ವೀರಾಜಪೇಟೆ, ಮೇ ೨೭: ತಾ.೨೨ ರಂದು ತಿತಿಮತಿ ದೇವರಪುರದಲ್ಲಿ ನಡೆದ ಭದ್ರಕಾಳಿ ದೇವರ ಬೇಡು ಹಬ್ಬ ಆಚರಣೆ ಬಳಿಕ ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಮಲಗಿದ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದ ವೇಷಧಾರಿಯ ಸಾವಿನ ಪ್ರಕರಣಕ್ಕೆ ತಿರುವು ದೊರೆತಿದ್ದು, ಇದು ಸಹಜ ಸಾವಲ್ಲ, ಕೊಲೆ ಎಂದು ತನಿಖೆಯಿಂದ ಸತ್ಯಾಂಶ ಬಯಲಾಗಿದೆ. ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಒಟ್ಟು ೪ ಮಂದಿಯನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಬ್ಬದ ದಿನದಂದು ವೇಷ ಧರಿಸಿಕೊಂಡು ಮನೆ ಮನೆಗೆ ತೆರಳಿ ಹಣ ಸಂಗ್ರಹಿಸುತ್ತಿದ್ದ ವೇಳೆ ಮದ್ಯ ಸೇವನೆ ಮಾಡಿದ್ದ ವ್ಯಕ್ತಿಗಳು ಪರಸ್ಪರ ಬಡಿದಾಡಿಕೊಂಡಿದ್ದು, ಈ ಸಂದರ್ಭ ತೆರ್ಮೆಮೊಟ್ಟೆ ನಿವಾಸಿ ರಮೇಶ್ ಹಲ್ಲೆಗೊಳಗಾಗಿ ಮೃತಪಟ್ಟಿದ್ದು, ಹಲ್ಲೆ ನಡೆಸಿ ಪರಾರಿಯಾಗಿದ್ದ ಅಪ್ರಾಪ್ತ ಸೇರಿದಂತೆ ನಾಲ್ವರ ಬಂಧನವಾಗಿದೆ.
ಆರೋಪಿಗಳು ಮೂಲತಃ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ, ಬಾವಲಿ, ಮಚ್ಚೂರು ಗ್ರಾಮದ ನಿವಾಸಿಗಳಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ತೋಟದ ಲೈನ್ ಮನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕುಟ್ಟ ನಾತಂಗಲ್ ಗ್ರಾಮದ ನಿವಾಸಿ ಹರೀಶ್ (೨೨), ಅರ್ವತ್ತೋಕ್ಲು ಹಾಗೂ ಜೋಡುಬೀಟ್ಟಿ ಗ್ರಾಮದ ನಿವಾಸಿಗಳಾದ ಲೋಕೇಶ್ (೩೦) ಹಾಗೂ ಕೃಷ್ಣ (೨೦) ಮತ್ತು ಅಪ್ರಾಪ್ತ ಬಾಲಕ ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆಯ ವಿವರ
ವೀರಾಜಪೇಟೆ ಕೆದಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರ್ಮೆಮೊಟ್ಟೆ ನಿವಾಸಿ ಪ್ರವೀಣ್ ಅವರ ಲೈನ್‌ಮನೆಯಲ್ಲಿ ವಾಸವಿದ್ದ ಜೇನು ಕುರುಬರ ರಮೇಶ್ (೩೯) ಅವರ ಮೃತದೇಹ ಮಲಗಿದ್ದ ಸ್ಥಿತಿಯಲ್ಲಿ ತಾ.೨೩ ರ ಬೆಳಿಗ್ಗೆ ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿನ ಮಳಿಗೆಯೊಂದರ ಬಳಿ ಪತ್ತೆಯಾಗಿತ್ತು. ಸಂಶಯಗೊAಡ ಸ್ಥಳೀಯರು ವೀರಾಜಪೇಟೆ ನಗರ ಠಾಣೆಗೆ ದೂರು ನೀಡಿದ್ದರು. ನಗರ ಪೊಲೀಸರು ರಮೇಶ್ ಅವರನ್ನು ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ವೈದ್ಯರು ಪರೀಕ್ಷೆ ನಡೆಸಿದ ಬಳಿಕ, ರಮೇಶ್ ತಾ.೨೨ ರ ರಾತ್ರಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಮೃತ ರಮೇಶ್‌ನ ಪತ್ನಿ ಭವಾನಿ ಅವರು ತಾ.೨೩ ರಂದು ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೊಂಡ ನಗರ ಪೊಲೀಸರು ವೀರಾಜಪೇಟೆ ಸೇರಿದಂತೆ ದ.ಕೊಡಗಿನ ವಿವಿಧ ಸ್ಥಳಗಳಲ್ಲಿರುವ ಸಿ.ಸಿ. ಕ್ಯಾಮರಾಗಳನ್ನು ಪರಿಶೀಲನೆಗೆ ಒಳಪಡಿಸಿದರು. ಸಿ.ಸಿ. ಕ್ಯಾಮರಾದಲ್ಲಿ ದಾಖಲಾದ ದೃಶ್ಯಾವಳಿಗಳನ್ನು ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕಲೆ ಹಾಕಿದ ಪೊಲೀಸರು, ಅಪ್ರಾಪ್ತ ಸೇರಿದಂತೆ ನಾಲ್ವರನ್ನು ಬಂಧನ ಮಾಡಿದ್ದಾರೆ.
ಅಂದು ಗೊಣಿಕೊಪ್ಪಲು, ಪೊನ್ನಂಪೇಟೆ, ತಿತಿಮತಿ, ಕುಟ್ಟ ಈ ಭಾಗಗಳಲ್ಲಿ ಮದ್ಯ ನಿಷೇಧ ಮಾಡಲಾಗಿತ್ತು. ಆದರೆ ವೀರಾಜಪೇಟೆ ನಗರದಲ್ಲಿ ಮದ್ಯದ ಅಂಗಡಿಗಳು ಎಂದಿನAತೆ ತೆರೆದಿದ್ದವು. ಈ ಹಿನ್ನೆಲೆ ಮೃತ ರಮೇಶ್, ನಾಲ್ವರು ಆರೋಪಿಗಳು ಸೇರಿದಂತೆ ಕೆಲ ಬೇಡು ಹಬ್ಬ ವೇಷಧಾರಿಗಳು ನಗರಕ್ಕೆ ಆಗಮಿಸಿ ಮದ್ಯ ಸೇವನೆ ಮಾಡಿ ಕುಂಡೆ ಹಬ್ಬ ಆಚರಿಸಿದ್ದರು. ನಂತರ ಮನೆ ಮನೆಗೆ ತೆರಳಿ ಹಬ್ಬದ ಪ್ರಯುಕ್ತ ಹಣ ಸಂಗ್ರಹ ಮಾಡುತ್ತಿದ್ದ ವೇಳೆಯಲ್ಲಿ ರಮೇಶ್ ಹಾಗೂ ನಾಲ್ವರು ಆರೋಪಿಗಳು ಒಟ್ಟಿಗೆ ಕುಣಿಯುತ್ತಾ, ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಹಣ ಸಂಗ್ರಹದ ವಿಚಾರವಾಗಿ ರಮೇಶ್ ಮತ್ತು ಇತರರ ನಡುವೆ ವಾದ ವಿವಾದಗಳು ನಡೆದಿದ್ದು, ನಾಲ್ವರು ಸೇರಿ ರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಖಾಸಗಿ ಬಸ್ ನಿಲ್ದಾಣದಲ್ಲಿ ಮರುದಿನ ರಮೇಶ್‌ನ ಮೃತ ದೇಹ ಮಳಿಗೆ ಒಂದರ ಸನಿಹದಲ್ಲಿ ಪತ್ತೆಯಾಗಿದೆ. ಬಂಧಿತ ಆರೋಪಿಗಳ ಮೇಲೆ ವೀರಾಜಪೇಟೆ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿ ಮೂವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತನನ್ನು ಮಡಿಕೇರಿಯ ಬಾಲಕರ ಬಾಲಮಂದಿರಕ್ಕೆ ಕಳುಹಿಸಲಾಗಿದೆ.
- ಕಿಶೋರ್ ಕುಮಾರ್ ಶೆಟ್ಟಿ