ಕರಿಕೆ, ಮೇ ೨೯: ಇಲ್ಲಿಗೆ ಸಮೀಪದ ಚೆತ್ತುಕಾಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆ ಕೆಲದಿನಗಳ ಹಿಂದೆ ಸುರಿದ ಮಳೆಗೆ ಕುಸಿತವಾಗಿ ಸಂಪರ್ಕ ಕಡಿತಕೊಳ್ಳುವ ಆತಂಕವಿರುವ ಬಗ್ಗೆ ‘ಶಕ್ತಿ' ವರದಿ ಪ್ರಕಟಿಸಿತ್ತು. ವರದಿ ಗಮನಿಸಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಜಿ.ಪಂ. ಕಿರಿಯ ಅಭಿಯಂತರರನ್ನು ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೊಡಗು ಜಿ.ಪಂ. ಇಂಜಿನಿಯರಿAಗ್‌ನ ಮಡಿಕೇರಿ ವಿಭಾಗದ ಕಿರಿಯ ಅಭಿಯಂತರ ಮಹದೇವ್ ತುರ್ತಾಗಿ ಬಂಡೆಕಲ್ಲುಗಳನ್ನು ಜೋಡಿಸಿ ಮರಳಿನ ಮೂಟೆಗಳಿಂದ ತಾತ್ಕಾಲಿಕವಾಗಿ ಮುಂದಿನ ಅನಾಹುತವನ್ನು ತಡೆಯಲು ಕ್ರಮವಹಿಸಲಾಗುವುದು. ಸ್ಥಳೀಯ ಗುತ್ತಿಗೆದಾರರಿಗೆ ತುರ್ತು ಕಾಮಗಾರಿ ನಿರ್ವಹಣೆ ಮಾಡಲು ಸೂಚಿಸಿದ್ದು, ಮಳೆಗಾಲ ಕಳೆದ ನಂತರ ಮಳೆಹಾನಿ ಪರಿಹಾರದಡಿಯಲ್ಲಿ ಕಾಮಗಾರಿಗೆ ಅನುಮೋದನೆ ಪಡೆದು ಹೊಸದಾಗಿ ಸೇತುವೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದೆಂದರು. ಈ ಸಂದರ್ಭ ಪಂಚಾಯಿತಿ ಸದಸ್ಯ ನಾರಾಯಣ ಕೆ.ಎ. ಇದ್ದರು.