ಸಿದ್ದಾಪುರ, ಮೇ ೨೮: ಗುಯ್ಯ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಕಾಡಾನೆ ಹಾವಳಿ ಮಿತಿಮೀರಿದ್ದು ಸ್ಥಳೀಯರು ನಡೆದಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹೆರಿಗೆ ನೋವಿನಿಂದ ಬಳಲುತ್ತಿದ್ದ ಕಾರ್ಮಿಕ ಮಹಿಳೆಯೊಬ್ಬರನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಕಾಡಾನೆಯೊಂದು ತೋಟದ ರಸ್ತೆಯಲ್ಲಿ ಗಂಟೆಗಳ ಕಾಲ ಅಡ್ಡ ನಿಂತು ತೊಂದರೆ ಕೊಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ. ಗುಯ್ಯ ಗ್ರಾಮದ ಮಂಡೆಪAಡ ಪ್ರವೀಣ್ ಬೋಪಯ್ಯ ಎಂಬವರ ಕಾಫಿ ತೋಟದ ಲೈನ್‌ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕ ಮಹಿಳೆ ಸುನಿತಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಪತಿ ನವೀನ ತೋಟದ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.

ತಮ್ಮ ಕಾರಿನೊಂದಿಗೆ ಸ್ಥಳಕ್ಕೆ ಆಗಮಿಸಿದ ಬೆಳಗಾರ ಪ್ರವೀಣ್ ಬೋಪಯ್ಯ ಮಹಿಳೆಯನ್ನ ತಕ್ಷಣ ಕಾರಿನಲ್ಲಿ ಆಸ್ಪತ್ರೆಗೆ ತೋಟದ ಮಾರ್ಗವಾಗಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಒಂಟಿ ಸಲಗವೊಂದು ಮುಖ್ಯ ರಸ್ತೆಯಲ್ಲಿಯೇ ಗಂಟೆಗಳ ಕಾಲ ನಿಂತು ವಾಹನಕ್ಕೆ ತಡೆಹಿಡಿದಿದೆ. ನಂತರ ಹಾರನ್ ಶಬ್ದಕ್ಕೆ ಬೆದರಿದ ಕಾಡಾನೆ ಕಾಫಿ ತೋಟದತ್ತ ನುಸುಳಿದೆ. ಮಹಿಳೆಗೆ ಸಿದ್ದಾಪುರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆ್ಯಂಬ್ಯುಲೆನ್ಸ್ ಮೂಲಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಕಳೆದ ಕೆಲ ದಿನಗಳಿಂದ ಒಂಟಿ ಸಲಗವೊಂದು ಕಾಫಿ ತೋಟ ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಬೆಳೆಗಾರರು, ಕಾರ್ಮಿಕರು, ಹಾಗೂ ಸ್ಥಳೀಯರು ಭಯಭೀತರಾಗಿದ್ದಾರೆ. -ಎಸ್.ಎಂ. ಮುಬಾರಕ್