ಸಿದ್ದಾಪುರ, ಮೇ ೨೭: ನೆಲ್ಲಿಹುದಿಕೇರಿ-ಅಭ್ಯತ್‌ಮಂಗಲ ಭಾಗಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಮಾನವನ ಮೇಲೆ ದಾಳಿ ನಡೆಸುತ್ತಿರುವ ಸಲಗವನ್ನು ಸೆರೆಹಿಡಿಯಲು ಮುಂದಿನ ವಾರದಿಂದ ಕಾರ್ಯಾಚರಣೆ ನಡೆಯಲಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ನೆಲ್ಲಿಹುದಿಕೇರಿ-ಅರೆಕಾಡು ಅಭ್ಯತ್‌ಮಂಗಲ ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಹಾಗೂ ಮಾನವನ ಮೇಲೆ ಹಾಗೂ ವಾಹನಗಳ ಮೇಲೆ ದಾಳಿ ನಡೆಸುತ್ತಿರುವ ಪುಂಡಾನೆ ಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖಾಧಿಕಾರಿಗಳು ನಿರ್ಧರಿಸಿದ್ದಾರೆ. ಈ ಪುಂಡಾನೆಗೆ ಈಗಾಗಲೇ ಅರಣ್ಯ ಇಲಾಖೆಯವರು ‘ಕೆಂಚ’ ಎಂದು ನಾಮಕರಣ ಮಾಡಿದ್ದಾರೆ. ಇದು ವಸತಿ ಪ್ರದೇಶಗಳಲ್ಲಿ ರಾತ್ರಿ ಓಡಾಡುತ್ತ ಭೀತಿ ಹುಟ್ಟಿಸಿದೆ. ಹಲವಾರು ಕಾರ್ಮಿಕರ ಮೇಲೆ ಹಾಗೂ ರಸ್ತೆಯಲ್ಲಿ ವಾಹನಗಳಲ್ಲಿ ತೆರಳುತ್ತಿರುವ ಸವಾರರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಘಟನೆಗಳು ನಡೆದಿದ್ದರು ಇದರ ಚಲನವಲನವನ್ನು ಅರಣ್ಯ ಇಲಾಖಾಧಿಕಾರಿಗಳು ಕಂಡು ಹಿಡಿದಿದ್ದಾರೆ. ಅಲ್ಲದೇ ಈ ಸಲಗವು ಸುತ್ತಾಡುತ್ತಿರುವ ಸ್ಥಳಗಳನ್ನು ಗುರುತಿಸಿದ್ದಾರೆ. ಸಲಗವನ್ನು ಸೆರೆಹಿಡಿಯಲು ಸರ್ಕಾರ ಅನುಮತಿ ನೀಡಿದೆ. ಆದರೆ ಕಾಡಾನೆಗಳನ್ನು ಸೆರೆ ಹಿಡಿಯಲು ಸಾಕಾನೆಗಳು ಹಾಸನ ಜಿಲ್ಲೆಗೆ ತೆರಳಿದ್ದು, ಅವುಗಳು ಬಂದ ಬಳಿಕ ಮುಂದಿನ ವಾರ ಸಲಗದ ಸೆರೆಗೆ ಕಾರ್ಯಾಚರಣೆ ನಡೆಯಲಿದೆ. ಉಪಟಳ ನೀಡುವ ಸಲಗದಿಂದಾಗಿ ಗ್ರಾಮಸ್ಥರು ರಾತ್ರಿ ಮನೆಯಿಂದ ಹೊರ ಬರದ ಪರಿಸ್ಥಿತಿ ನಿರ್ಮಾಣವಾಗಿದೆಂದು ಸ್ಥಳೀಯರು ತಿಳಿಸಿದ್ದಾರೆ. -ವಾಸು