶ್ವನಾಥ್. ಕ್ಷೇತ್ರ ಪುರ್ನವಿಂಗಡಣೆ ಬಳಿಕೆ ನಡೆದ ಮೊದಲ ಚುನಾವಣೆಯಲ್ಲಿ ೨೦೦೯ರಲ್ಲಿ ಅಡಗೂರು ಹೆಚ್. ವಿಶ್ವನಾಥ್ ಅವರು ಬಿಜೆಪಿಯ ಸಿ.ಹೆಚ್ ವಿಜಯಶಂಕರ್ ವಿರುದ್ಧ ೩,೫೪,೮೧೦ ಮತಗಳನ್ನು ಪಡೆದು ೭,೬೯೧ ಮತಗಳ ಅಂತರದಿAದ ಗೆದ್ದಿದ್ದರು. ಇದುವರೆಗೆ ಅತೀ ಕಡಿಮೆ ಮತಗಳ ಅಂತರದಿAದ ಗೆಲುವು ಸಾಧಿಸಿರುವ ಅಭ್ಯರ್ಥಿ ಅಡಗೂರು ಹೆಚ್. ವಿಶ್ವನಾಥ್ ಆಗಿದ್ದಾರೆ.

೨೦೦೯ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೊಡಗಿನ ಬಿ. ಎ. ಜೀವಿಜಯ ಅವರು ೨,೧೬,೨೮೩ ಮತಗಳನ್ನು ಪಡೆದು ಗಮನ ಸೆಳೆದಿದ್ದರು.

೧೯೯೬ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಸಂಸದ ಜಿ.ಟಿ. ದೇವೇಗೌಡ ಅವರು ಮೈಸೂರು ಲೋಕಸಭಾ ಕ್ಷೇತ್ರದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿರುದ್ಧ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ೨,೪೬,೬೨೩ ಮತಗಳನ್ನು ಪಡೆದು ೧೧,೬೭೬ ಮತಗಳ ಅಂತರದಿAದ ಸೋಲು ಕಂಡಿದ್ದರು.

೧೯೯೮ರಲ್ಲಿ ಕೂಡ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಜಿ.ಟಿ. ದೇವೇಗೌಡ ಅವರು ಮೂರನೇ ಸ್ಥಾನ ಪಡೆದಿದ್ದರು. ಈ ಚುನಾವಣೆಯಲ್ಲಿ ೨,೨೩,೩೮೫ ಮತಗಳನ್ನು ಪಡೆದಿದ್ದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ೧೯೬೨ ಇದುವರೆಗೆ ಒಮ್ಮೆ ಕೂಡ ಜೆಡಿಎಸ್ ಪಕ್ಷ ಗೆಲುವು ಸಾಧಿಸಿಲ್ಲ.

ಮತಗಳಿಕೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ

ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದ್ದ ಕಾರಣ, ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಮತ್ತು ಕಾಂಗ್ರೆಸ್ ಎಂ. ಲಕ್ಷö್ಮಣ್ ಗೌಡ ಇಬ್ಬರೂ ಕೂಡ ತಲಾ ಏಳು ಲಕ್ಷ ಮತಗಳನ್ನು ಪಡೆಯುವ ಸಾಧ್ಯತೆ ಇವೆ. ಕ್ಷೇತ್ರದಲ್ಲಿ ಈ ಬಾರಿ ೧೪,೭೭,೫೭೧ ಮತಗಳು ಚಲಾವಣೆಯಾಗಿವೆ. ಇದುವರೆಗೆ ಅತೀ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿರುವ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ದಾಖಲೆಯನ್ನು ಈ ಬಾರಿ ಯಾರೇ ಗೆಲುವು ಸಾಧಿಸಿದರೂ ಕೂಡ ಮುರಿಯುವುದು ಖಚಿತ. ಆದರೆ ಕ್ಷೇತ್ರದಲ್ಲಿ ಇದುವರೆಗೆ ಅತೀ ಹೆಚ್ಚು ಮತಗಳ ಅಂತರದಿAದ ಗೆಲುವು ಸಾಧಿಸಿರುವ ಅಭ್ಯರ್ಥಿಗಳ ದಾಖಲೆ ಮುರಿಯುವುದು ಅನುಮಾನ.

ಬಿಜೆಪಿಯವರು ೩೦ ಸಾವಿರ ಮತಗಳ ಅಂತರದಿAದ ಗೆಲುವು ಗೆಲ್ಲುವ ವಿಶ್ವಾಸದಲ್ಲಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ೧೦ ಸಾವಿರ ಮತಗಳಿಂದ ಗೆಲ್ಲುವ ವಿಶ್ವಾಸದಲಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತಗಳಿಕೆ, ಮತಗಳ ಅಂತರ, ಯಾರು ಯಾರ ರೆಕಾರ್ಡ್ ಬ್ರೇಕ್ ಮಾಡುತ್ತಾರೆ ಎಂಬುದನ್ನು ಜೂನ್ ೪ ರವರೆಗೆ ಕಾದು ನೋಡಬೇಕಾಗಿದೆ.

- ಕೆ.ಎಂ ಇಸ್ಮಾಯಿಲ್ ಕಂಡಕರೆ