ಶನಿವಾರಸಂತೆ, ಮೇ ೨೯: ಸೋಮವಾರಪೇಟೆ ತಾಲೂಕಿನ ದೇವಾಲಯಗಳಿಗೆ ಶಾಸನಾಧಾರವಿಲ್ಲದೇ ಹೋದರೂ ಭಕ್ತರ ಆಕರ್ಷಣೆಯಲ್ಲಿ ದಿನದಿಂದ ದಿನಕ್ಕೆ ಪ್ರಸಿದ್ಧಿ ಪಡೆಯುತ್ತಿವೆ. ಇಂತಹ ದೇವಾಲಯಗಳಲ್ಲಿ ಶನಿವಾರಸಂತೆಯಿAದ ೬ ಕಿ.ಮೀ. ದೂರದಲ್ಲಿರುವ ಬಾಗೇರಿ ಎಂಬ ಪುಟ್ಟ ಗ್ರಾಮದಲ್ಲಿರುವ ಶ್ರೀ ರಾಮೇಶ್ವರ’ ದೇವಾಲಯ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ. ಈ ಐತಿಹಾಸಿಕ ದೇವಾಲಯ ಪ್ರಸ್ತುತ ಸರ್ಕಾರದ ಅನುದಾನ ಹಾಗೂ ದಾನಿಗಳ ಔದಾರ್ಯದಿಂದ ರೂ. ೨೮ ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ನೂತನ ದೇವಾಲಯ ಕಟ್ಟಡ ಜೂನ್ ೨ ಭಾನುವಾರ ಮತ್ತು ೩ ಸೋಮವಾರದಂದು ಉದ್ಘಾಟನೆಗೊಳ್ಳಲು ಸಜ್ಜಾಗಿದೆ.

ಕೇವಲ ೩೦ ಕುಟುಂಬಗಳಿರುವ ಬಾಗೇರಿ ಗ್ರಾಮದ ಕೊನೆಯ ಭಾಗದಲ್ಲಿ ಹಸಿರು ಪ್ರಕೃತಿಯ ಹಿನ್ನೆಲೆಯಲ್ಲಿ ಎತ್ತರವಾದ ಸ್ಥಳದಲ್ಲಿ ರಾಮೇಶ್ವರ ದೇವಾಲಯವಿದೆ. ಕಲ್ಲಿನ ಅಡಿಪಾಯ ಕಲ್ಲಿನದೇ ಮೇಲ್ಛಾವಣಿ, ಗರ್ಭಗುಡಿಯಲ್ಲಿ ಕಪ್ಪು ಶಿಲೆಯ ಬೃಹತ್ ಶಿವಲಿಂಗ ಮೂರ್ತಿಯಿದೆ. ಪ್ರಾಂಗಣದಲ್ಲಿ ನಾಗ, ಗಣಪತಿ, ಸುಬ್ರಹ್ಮಣ್ಯ, ನಂದಿ, ದಕ್ಷಿಣಾಮೂರ್ತಿ, ಭೃಂಗಿ, ಸದಾಶಿವ, ಚಂಡಿ, ಎಂಬ ಅಷ್ಟ ಗಣಗಳಿವೆ. ಗರ್ಭಗುಡಿ ಮತ್ತು ಪ್ರಾಂಗಣದ ಕಲ್ಲಿನ ಮೇಲ್ಛಾವಣಿಯಲ್ಲಿ ಒಂಭತ್ತು ಕಮಲದ ಹೂಗಳ ಕೆತ್ತನೆಯಿದೆ. ಪ್ರಾಂಗಣದ ಶಿವಲಿಂಗಕ್ಕೆ ಮುಖ ಮಾಡಿ ಕುಳಿತ ಕಪ್ಪು ಶಿಲೆಯ ನಂದಿ ವಿಗ್ರಹವಿದೆ. ಜೀರ್ಣೋದ್ಧಾರವಾಗಿರುವ ಈ ದೇವಾಲಯದ ಎಡಭಾಗದಲ್ಲೇ ಅನತಿ ದೂರದಲ್ಲಿ ಲಕ್ಷ್ಮಣತೀರ್ಥ ಎಂಬ ಕೊಳವಿದೆ.

ಕಲ್ಲಿನ ದೇವಾಲಯವಾಗಿದ್ದರೂ ಕಲ್ಲಿನ ಮೇಲೆ ಯಾವುದೇ ಬರವಣಿಗೆಯಿಲ್ಲ. ಈ ರಾಮೇಶ್ವರ ದೇವಾಲಯ ಯಾವ ಕಾಲದ್ದು ? ಯಾರು ನಿರ್ಮಿಸಿದ್ದು ? ಎಂಬ ಪ್ರಶ್ನೆಗಳಿಗೆ ದೇವಾಲಯದ ಈಗಿನ ಅರ್ಚಕರಾದ ಈ ಕುಟುಂಬದ ಎಂಟನೇ ತಲೆಮಾರಿನವರಾದ ಬಿ.ಎಸ್. ಶಂಕರನಾರಾಯಣರು ಕತೆಯೊಂದನ್ನು ಹೇಳುತ್ತಾರೆ.

“ರಾವಣನನ್ನು ಕೊಂದ ರಾಮ ಪಾಪ ಪರಿಹಾರರ್ಥವಾಗಿ ಲಂಕೆಯಿAದ ಅಯೋಧ್ಯೆಗೆ ಹೋಗುವ ದಾರಿಯಲ್ಲಿ ಉದ್ದಕ್ಕೂ ಸಹಸ್ರ ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿದನಂತೆ. ಅವುಗಳಲ್ಲಿ ಬಾಗೇರಿಯ ರಾಮೇಶ್ವರ ದೇವಾಲಯದ ಶಿವಲಿಂಗವೂ ಒಂದು’’ ಎಂದು ಹೇಳುತ್ತಾರೆ. ಲಿಂಗ ಪೂಜೆಗಾಗಿ ನೀರು ಸಿಗದಿರಲು ಲಕ್ಷ್ಮಣ ನೀರಿಗಾಗಿ ಬಾಣ ಬಿಟ್ಟಾಗ ಭೂಮಿಯಿಂದ ನೀರು ಚಿಮ್ಮಿತಂತೆ. ಇಂದು ಈ ಕೊಳಕ್ಕೆ “ಲಕ್ಷ್ಮಣ ತೀರ್ಥ’’ ಎಂಬ ಹೆಸರಿದೆ. ಶಿವಲಿಂಗದ ಅಭಿಷೇಕಕ್ಕಾಗಿ ಆ ಕೊಳದಿಂದಲೇ ನೀರು ತರುತ್ತಾರೆ. ಕೊಳದ ಮಧ್ಯೆ ತಳಭಾಗದಲ್ಲಿ ಜಲಲಿಂಗವಿದೆಯAತೆ.

ಕೊಡಗನ್ನು ಆಳಿದ ವೀರರಾಜೇಂದ್ರ ರಾಜನ ಕಾಲದಲ್ಲಿ ಸಮಸ್ಯೆಗಳು ಇತ್ಯರ್ಥವಾಗದಿದ್ದಾಗ, ನ್ಯಾಯ ತೀರ್ಮಾನವಾಗದಿದ್ದಾಗ ತಪ್ಪು ಮಾಡಿದವರನ್ನು ಬಾಗೇರಿ ರಾಮೇಶ್ವರ ದೇವಾಲಯಕ್ಕೆ ಹೋಗಿ ಪ್ರಮಾಣ ಮಾಡಿ ಬರುವಂತೆ ಕಳುಹಿಸುತ್ತಿದ್ದರಂತೆ. ರಾಜರ ಆಳ್ವಿಕೆ ಕಾಲದಲ್ಲೇ ಈ ಪುಟ್ಟ ದೇವಾಲಯ ಅದೆಷ್ಟು ಪ್ರಸಿದ್ಧಿ ಪಡೆದಿತ್ತು. ಸತ್ಯಕ್ಕೆ ಹೆಸರಾಗಿತ್ತೆಂಬುದು ಇದರಿಂದಲೇ ತಿಳಿಯುತ್ತದೆ.

ಈ ದೇವಾಲಯದ ಬಗ್ಗೆ ಶಾಸನಾಧಾರಗಳಿಲ್ಲ. ಯಾವುದೇ ಬರವಣಿಗೆಗಳೂ ಇಲ್ಲ. ತಾಳೆಗರಿಯ ಓಲೆಗಳಾಗಲೀ ಯಾವುದೇ ಪುಸ್ತಕಗಳಾದರೂ ಇವೆಯೇ ಎಂದರೆ ಅರ್ಚಕ ಶಂಕರನಾರಾಯಣರು, ತಮ್ಮ ವಂಶಜರು ಹಾಸನ ಜಿಲ್ಲೆಯ ಕಂಡ್ಲಿ ಮೂಲದವರಾಗಿದ್ದು, ಬಾಗೇರಿ ಗ್ರಾಮಕ್ಕೆ ವಲಸೆ ಬಂದವರು.

ಗುಡಿಸಲಲ್ಲಿ ವಾಸವಿದ್ದಾಗ, ಬೆಂಕಿ ಬಿದ್ದು ಗುಡಿಸಲೊಳಗೆ ತಾಳೆಗರಿಯ ಓಲೆಗಳು, ದೇವಾಲಯಕ್ಕೆ ಸಂಬAಧಪಟ್ಟ ದಾಖಲಾತಿಗಳೆಲ್ಲಾ ಸುಟ್ಟು ಹೋಗಿರಬಹುದು ಎನ್ನುತ್ತಾರೆ.

೮ ತಲೆಮಾರಿನವರು ಈ ದೇವಾಲಯದ ಅರ್ಚಕರಾಗಿದ್ದರು. ಪ್ರತಿದಿನ ಬೆಳಿಗ್ಗೆ - ಸಂಜೆ ಪೂಜೆ, ಮಂಗಳಾರತಿ ನಡೆಯುತ್ತದೆ. ಈಗಿನ ಅರ್ಚಕರಾದ ಬಿ.ಎಸ್. ಶಂಕರನಾರಾಯಣರು ೮ನೇ ತಲೆಮಾರಿನವರು. ಅವರ ತಂದೆ ಬಿ. ಸುಬ್ಬರಾಯ ೭ನೇ ತಲೆಮಾರಿನವರು.

೫ ತಲೆಮಾರಿನವರ ಬಗ್ಗೆ ಮಾತ್ರ ತಮಗೆ ತಿಳಿದಿದೆ ಎನ್ನುವ ಶಂಕರನಾರಾಯಣರು ಉಳಿದೆರೆಡು ತಲೆಮಾರಿನ ಬಗ್ಗೆ ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಯಾರನ್ನು ಸಂಪರ್ಕಿಸಬೇಕು ಎಂಬ ಗೊಂದಲದಲ್ಲಿದ್ದಾರೆ.

ತಮ್ಮ ತಂದೆಯ ಮುತ್ತಜ್ಜ ಶಂಕರನಾರಾಯಣ ಪಾರುಪತ್ಯಗಾರರಾಗಿದ್ದರು. ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ ಆಟದ ಮೈದಾನವು ಮೂಲ ತಲೆಮಾರಿನವರದಾಗಿತ್ತು ಎಂದು ನೆನಪು ಮಾಡಿಕೊಳ್ಳುತ್ತಾರೆ.

ಬಾಗೇರಿ ಗ್ರಾಮದಲ್ಲಿ ೩ ಮಾಸ್ತಿ ಕಲ್ಲುಗಳಿವೆ. ದೇವಾಲಯಕ್ಕೆ ಹೊಂದಿಕೊAಡಿರುವ ಅರ್ಚಕರ ಕಾಫಿ ತೋಟದಲ್ಲಿ ಒಂದು ಮಾಸ್ತಿ ಕಲ್ಲಿದೆ. ಗೋಮಾಳದಲ್ಲೊಂದು ಕಲ್ಲಿದೆ.

ಗ್ರಾಮಕ್ಕೆ ಹೋಗುವ ಹಾದಿಯಲ್ಲಿ ಈ ಹಿಂದೆ ನೆಲೆನಿಂತಿದ್ದ ಬೃಹತ್ ಗಾತ್ರದ ಮಾವಿನ ಮರದ ಸಮೀಪದಲ್ಲಿ ಮತ್ತೊಂದು ಮಾಸ್ತಿ ಕಲ್ಲಿದೆ.

೩ ಮಾಸ್ತಿ ಕಲ್ಲುಗಳಲ್ಲಿ ಯಾವುದೇ ಬರಹಗಳಿಲ್ಲ. ಒಂದೇ ರೀತಿಯ ಚಿತ್ರಗಳಿದ್ದು; ಮೂರು ಸಾಲುಗಳಲ್ಲಿ ಚಿತ್ರಗಳನ್ನು ಕೆತ್ತಲಾಗಿದೆ. ಮೊದಲ ಸಾಲಿನಲ್ಲಿ ವ್ಯಕ್ತಿಯೊಬ್ಬ ಕುಳಿತ್ತಿದ್ದು; ಮತ್ತಿಬ್ಬರು ವ್ಯಕ್ತಿಗಳು ಆತನನ್ನು ಸನ್ಮಾನಿಸುತ್ತಿರುವ ಹಾಗಿದೆ. ಎರಡನೇ ಸಾಲಿನಲ್ಲಿ ವ್ಯಕ್ತಿಗಳಿಬ್ಬರು ಆ ಎರಡು ಕಡೆ ನಿಂತು ಎಡಗೈಯಲ್ಲಿ ಆತನ ಕೈಗಳನ್ನು ಹಿಡಿದು, ಬಲಗೈಯಲ್ಲಿ ಖಡ್ಗಗಳನ್ನು ಎತ್ತಿ ಹಿಡಿದಂತಿದೆ.

ಮೂರನೇ ಸಾಲಿನಲ್ಲಿ ಆ ವ್ಯಕ್ತಿ ಕೈಗಳನ್ನು ಮುಗಿದು, ಶರಣಾಗುತ್ತಿರುವಂತೆ ಚಿತ್ರಿಸಲಾಗಿದೆ.

ರಾಮೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸ ಹಾಗೂ ಮಹಾಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಸೋಮವಾರ ವಿಶೇಷ ಪೂಜೆಯಿದೆ.

ಶ್ರೀ ರಾಮೇಶ್ವರ ದೇವಾಲಯ ಸುಮಾರು ೨೦ ವರ್ಷಗಳ ಹಿಂದೆ ಪ್ರಕೃತಿಯ ಮಡಿಲಲ್ಲಿ ಪುಟ್ಟ ಹಂಚಿನ ದೇವಾಲಯವಾಗಿತ್ತು. ಇದೀಗ ಜೀರ್ಣೋದ್ಧಾರದ ಹಿಂದೆ ಪ್ರಧಾನ ಅರ್ಚಕ ಶಂಕರನಾರಾಯಣ ಭಟ್ಟರ ಕನಸಿದೆ, ಪರಿಶ್ರಮವಿದೆ, ಗ್ರಾಮಸ್ಥರ ಸಹಕಾರ, ದಾನಿಗಳ ಔದಾರ್ಯ, ಸರ್ಕಾರದ ಅನುದಾನದಿಂದ ದೇವಾಲಯ ಜೀರ್ಣೋದ್ಧಾರಗೊಂಡು ಸುಂದರವಾಗಿ ಕಂಗೊಳಿಸುತ್ತಿದೆ.

ಅನತಿ ದೂರದ ಲಕ್ಷ್ಮಣತೀರ್ಥ ಕೊಳ ದುರಸ್ತಿಯಾಗಬೇಕು.

ಸುರಕ್ಷತೆಗೆ ದೇವಾಲಯದ ಸುತ್ತ ತಡೆಗೋಡೆ ನಿರ್ಮಾಣವಾಗಿ, ಆವರಣಕ್ಕೆ ಇಂಟರ್‌ಲಾಕ್ ಅಳವಡಿಸಿದರೇ ದೇವಾಲಯ ಮತ್ತಷ್ಟು ಸುಂದರವಾಗಿ ಕಂಗೊಳಿಸುತ್ತದೆ. ‘

ಬಾ...ಕೇರಿಗೆ’ ಎಂಬುದೇ “ಬಾಗೇರಿ’’ ಎಂದಾಗಿ ಗ್ರಾಮದ ಹೆಸರಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

- ಶ.ಗ. ನಯನತಾರಾ, ಶನಿವಾರಸಂತೆ.