ವರದಿ ಚಂದ್ರಮೋಹನ್

ಕುಶಾಲನಗರ, ಮೇ ೨೯: ಜಿಲ್ಲೆಯ ಪ್ರತಿಷ್ಠಿತ ಉನ್ನತ ಶಿಕ್ಷಣ ಕೇಂದ್ರ ಕೊಡಗು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಡಕುಗಳು ಕಂಡು ಬರುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಒಟ್ಟು ನೂರು ಎಕರೆ ಭೂಮಿ ಪ್ರದೇಶವನ್ನು ಹೊಂದಿರುವ ಕೊಡಗು ವಿಶ್ವವಿದ್ಯಾಲಯ ಆವರಣದಲ್ಲಿ ಖಾಸಗಿ ವ್ಯಕ್ತಿಗಳಿಗೆ ಅಧಿಕಾರಿಗಳು ಭೂಮಿ ಹಂಚಿರುವುದು ಇದೀಗ ಬೆಳಕಿಗೆ ಬಂದಿದೆ. ೧೦೦ ಎಕರೆಯಲ್ಲಿ ಈಗಾಗಲೇ ೭೦.೪೭ ಎಕರೆ ವಿಶ್ವವಿದ್ಯಾಲಯದ ಹೆಸರಿಗೆ ಆರ್‌ಟಿಸಿ ಆಗಿದ್ದು, ಉಳಿದಂತೆ ಬಹುತೇಕ ಜಾಗ ಸರಕಾರದ ಹೆಸರಿನಲ್ಲಿದೆ. ವಿಶೇಷವೆಂದರೆ, ವಿಶ್ವವಿದ್ಯಾಲಯಕ್ಕೆ ತೆರಳುವ ಮುಖ್ಯ ಗೇಟ್ ಬಳಿಯಲ್ಲಿಯೇ ಸರ್ವೆ ನಂಬರ್ ೨೧/೧, ೨೧/೨ ರಲ್ಲಿ ಐದು ಎಕರೆ ವ್ಯಾಪ್ತಿಯ ಜಮೀನನ್ನು ನಿವೃತ್ತ ಸೈನಿಕರೊಬ್ಬರಿಗೆ ಹಂಚಿರುವುದು ಈ ಬೆಳವಣಿಗೆಯಿಂದ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ತೊಡಕುಂಟು ಮಾಡಿದೆ. ಅಲ್ಲದೆ ಮೂರು ಎಕರೆ ಜಾಗವನ್ನು ಅಕ್ರಮ ಸಕ್ರಮ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಕಂದಾಯ ಅಧಿಕಾರಿಗಳು ಹಂಚಿ ದಾಖಲೆ ಮಾಡಿಕೊಟ್ಟಿರುವುದು ಕಂಡು ಬಂದಿದೆ.

೨೦೧೪-೧೫ರ ಅವಧಿಯಲ್ಲಿ ಕಂದಾಯ ಅಧಿಕಾರಿಗಳು ಈ ಕೆಲಸ ಮಾಡಿರುವ ಬಗ್ಗೆ ದಾಖಲೆಗಳು ಗೋಚರಿಸುತ್ತಿದೆ.

ಕಳೆದ ೧೪ ವರ್ಷಗಳ ಹಿಂದೆ ಆರಂಭಗೊAಡ ಅಳುವಾರ ಸ್ನಾತಕೋತ್ತರ ಕೇಂದ್ರದ ಬಗ್ಗೆ ಎಲ್ಲಾ ಮಾಹಿತಿ ತಿಳಿದಿದ್ದರೂ ಸಂಬAಧಿಸಿದ ಅಧಿಕಾರಿಗಳು ಇಂತಹ ಹೊಣೆಗೇಡಿತನ ಕೆಲಸ ಮಾಡಿದ್ದು ಸರಿಯಲ್ಲ ಎಂದು ಸ್ಥಳೀಯರು ಖಂಡನೆ ವ್ಯಕ್ತಪಡಿಸಿದ್ದಾರೆ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಸಂದರ್ಭ ಅಳುವಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ನಾತಕೋತ್ತರ ಕೇಂದ್ರ ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿದ್ದು, ಈ ಬಗ್ಗೆ ಸಂಬAಧಿಸಿದವರು ಸಂಪೂರ್ಣ ಮೌನವಹಿಸಿರುವುದು ಕೂಡ ಸಂಶಯಕ್ಕೆ ಎಡೆ ಮಾಡಿದೆ.

ಇದೀಗ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಈ ಬಗ್ಗೆ ಗಮನಿಸಿ ಸಂಬAಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಂಡು ಒಟ್ಟು ನೂರು ಎಕರೆ ಪ್ರದೇಶವನ್ನು ಕೊಡಗು ವಿಶ್ವವಿದ್ಯಾಲಯದ ಹೆಸರಿನಲ್ಲಿ ದಾಖಲೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಎರಡು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಆವರಣದಲ್ಲಿ ಸುಮಾರು ೭೦ ಎಕರೆ ಪ್ರದೇಶವನ್ನು ಶುಂಠಿ ಬೆಳೆಯಲು ಖಾಸಗಿ ವ್ಯಕ್ತಿಯೊಬ್ಬರಿಗೆ ನೀಡುವ ಹುನ್ನಾರ ನಡೆದಿದ್ದು, ಇದನ್ನು ಅರಿತ ಮಂಗಳೂರು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಮತ್ತು ಕೆಲವು ಸ್ಥಳೀಯರು ಅವಕಾಶ ನೀಡದಿದ್ದ ಕಾರಣ ವಿವಿಯ ಜಾಗ ಖಾಸಗಿ ವ್ಯಕ್ತಿಗಳ ವಶವಾಗುತ್ತಿದ್ದುದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಾಗಕ್ಕೆ ಸಂಬAಧಿಸಿದAತೆ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಚುನಾವಣಾ ನೀತಿ ಸಂಹಿತೆ ತೆರವಾದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ.

ಹಿಂದೆ ಗುಡ್ಡೆಹೊಸೂರು ಗ್ರಾಮದ ಬಸವನಹಳ್ಳಿ ಬಳಿ ಮಾಜಿ ಸೈನಿಕ ಸುಬ್ಬಯ್ಯ ಎಂಬವರಿಗೆ ಜಾಗ ಮಂಜೂರಾಗಿತ್ತು. ಅಲ್ಲಿಯ ಗ್ರಾಮಸ್ಥರ ವಿರೋಧದಿಂದ ಅವರಿಗೆ ಬದಲಿ ಜಾಗವನ್ನು ಅಳುವಾರದಲ್ಲಿ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಸರಕಾರಿ ಜಾಗವನ್ನು ಕಂದಾಯ ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗಿದೆ.

ಕೊಡಗು ವಿಶ್ವವಿದ್ಯಾಲಯ ಆರಂಭಗೊAಡು ಇದೀಗ ಒಂದು ವರ್ಷ ಸಂದಿದ್ದು ಹಲವು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಅತ್ಯುತ್ತಮ ಮಟ್ಟದಲ್ಲಿ ಶೈಕ್ಷಣಿಕ ಪ್ರಗತಿ ಕಾಣುತ್ತಿರುವುದನ್ನು ಗಮನಿಸಬಹುದು.

ಇನ್ನೊಂದೆಡೆ ಮಂಗಳೂರು ವಿಶ್ವವಿದ್ಯಾಲಯದಿಂದ ಪ್ರತ್ಯೇಕವಾಗಿ ಕೊಡಗು ವಿಶ್ವವಿದ್ಯಾಲಯವಾದ ಹಿನ್ನೆಲೆಯಲ್ಲಿ

(ಮೊದಲ ಪುಟದಿಂದ) ಪ್ರಸಕ್ತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟ ಬೋಧಕ ಬೋಧಕೇತರ ಸಿಬ್ಬಂದಿಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ.

೨೦೨೩ ರ ಹಿಂದೆ ೯ ವರ್ಷಗಳ ಕಾಲ ಸ್ನಾತಕೋತ್ತರ ಕೇಂದ್ರದ ಆಡಳಿತ ವ್ಯವಸ್ಥೆ ಸಂಪೂರ್ಣ ಮಂಗಳೂರು ವಿವಿ ಅಧೀನದಲ್ಲಿತ್ತು.

ಬೋಧಕ ಬೋಧಕೇತರರಿಗೆ ಈ ಅವಧಿಯಲ್ಲಿ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳು ಮಂಗಳೂರು ವಿವಿ ಹಿಡಿತದಲ್ಲಿದೆ. ಅದನ್ನು ಸಂಪೂರ್ಣವಾಗಿ ಕೊಡಗು ವಿವಿ ಆಡಳಿತ ವ್ಯವಸ್ಥೆಗೆ ಹಸ್ತಾಂತರಿಸಬೇಕಾಗಿದೆ. ಈ ನಡುವೆ ಕೆಲವು ಕಾಣದ ಕೈಗಳು ಕೊಡಗು ವಿವಿಯನ್ನು ಶಾಶ್ವತವಾಗಿ ಮುಚ್ಚುವ ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿವೆ.

ಕಳೆದ ಹಲವು ದಶಕಗಳ ಕನಸಾಗಿದ್ದ ಕೊಡಗು ವಿವಿ ಇದೀಗ ತನ್ನ ಅಭಿವೃದ್ಧಿಯನ್ನು ಕಾಣುವ ಹಂತದಲ್ಲಿಯೇ ಇಂತಹ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೂ ಇದಕ್ಕೆ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಳ್ಳದೆ ಪ್ರಸಕ್ತ ಇರುವ ಕೊಡಗು ವಿವಿ ಕುಲಪತಿಗಳು, ಕುಲಸಚಿವರು ಬೋಧಕ ಬೋಧಕೇತರ ತಂಡ ಸರಕಾರದ ಅನುದಾನಕ್ಕೆ ಕಾಯದೆ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿರುವುದು ಶ್ಲಾಘನೀಯ ಅಂಶ. ಪ್ರಸಕ್ತ ವಿವಿ ಆವರಣದಲ್ಲಿ ದ್ವಿಪಥ ರಸ್ತೆ ಕಾಮಗಾರಿ ಭರದಿಂದ ನಡೆಯುತ್ತಿರುವ ದೃಶ್ಯ ಗೋಚರಿಸಿದೆ.

ಮೇಲಿನ ಗೊಂದಲಗಳಿAದ ಆವರಣದಲ್ಲಿ ಆಗಬೇಕಾದ ರಸ್ತೆ ಕೆಲಸ, ಅಭಿವೃದ್ಧಿ ಯೋಜನೆಗಳು ಮಾಸ್ಟರ್ ಪ್ಲಾನ್ ರೀತಿಯಲ್ಲಿ ನಿರ್ಮಾಣವಾಗಲು ತೊಡಕು ಉಂಟಾಗಿದೆ. ಕೊಡಗು ವಿವಿಯಲ್ಲಿ ಪ್ರಸಕ್ತ ಇರುವ ಶೈಕ್ಷಣಿಕ ವಿಭಾಗಗಳನ್ನು ಹೆಚ್ಚುವರಿ ಮಾಡುವ ನಿಟ್ಟಿನಲ್ಲಿ ಕೂಡ ಚಿಂತನೆ ಹರಿದಿದೆ ಎಂದು ವಿವಿ ಆಡಳಿತ ಮಂಡಳಿ ತಿಳಿಸಿದೆ.

ಪ್ರಸಕ್ತ ಕೊಡಗು ವಿಶ್ವವಿದ್ಯಾಲಯಕ್ಕೆ ಎದುರಾಗಿರುವ ಕಂಟಕಗಳನ್ನು ತಕ್ಷಣ ಪರಿಹರಿಸುವಲ್ಲಿ ಸ್ಥಳೀಯರು ಕೂಡ ಗಮನಹರಿಸಿ ಕೈಜೋಡಿಸಬೇಕಾಗಿದೆ.