ಮಡಿಕೇರಿ, ಮೇ ೨೮: ಸರಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸುವುದು ಹಾಗೂ ರಾಜ್ಯದಲ್ಲಿ ೫೦೦ ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು ಸರಕಾರ ಬದ್ಧವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ಪರ ಪ್ರಚಾರ ನಡೆಸಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನಲ್ಲಿ ಪೊನ್ನಣ್ಣ ಹಾಗೂ ಮಂತರ್ ಹೊಸ ರಾಜಕೀಯ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ನೈಋತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್, ಶಿಕ್ಷಕರ ಕ್ಷೇತ್ರದಿಂದ ಕೆ.ಕೆ. ಮಂಜುನಾಥ್ ಕುಮಾರ್ ಕಣದಲ್ಲಿದ್ದು, ಮೇಲ್ಮನೆಯಲ್ಲಿ ಇರಲು ಸಮರ್ಥ ಅಭ್ಯರ್ಥಿ ಗಳಾಗಿದ್ದಾರೆ. ವಿಷಯಾಧಾರಿತವಾಗಿ ಮುನ್ನಡೆಯುವ ಸಾಮರ್ಥ್ಯವನ್ನು ಆಯನೂರು ಮಂಜುನಾಥ್ ಹೊಂದಿದ್ದಾರೆ. ಕೆ.ಕೆ. ಮಂಜುನಾಥ್‌ಗೆ ಶಿಕ್ಷಕರ ನೋವು-ನಲಿವು ತಿಳಿದಿದೆ. ಗ್ಯಾರಂಟಿ ಯೋಜನೆಗಳನ್ನು ಮನೆಮನೆಗೆ ತಲುಪಿಸಿದ್ದೇವೆ. ಜನರ ಕಷ್ಟ ನೀಗಿಸುವ ಕೆಲಸ ನಮ್ಮ ಸರಕಾರದಿಂದಾಗಿದೆ. ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕಾಗಿ ರೂ. ೫೭ ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆ ಎಂದರು.
ಶಿಕ್ಷಣ ಸಚಿವನಾಗಿ ಅಧಿಕಾರ ಪಡೆದು ಒಂದು ವರ್ಷ ಕಳೆದಿದ್ದು, ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಿದ ತೃಪ್ತಿ ಇದೆ. ಹಳೇ ಪಿಂಚಣಿ ಯೋಜನೆ ಮರು ಜಾರಿ ಖಂಡಿತವಾಗಿ ಆಗಲಿದೆ. ಅನುದಾನಿತ ಶಾಲಾ ಶಿಕ್ಷಕರಿಗೂ ಪಿಂಚಣಿ, ವಿಮೆ ಸೌಲಭ್ಯ ನೀಡಲಾಗುವುದು. ರಾಜ್ಯದಲ್ಲಿ ಎದುರಾಗಿದ್ದ ಖಾಯಂ ಶಿಕ್ಷಕರ ಕೊರತೆಯನ್ನು ನೀಗಿಸುವ ಕೆಲಸ ಮಾಡಲಾಗಿದೆ. ಪ್ರಥಮ ಹಂತದಲ್ಲಿ ೧೨ ಸಾವಿರ ಶಿಕ್ಷಕರನ್ನು ನಿಯೋಜಿಸಿ ಕರ್ತವ್ಯಕ್ಕೆ ಸಿದ್ಧರಾಗಿದ್ದಾರೆ. ಅನುದಾನಿತ ಶಾಲೆಗಳ ಬಲವರ್ಧನೆಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಾಲೆ ಪುನರಾರಂಭ - ಅಗತ್ಯ ಸಿದ್ಧತೆ
ತಾ. ೨೯ ರಿಂದ (ಇಂದಿನಿAದ) ರಾಜ್ಯದಲ್ಲಿ ಶಾಲೆ ಪುನರಾರಂಭಗೊಳ್ಳಲಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.
ಪಠ್ಯ-ಪುಸ್ತಕ ವಿತರಣೆಗೆ ಸಿದ್ಧವಾಗಿದೆ. ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ. (ಮೊದಲ ಪುಟದಿಂದ) ಅನುದಾನಿತ ಶಾಲೆಗಳಿಗೆ ೯ ವರ್ಷಗಳಿಂದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ. ಅದನ್ನು ಹಂತಹAತವಾಗಿ ಭರ್ತಿ ಮಾಡಲಾಗುತ್ತಿದೆ. ಪ್ರಥಮ ಹಂತದಲ್ಲಿ ೫೦೦ ಕಡೆಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ತೆರೆಯಲು ಚುನಾವಣಾ ಪೂರ್ವವೇ ಗುರುತಿಸಿ ಸರಕಾರದ ಮಟ್ಟದಲ್ಲಿ ಆಡಳಿತಾತ್ಮಕ ಪ್ರಕ್ರಿಯೆಯೂ ನಡೆದಿತ್ತು. ೧ ರಿಂದ ದ್ವಿತೀಯ ಪಿಯುಸಿ ತನಕ ಒಂದೆ ಕಡೆ ಶಿಕ್ಷಣ ಇದರಿಂದ ದೊರೆಯುತ್ತದೆ. ಉಪಮುಖ್ಯಮಂತ್ರಿಗಳೇ ಹಣ ಹೊಂದಾಣಿಕೆಗೂ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ೩ ವರ್ಷಗಳಲ್ಲಿ ೨ ಗ್ರಾ.ಪಂ.ಗೆ ಒಂದರAತೆ ಕೆಪಿಎಸ್ ಶಾಲೆ ಆರಂಭಿಸಿ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಿದ್ದೇವೆ ಎಂದರು.
ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ಕಡಿಮೆ ಕಾಲಾವಧಿ ನಡುವೆ ೩೦ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಪ್ರವಾಸ ಕೈಗೊಂಡಿದ್ದೇವೆ. ಎಲ್ಲಾ ಕಡೆಗಳಲ್ಲಿಯೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ನೀತಿ ಸಂಹಿತೆ ಮುಗಿದ ನಂತರ ೭ನೇ ವೇತನ ಆಯೋಗ ವರದಿ ಜಾರಿಯಾಗುತ್ತದೆ. ಹಿಂದಿನ ಸರಕಾರ ಹಳೆ ಪಿಂಚಣಿ ಯೋಜನೆ ಮರು ಜಾರಿ ಮಾಡಿಲ್ಲ. ಇದರಲ್ಲಿ ಎರಡೂವರೆ ಲಕ್ಷ ನೌಕರರ ಭವಿಷ್ಯ ಅಡಗಿದೆ ಎಂದ ಅವರು, ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಿಸಿ ಅಗತ್ಯ ಸಹಕಾರ ನೀಡಿರುವುದು ಶ್ಲಾಘನೀಯ. ಗ್ಯಾರಂಟಿ ಯೋಜನೆ ಲಾಭ ಮಹಿಳಾ ಸರಕಾರಿ ನೌಕರರಿಗೂ ಸಿಕ್ಕಿದೆ. ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣ, ಗೃಹಜ್ಯೋತಿ ಮೂಲಕ ಉಚಿತ ವಿದ್ಯುತ್ ದೊರೆತು ಆರ್ಥಿಕ ಸಶಕ್ತೀಕರಣವಾಗಿದೆ. ಕಾರ್ಮಿಕ, ನೌಕರರ ವಿಚಾರಕ್ಕೆ ಸದನದಲ್ಲಿ ಧ್ವನಿಯಾಗಿದ್ದೆ. ಆಡಳಿತ ಪಕ್ಷದ ವಿರುದ್ಧವೇ ಮಾತನಾಡಿ ಬೇಡಿಕೆ ಈಡೇರಿಸುವಂತೆ ಮಾಡಿದ್ದೆ. ಹೊಸ ಪಿಂಚಣಿ ಯೋಜನೆಯಿಂದ ನಿವೃತ್ತಿ ನಂತರ ಬರೀ ಕೈಯಲ್ಲಿ ಹೋಗಬೇಕಾದ ಪರಿಸ್ಥಿತಿ ಇದೆ. ೧೩ ಸಾವಿರ ಪೌರಕಾರ್ಮಿಕರ ಖಾಯಂಗೊಳಿಸುವಿಕೆಯಲ್ಲಿ ನಮ್ಮ ಪಾತ್ರ ದೊಡ್ಡದಿದೆ ಎಂದರು. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ಈ ಚುನಾವಣೆ ಶಿಕ್ಷಕರ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಹಲವು ವರ್ಷಗಳ ಸಮಸ್ಯೆಗೆ ಮುಕ್ತಿ ದೊರೆಯದಿರುವುದು ವಿಷಾದನೀಯ. ಕಳೆದ ಶಿಕ್ಷಕರ ಕ್ಷೇತ್ರದ ಪ್ರತಿನಿಧಿ ಸಮರ್ಥವಾಗಿ ಕೆಲಸ ಮಾಡಿಲ್ಲ. ಶಿಕ್ಷಕನಾಗಿರುವ ತಾನು ಶಿಕ್ಷಕರ ಪ್ರತಿನಿಧಿಯಾದರೆ ಸಮಸ್ಯೆ ಪರಿಹಾರ ನಿಶ್ಚಿತ ಎಂದರು.
ಗೋಷ್ಠಿಯಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ನೈಋತ್ಯ ಕ್ಷೇತ್ರದ ಚುನಾವಣಾ ಉಸ್ತುವಾರಿ ಹರೀಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಬಿ. ಶಾಂತಪ್ಪ, ಮಾಧ್ಯಮ ವಕ್ತಾರ ಟಿ.ಪಿ. ರಮೇಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಕೆಪಿಸಿಸಿ ಸದಸ್ಯ ನಂದಕುಮಾರ್ ಹಾಜರಿದ್ದರು.