ನೈಋತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಭೋಜೇಗೌಡ

ಮಡಿಕೇರಿ, ಮೇ ೨೯: ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವುದರೊAದಿಗೆ ದುಸ್ಥಿತಿಯಲ್ಲಿರುವ ಶಾಲೆಗಳಿಗೆ ಕಾಯಕಲ್ಪ ನೀಡಲು ತಾನು ಕಟಿಬದ್ಧ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ವಿಶ್ವಾಸದಿಂದ ನುಡಿದರು.

‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯಲ್ಲಿ ಹಲವಷ್ಟು ಲೋಪದೋಷಗಳಿವೆ. ತಾಂತ್ರಿಕ ಸಮಸ್ಯೆಯೂ ಕಾಡುತ್ತಿದೆ. ಇವೆಲ್ಲವನ್ನು ಪರಿಹರಿಸಬೇಕಾದ ಸರಕಾರ ಗೌಣ ವಹಿಸಿರುವುದು ಎದ್ದು ಕಾಣುತ್ತಿದೆ. ಇವೆಲ್ಲದಕ್ಕೂ ಧ್ವನಿಯಾಗಿ ತಾನು ಈ ಹಿಂದೆ ವಿಧಾನ ಪರಿಷತ್ ಸದಸ್ಯನಾಗಿದ್ದ ಸಂದರ್ಭ ಕೆಲಸ ಮಾಡಿದ ಆತ್ಮತೃಪ್ತಿ ಹೊಂದಿದ್ದೇನೆ. ಶಿಕ್ಷಕರ ವಲಯದಲ್ಲೂ ತನ್ನ ಕೆಲಸದ ಬಗ್ಗೆ ಮೆಚ್ಚುಗೆ ಇದೆ. ಆದರೆ, ಸಮಸ್ಯೆಗಳ ಪರಿಹಾರಕ್ಕೆ ತಾರ್ಕಿಕ ಅಂತ್ಯ ದೊರೆತಿಲ್ಲ ಎಂಬ ನೋವು ಕೂಡ ತನ್ನಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಳೆ ಪಿಂಚಣಿ ಯೋಜನೆ ಮರು ಜಾರಿ ನಿರ್ಣಯ

ಬಹುಕಾಲದ ಬೇಡಿಕೆಯಾಗಿರುವ ಹಳೆ ಪಿಂಚಣಿ ಯೋಜನೆ ಮರುಜಾರಿ ಸಂಬAಧ ಸರಕಾರ ನಿರ್ಣಯ ಕೈಗೊಂಡರೆ ಸಮಸ್ಯೆ ಅಂತ್ಯಗೊAಡು ನೌಕರರು ನಿವೃತ್ತಿ ಬಳಿಕ ನೆಮ್ಮದಿ ಬದುಕು ಕಂಡುಕೊಳ್ಳಲು ಸಾಧ್ಯ ಎಂದು ಎಸ್.ಎಲ್. ಭೋಜೇಗೌಡ ವಿಶ್ಲೇಷಿಸಿದರು.

ಹಳೆ ಪಿಂಚಣಿ ವ್ಯವಸ್ಥೆಯಿಂದ ವೃತ್ತಿನಿರತ ಶಿಕ್ಷಕರು ಸೇರಿದಂತೆ ಸರಕಾರಿ ನೌಕರರಿಗೆ ಸೇವಾ ಭದ್ರತೆ ದೊರೆತಂತಾಗುತ್ತದೆ. ಈ ಸಂಬAಧ ಸುಪ್ರೀಂ ಕೋರ್ಟ್ ಕೂಡ ಸರಕಾರಕ್ಕೆ ಸ್ಪಷ್ಟ ನಿರ್ದೇಶನವನ್ನು ನೀಡಿ ಹಳೆ ಪಿಂಚಣಿ ವ್ಯವಸ್ಥೆ ನೀಡಲು ಸೂಚಿಸಿದೆ. ಆಯಾ ರಾಜ್ಯಸರಕಾರಕ್ಕೆ ಈ ಯೋಜನೆ ಜಾರಿ ಮಾಡುವ ಪರಮಾಧಿಕಾರವಿದೆ. ಇದಕ್ಕೆ ಯಾವುದೇ ಆಡಳಿತಾತ್ಮಕ ಅಥವಾ ನ್ಯಾಯಾಂಗ ತೊಡಕುಗಳಿಲ್ಲ. ಈ ಬಗ್ಗೆ ತಾನು ಹೋರಾಡುವೆ ಎಂದು ಒತ್ತಿ ಹೇಳಿದರು.

ಸೇವಾ ಭದ್ರತೆ ಇದೆ ಎಂದು ಕೆಲಸ ಮಾಡಿದರೆ ಉತ್ತಮ ಕಾರ್ಯಗಳನ್ನು ನಿರೀಕ್ಷಿಸಬಹುದು. ಇಲ್ಲವಾದಲ್ಲಿ ಕಳವಳದಿಂದಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿ ಗುಣಮಟ್ಟದ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಎಂದು ಭೋಜೇಗೌಡ ಕಳವಳ ವ್ಯಕ್ತಪಡಿಸಿದರು.

ಶಾಲೆಗಳಿಗೆ ಕಾಯಕಲ್ಪ

ದುಸ್ಥಿತಿಯಲ್ಲಿರುವ ಶಾಲೆಗಳಿಗೆ ಕಾಯಕಲ್ಪ ನೀಡಲು ಮುತುವರ್ಜಿ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಬೇಕಾದ ಸಂದಿಗ್ದತೆ ಇರುವ ಕಾರಣ ಸರಕಾರಿ ಶಾಲೆ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಿರಬೇಕು. ಶಿಕ್ಷಣ ಎಲ್ಲಾ ವರ್ಗದವರಿಗೂ ದೊರೆತರೆ ಸಮಾಜ ಪರಿಪೂರ್ಣತೆಯಲ್ಲಿ ಕೂಡಿರುತ್ತದೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಬದ್ಧ ಎಂದು ಹೇಳಿದ ಭೋಜೇಗೌಡ, ಸರಕಾರಿ ಶಾಲೆಯೊಂದಿಗೆ ಐ.ಟಿ.ಐ., ಪಾಲಿಟೆಕ್ನಿಕ್‌ನಂತಹ ತಾಂತ್ರಿಕ ಶಿಕ್ಷಣ ಸಂಸ್ಥೆಯೂ ಸಮಸ್ಯೆ ಎದುರಿಸುತ್ತಿದ್ದು, ಅವುಗಳಿಗೂ ಕಾಯಕಲ್ಪ ನೀಡಬೇಕಾಗಿದೆ ಎಂದರು.

ಶಿಕ್ಷಕರ ಕೊರತೆ ನೀಗಬೇಕು

ರಾಜ್ಯದಲ್ಲಿ ಪ್ರಾಥಮಿಕ ಶಾಲೆಯಿಂದ ಪದವಿ ಕಾಲೇಜಿನ ಹಂತದ ತನಕ ಶಿಕ್ಷಣ ಒದಗಿಸಲು ಶಿಕ್ಷಕರ ಕೊರತೆ ಇದೆ. ಈ ಸಮಸ್ಯೆಯನ್ನು ನೀಗಿಸಬೇಕಾಗಿದೆ ಎಂದು ಭೋಜೇಗೌಡ ಹೇಳಿದರು.

ಅನುದಾನಿತ, ಅನುದಾನರಹಿತ ಶಾಲೆಗಳು ಸೇರಿದಂತೆ ಪದವಿಪೂರ್ವ, ಪದವಿ ಕಾಲೇಜುಗಳಲ್ಲಿ ಖಾಯಂ ಶಿಕ್ಷಕರಿಲ್ಲ. ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಿಸಲಾಗಿದೆ. ಆದರೆ, ಅವರಿಗೆ ಸೇವಾ ಭದ್ರತೆ ಇಲ್ಲ. ಖಾಯಂ ಶಿಕ್ಷಕರ ನೇಮಕಾತಿಗೆ ಪ್ರಯತ್ನಿಸಿ ಸಮಸ್ಯೆ ಬಗೆಹರಿಸುವ ಪೂರ್ಣ ವಿಶ್ವಾಸ ನೀಡಿದ ಭೋಜೇಗೌಡ ಅವರು, ವೃತ್ತಿಪರ ಕೋರ್ಸ್ಗಳಿಗೂ ಕ್ರಮಬದ್ಧತೆ ಕಂಡುಹಿಡಿದು ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಬಡ್ತಿ ವೇತನ ತಾರತಮ್ಯ

ಶಿಕ್ಷಕರ ಬಡ್ತಿ ವಿಚಾರದಲ್ಲಿ ಕೆಲವೊಂದು ಸಮಸ್ಯೆಗಳಿವೆ. ಎಲ್ಲಾ ಇಲಾಖೆಗಳಲ್ಲಿಯೂ ಬಡ್ತಿ ಪಡೆಯಲು ನಿಯಮಗಳಿದ್ದು, ಅದು ಸರಿಯಾದ ಸಮಯದಲ್ಲಿ ಅಳವಡಿಕೆಯಾಗಿ ಸಿಬ್ಬಂದಿ ಬಡ್ತಿ ಪಡೆದು ಉನ್ನತ ಹುದ್ದೆ ಅಲಂಕರಿಸುತ್ತಾರೆ. ಆದರೆ, ಶಿಕ್ಷಣ ಇಲಾಖೆಯಲ್ಲಿ ಬಡ್ತಿಗೆ ಅವಕಾಶವಿದ್ದರೂ ಸರಿಯಾದ ಸಮಯದಲ್ಲಿ ಬಡ್ತಿಯಾಗದೆ ಹಿಂದುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಇದನ್ನು ಸರಿಪಡಿಸುವುದು ತನ್ನ ಚಿಂತನೆ ಎಂದು ವಿವರಿಸಿದರು.

ಬಡ್ತಿ ವೇತನ ತಾರತಮ್ಯವೂ ಶಿಕ್ಷಕರಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ. ಪ್ರಾಥಮಿಕ ಶಿಕ್ಷಕನಿಂದ ಪ್ರೌಢ ಶಿಕ್ಷಕನಾಗಿ ಬಡ್ತಿ ಪಡೆದರೆ ಪ್ರಾಥಮಿಕ ಶಿಕ್ಷಕನಿಂದ ಕಡಿಮೆ ವೇತನ ಪಡೆಯುವ ದುಸ್ಥಿತಿ ಶಿಕ್ಷಣ ಇಲಾಖೆಯಲ್ಲಿದೆ. ಕಾಲಕಾಲಕ್ಕೆ ಬಡ್ತಿ ದೊರೆಯಬೇಕು. ಇದರ ಆಧಾರದಡಿ ಸಂಬಳವೂ ಹೆಚ್ಚಾಗಬೇಕು. ಈ ಸಮಸ್ಯೆ ಸರಿಪಡಿಸಲು ಶ್ರಮಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ತಾಂಡವವಾಡುತ್ತಿವೆ ಸಮಸ್ಯೆಗಳು

ಶಿಕ್ಷಣ ಕ್ಷೇತ್ರದಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳಿಗೆ ಮುಕ್ತಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರಿಯಾದ ಸಮಯಕ್ಕೆ ಪಠ್ಯಪುಸ್ತಕಗಳು ಶಾಲಾ-ಕಾಲೇಜಿಗೆ ಸರಬರಾಜಾಗುತ್ತಿಲ್ಲ. ಪಠ್ಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಈ ಬಗ್ಗೆಯೂ ಮೇಲ್ಮನೆಯಲ್ಲಿ ಧ್ವನಿಯಾಗಿ ಕೆಲಸ ಮಾಡುವೆ. ಶಿಕ್ಷಣ ಇಲಾಖೆಯಲ್ಲಿರುವ ಸಮಸ್ಯೆಗಳಿಗೆ ಅಂತ್ಯಹಾಡಿ ಗುಣಮಟ್ಟದ ಶಿಕ್ಷಣ ನೀಡಬೇಕಾದ ಜವಾಬ್ದಾರಿ ಪ್ರತಿನಿಧಿಗಳ ಹೆಗಲಮೇಲಿದ್ದು, ತಾನು ಗೆದ್ದ ನಂತರ ಇವೆಲ್ಲಾ ಸಮಸ್ಯೆಗಳಿಗೆ ಇತಿಶ್ರೀ ಹಾಕುತ್ತೇನೆ ಎಂದು ಅಭಯ ನೀಡಿದರು.

ಮೈತ್ರಿ ಅಭ್ಯರ್ಥಿ ಎಂಬ ನೋವಿಲ್ಲ

ಕಳೆದ ಬಾರಿ ಜೆಡಿಎಸ್ ಬೆಂಬಲಿತನಾಗಿ ಗೆಲುವು ಸಾಧಿಸಿದ್ದೆ. ಈ ಬಾರಿ ಬಿಜೆಪಿಯೊಂದಿಗೆ ಮೈತ್ರಿಯಿಂದ ಬಿಜೆಪಿ ಬೆಂಬಲವೂ ತನಗಿದೆ. ಹೋದ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಬಾರಿ ವಿಧಾನ ಪರಿಷತ್ ಸದಸ್ಯನಾಗಿ ಮಾಡಿದ ಕೆಲಸವನ್ನು ಶಿಕ್ಷಕರು ಮರೆತಿಲ್ಲ. ಈ ಬಾರಿಯೂ ತನ್ನನ್ನು ಗೆಲ್ಲಿಸಿ ಮೇಲ್ಮನೆಗೆ ಕಳುಹಿಸುತ್ತಾರೆ ಎಂಬ ಪೂರ್ಣ ವಿಶ್ವಾಸ ಹೊಂದಿದ್ದೇನೆ. ಶಿಕ್ಷಕರಿಗೆ ನ್ಯಾಯ ಒದಗಿಸಿಕೊಡಲು ಯಾವ ಸಿದ್ಧಾಂತವೂ ಅಡ್ಡಬರುವುದಿಲ್ಲ ಎಂದು ಉತ್ತರಿಸಿದರು.

ಕಿರುಪರಿಚಯ

ಮೂಲತಃ ಚಿಕ್ಕಮಗಳೂರಿನ ಸಕ್ಕರೆಪಟ್ಟಣ ನಿವಾಸಿಯಾಗಿರುವ ಭೋಜೇಗೌಡ ಅವರು ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಇವರ ತಂದೆ ಲಕ್ಷö್ಮಯ್ಯ, ಅಣ್ಣ ಧರ್ಮೇಗೌಡ ಕೂಡ ಶಾಸಕರಾಗಿ ಕೆಲಸ ಮಾಡಿದ್ದಾರೆ. ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿರುವ ಇವರು ೧೯೮೩ ರಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ, ನಗರಸಭೆ ಅಧ್ಯಕ್ಷರಾಗಿ, ಆಲ್ ಇಂಡಿಯಾ ಬಾರ್ ಕೌನ್ಸಿಲ್ ವೈಸ್ ಚೇರ್‌ಮೆನ್, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಆಡಳಿತ ಮಂಡಳಿ ನಿರ್ದೇಶಕರಾಗಿ, ಕಳೆದ ೬ ವರ್ಷಗಳ ಕಾಲ ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇದರೊಂದಿಗೆ ಚಿಕ್ಕಮಗಳೂರು ಜಿಲ್ಲಾ ಕೋರ್ಟ್ ಹಾಗೂ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿಯೂ ವೃತ್ತಿ ನಡೆಸಿದ ಅನುಭವ ಹೊಂದಿದ್ದಾರೆ.