ಸೋಮವಾರಪೇಟೆ, ಮೇ ೨೯: ರಸ್ತೆಯಲ್ಲಿ ನಿಂತಿದ್ದ ಮಹಿಳೆಯೋರ್ವ ರಿಂದ ಚೈನ್ ಕಸಿಯಲು ಯತ್ನಿಸಿದ ಘಟನೆ ಪಟ್ಟಣ ಸಮೀಪದ ಚೌಡ್ಲು ಗಾಂಧಿನಗರದ ಗೌಡ ಸಮಾಜ ರಸ್ತೆಯಲ್ಲಿ ನಡೆದಿದೆ.

ಪಟ್ಟಣದ ಜೂನಿಯರ್ ಕಾಲೇಜು ರಸ್ತೆ ನಿವಾಸಿಯಾಗಿರುವ ಮಹಿಳೆ ತನ್ನ ಪೋಷಕರ ಮನೆಯಿರುವ ಗಾಂಧಿನಗರಕ್ಕೆ ಮೊನ್ನೆ ದಿನ ಮಗಳೊಂದಿಗೆ ತೆರಳಿದ್ದು, ಈ ಸಂದರ್ಭ ಮಗಳು ಅಂಗಡಿಗೆ ತೆರಳಿ ಸಾಮಗ್ರಿ ಖರೀದಿಸುತ್ತಿದ್ದಳು.

ಮಹಿಳೆಯು ಅಂಗಡಿಯ ಅನತಿ ದೂರದಲ್ಲಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಸಂದರ್ಭ ಸ್ಕೂಟಿಯಲ್ಲಿ ಆಗಮಿಸಿದ ಆಗಂತುಕ ಯುವಕ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಕಸಿಯಲು ಯತ್ನಿಸಿದ್ದು, ಈ ಸಂದರ್ಭ ಮಹಿಳೆ ಸ್ವಲ್ಪ ಹಿಂದೆ ಬಂದು ಜೋರಾಗಿ ಕಿರುಚಿದ ಹಿನ್ನೆಲೆ ಸರಗಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದಾದ ನಂತರ ಮಹಿಳೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಕ್ಕಪಕ್ಕದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ಸಂದರ್ಭ, ಸ್ಥಳೀಯ ಯುವಕನ ಕೃತ್ಯವೆಂದು ತಿಳಿದುಬಂದಿದೆ.

ಪಟ್ಟಣ ವ್ಯಾಪ್ತಿಯಲ್ಲಿ ಇದೇ ಪ್ರಥಮ ಬಾರಿಗೆ ಇಂತಹ ಕೃತ್ಯ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಅಕ್ಕಪಕ್ಕದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಮಹಿಳೆಯ ಮನೆಯವರೇ ಸಂಗ್ರಹಿಸಿ ಪೊಲೀಸ್ ಠಾಣೆಗೆ ನೀಡಿ ಎರಡು ದಿನ ಕಳೆದರೂ ಈವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ.

ಘಟನೆ ನಡೆದ ನಂತರ ಗೌಡ ಸಮಾಜದಿಂದ ದೊಡ್ಡಮಾರಿಯಮ್ಮ ದೇವಾಲಯ ರಸ್ತೆಯಲ್ಲಿ ಸಂಚರಿಸಿದ ವಾಹನಗಳ ಚಲನ ವಲನ ಪರಿಶೀಲಿಸಿದ್ದು, ಇದರಲ್ಲಿ ಕೃತ್ಯಕ್ಕೆ ಬಳಸಲಾದ ಸ್ಕೂಟಿಯಲ್ಲಿ ಯುವಕನೋರ್ವ ತೆರಳಿರುವುದು ಪತ್ತೆಯಾಗಿದೆ. ಇದೇ ಯುವಕನನ್ನು ಮಹಿಳೆಯೂ ಗುರುತಿಸಿದ್ದು, ಪೊಲೀಸರು ಮಾತ್ರ ಇಂತಹ ಘಟನೆ ನಡೆದೇ ಇಲ್ಲವೇನೋ ಎಂಬAತಿದ್ದಾರೆ. ಈ ಬಗ್ಗೆ ಪೊಲೀಸ್ ಉನ್ನತಾಧಿಕಾರಿ ಗಳ ಗಮನ ಸೆಳೆಯಲಾಗುವುದು ಎಂದು ಮಹಿಳೆಯ ಕುಟುಂಬಸ್ಥರು ತಿಳಿಸಿದ್ದಾರೆ.