ಮಡಿಕೇರಿ, ಮೇ ೨೮: ಕೊಡವ ಮಕ್ಕಡ ಕೂಟದ ವತಿಯಿಂದ ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣ ಅವರು ಬರೆದ ‘ಅಲಾಸ್ಕ’ ಪ್ರವಾಸ ಕಥನ ಕನ್ನಡ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಪತ್ರಿಕಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಐ.ಎ.ಪಿ. ಪ್ರೆöÊವೆಟ್ ಲಿಮಿಟೆಡ್ನ ಸಿ.ಇ.ಒ ಮುಕ್ಕಾಟಿರ ಸೋಮಣ್ಣ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಕೊಡವ ಮಕ್ಕಡ ಕೂಟದಿಂದ ಬರಹಗಾರರನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳು ಹೊರ ಬರಲಿ ಎಂದು ಶುಭ ಹಾರೈಸಿದರು.
ಹಿರಿಯ ಸಾಹಿತಿ ಹಾಗೂ ಪುಸ್ತಕದ ಬರಹಗಾರ ಬಾಚರಣಿಯಂಡ ಪಿ.ಅಪ್ಪಣ್ಣ ಮಾತನಾಡಿ, ಹೃದಯವಂತ ಸಾಹಿತ್ಯ ಪೋಷಕರು ಇದ್ದಾಗ ಮಾತ್ರ ಸಾಹಿತ್ಯ ಕ್ಷೇತ್ರ ಅಗಾಧ ರೂಪದಲ್ಲಿ ಬೆಳೆಯಲು ಸಾಧ್ಯ ಎಂದರು.
೨೦೧೫ರಲ್ಲಿ ಯು.ಎಸ್.ಎ ಯ ಪ್ರತ್ಯೇಕವಾದ ಭೂ ಸ್ವರೂಪ ಮತ್ತು ವಿಶಿಷ್ಟ ಸಂಸ್ಕೃತಿಯ ಮೂಲ ನಿವಾಸಿಗಳನ್ನು ಹೊಂದಿರುವ ಅಲಾಸ್ಕ ಪ್ರದೇಶವನ್ನು ಅಧ್ಯಯನ ಮಾಡಿ ದಿನಚರಿಯನ್ನಾಗಿಸಲಾಯಿತು. ಇದನ್ನು ಆಧರಿಸಿ ಪುಸ್ತಕ ಬರೆಯುತ್ತಿದ್ದ ವೇಳೆ ನಮ್ಮನ್ನು ಅಲಾಸ್ಕಕ್ಕೆ ಕರೆದೊಯ್ದ ಅಳಿಯ ಜಮ್ಮಡ ಸೋಮಯ್ಯ ಅವರು ಅಗಲಿದರು. ಈ ನೋವಿನಿಂದ ನಮ್ಮ ಪ್ರವಾಸ ಕಥನ ನಿಂತು ಹೋಗಿತ್ತು. ಇದೀಗ ೯ ವರ್ಷಗಳ ನಂತರ ಬರೆದ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ ಎಂದು ಅಲಾಸ್ಕದ ಅನುಭವವನ್ನು ವಿವರಿಸಿದರು.
ಹಿರಿಯ ಸಾಹಿತಿ ಹಾಗೂ ಅಲಾಸ್ಕ ಪುಸ್ತಕದ ಮತ್ತೊಬ್ಬ ಬರಹಗಾರ್ತಿ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, ಕೃತಿ ರಚನೆ ದೊಡ್ಡ ವಿಚಾರವಲ್ಲ. ಅದನ್ನು ಬರೆದು ಪುಸ್ತಕ ರೂಪದಲ್ಲಿ ಹೊರತರುವುದು ಅತ್ಯಂತ ಕಷ್ಟದ ಕೆಲಸ. ದಾನಿಗಳ ಸಹಕಾರದ ಮೂಲಕ ಓದುಗರಿಗೆ ತಲುಪಿಸುವ ಕಾರ್ಯವನ್ನು ಕೊಡವ ಮಕ್ಕಡ ಕೂಟ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಅವರ ಸಂಪಾದಕೀಯದಲ್ಲಿ ಕೊಡವ ಮಕ್ಕಡ ಕೂಟದ ೧೦೦ನೇ ಪುಸ್ತಕಕ್ಕೆ ಬರಗಾರರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ ಎಂದರು.
೧೦೦ ಬರಹಗಾರರ ಲೇಖನಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಿ ೧೦೦ನೇ ಪುಸ್ತಕವಾಗಿ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ. ಕೊಡಗಿನ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ, ಪರಂಪರೆ, ಇತಿಹಾಸ, ಸೇರಿದಂತೆ ಸಮಾಜಮುಖಿ ಬರಹಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತರಲು ನಿರ್ಧರಿಸಲಾಗಿದೆ. ಈ ಪ್ರಯತ್ನಕ್ಕೆ ಹಿರಿಯ, ಕಿರಿಯ ಎಲ್ಲಾ ಬರಹಗಾರರು ಸಹಕರಿಸುವಂತೆ ಮನವಿ ಮಾಡಿದರು. ಆಸಕ್ತ ಬರಹಗಾರರು ಯಾವುದೇ ಜಾತಿ, ಮತ, ಬೇಧವಿಲ್ಲದೆ ತಮ್ಮ ಬರಹಗಳನ್ನು ಟೈಪ್ ಮಾಡಿ ಅಥವಾ ಬರೆದು ಪುತ್ತರಿರ ಕರುಣ್ ಕಾಳಯ್ಯ ಮೊ. ೮೭೬೨೫೧೫೬೫೯ ಸಂಖ್ಯೆಗೆ ವಾಟ್ಸಾö್ಯಪ್ ಮಾಡಬಹುದು. ಲೇಖನಗಳನ್ನು ಜೂನ್ ೩೦ರೊಳಗೆ ಕಳುಹಿಸಬೇಕು ಎಂದರು.
ವೇದಿಕೆಯಲ್ಲಿ ಕಾಫಿ ಬೆಳೆಗಾರ ಮುಕ್ಕಾಟಿರ ಕಾವೇರಿಯಪ್ಪ ಹಾಗೂ ಅರಣ್ಯ ಇಲಾಖೆಯ ನಿವೃತ್ತ ನೌಕರರಾದ ಮುಕ್ಕಾಟಿರ ಸರೋಜ ಕಾವೇರಿಯಪ್ಪ ಉಪಸ್ಥಿತರಿದ್ದರು.