ಮಡಿಕೇರಿ, ಮೇ ೨೯: ಅತೀ ಹೆಚ್ಚು ಸುಶಿಕ್ಷಿತರನ್ನು ಹೊಂದಿರುವ ನೈಋತ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸಂಖ್ಯೆ ಹೆಚ್ಚು ಮಾಡುವುದರ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವ ತುಡಿತ ಹೊಂದಿದ್ದೇನೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ತಮ್ಮ ಮನದಾಳದ ಅಭಿಪ್ರಾಯ ವ್ಯಕ್ತಪಡಿಸಿದರು.
‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿರುವ ಬಿಜೆಪಿ ಸರಕಾರ ನಿರುದ್ಯೋಗಿಗಳಿಗೆ ಸ್ವಾವಲಂಬಿ ಬದುಕು ರೂಪಿಸುವ ಸಲುವಾಗಿ ಮುದ್ರ, ವಿಶ್ವಕರ್ಮ, ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾö್ಯಂಡ್ ಅಪ್ ಇಂಡಿಯಾ ಸೇರಿದಂತೆ ನಾನಾ ಕಾರ್ಯಕ್ರಮ ರೂಪಿಸಿದೆ. ಇದರೊಂದಿಗೆ ಜ್ಞಾನ, ಅನುಭವವನ್ನು ಯುವಜನರಲ್ಲಿ ಮೂಡಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ ತರಬೇತಿ ಕೇಂದ್ರಗಳನ್ನು ಆರಂಭಿಸಿದೆ. ಈ ಮೂಲಕ ವಿವಿಧ ವಲಯಗಳಲ್ಲಿ ನೈಪುಣ್ಯತೆ ಸಾಧಿಸಲು ಅವಕಾಶವಿದೆ. ಈ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ತರಬೇತಿಗೆ ಅವಕಾಶ ದೊರೆತರೆ ನಿರುದ್ಯೋಗಿಗಳು ಬದುಕು ಕಟ್ಟಿಕೊಳ್ಳಲು ಸುಲಭವಾಗುತ್ತದೆ. ತಾನು ಗೆದ್ದ ನಂತರ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ತಮ್ಮ ಗುರಿಯ ಬಗ್ಗೆ ವಿವರಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ
ವಿಶೇಷವಾಗಿ ಕೊಡಗಿನಲ್ಲಿ ಆರೋಗ್ಯ ವಲಯದಲ್ಲಿ ಭಾರಿ ಬದಲಾವಣೆಯಾಗಬೇಕಾಗಿದೆ. ಅಗತ್ಯ ಸೇವೆಗಳು ದೊರೆಯಲು ಅತ್ಯಾಧುನಿಕ ಯಂತ್ರೋಪಕರಣ, ನುರಿತ ತಜ್ಞ ವೈದ್ಯರ ಅವಶ್ಯಕತೆ ಇದೆ. ತಾನು ವೈದ್ಯನೇ ಆಗಿರುವ ಕಾರಣ ಈ ಅಂಶದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದೇನೆ ಎಂದರು.
ಸರಕಾರಿ-ಖಾಸಗಿ ಸಹಭಾಗಿತ್ವದ ಮೂಲಕ ಜಿಲ್ಲೆಯಲ್ಲಿ ಪರಿಪೂರ್ಣ ಸೇವೆಗಳನ್ನು ಒಳಗೊಂಡ ಆರೋಗ್ಯ ಕೇಂದ್ರಗಳನ್ನು ಸೃಷ್ಟಿಸುವ ಇಂಗಿತ ವ್ಯಕ್ತಪಡಿಸಿದ ಧನಂಜಯ ಅವರು, ಸರಕಾರದ ಮೂಲಕ ಆಸ್ಪತ್ರೆ, ಸಿಬ್ಬಂದಿ ವೇತನ ನೀಡಿದರೆ ಖಾಸಗಿ ವೈದ್ಯರು, ತಜ್ಞರು ಹಾಗೂ ಸಿಬ್ಬಂದಿಯನ್ನು ಬಳಸಿಕೊಂಡು ಎಲ್ಲಾ ಸೇವೆ ಒಳಗೊಂಡ ಆರೋಗ್ಯ ಕೇಂದ್ರ ಆರಂಭಿಸಬಹುದು. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ಭರಿಸಬೇಕಾದ ಹಣದ ಪೈಕಿ ಶೇ. ೩೦ ರಷ್ಟು ಮಾತ್ರ ಸಂದಾಯ ಮಾಡಿ ಸ್ಥಳೀಯವಾಗಿ ಉತ್ತಮ ಚಿಕಿತ್ಸೆ ಪಡೆಯುವ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಿ ಅನುಷ್ಠಾನ ಮಾಡುವ ಭರವಸೆ ನೀಡಿದರು.
ಟೂರಿಸಂ ಕಾಲೇಜು - ಸೇನಾ ತರಬೇತಿ ಸಂಸ್ಥೆಗಳು
ಕೊಡಗಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಸಾಧಿಸಿದ್ದು, ಸ್ಥಳೀಯವಾಗಿ ‘ಟೂರಿಸಂ’ಗೆ ಪೂರಕವಾದ ಸಂಪನ್ಮೂಲ ವ್ಯಕ್ತಿಗಳ ಅವಶ್ಯಕತೆ ಇರುವ ಕಾರಣ ‘ಟೂರಿಸಂ ಕಾಲೇಜು’ ಅಗತ್ಯತೆ ಅನಿವಾರ್ಯವಾಗಿದೆ. ಪ್ರವಾಸೋದ್ಯಮದಡಿ ಕೇವಲ ಪ್ರವಾಸಿ ತಾಣ ವೀಕ್ಷಣೆಯೊಂದೆ ಬರುವುದಿಲ್ಲ. ಪ್ರವಾಸಿಗರು ಬರುವ ಕಾರಣಕ್ಕೆ ಸಣ್ಣ ಉದ್ಯಮ, ಹೊಟೇಲ್, ರೆಸಾರ್ಟ್, ಹೋಂಸ್ಟೇ, ಕರಕುಶಲ ವಸ್ತು ಮಾರಾಟಗಾರರು, ಬೀದಿಬದಿ ವ್ಯಾಪಾರಿಗಳು, ಚಾಲಕರು ಸೇರಿದಂತೆ ವಿವಿಧ ಮೂಲಗಳಲ್ಲಿ ಅನೇಕರು ಜೀವನ ಕಂಡುಕೊಳ್ಳುತ್ತಾರೆ. ಪ್ರತ್ಯೇಕ್ಷ-ಪರೋಕ್ಷವಾಗಿ ಎಲ್ಲಾ ವಲಯಕ್ಕೂ ಪ್ರವಾಸೋದ್ಯಮ ವರದಾನವಾಗಿದೆ ಎಂದು ಧನಂಜಯ ಅಭಿಪ್ರಾಯಿಸಿದರು.
ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿರುವ ಕೊಡಗು ಪ್ರವಾಸೋದ್ಯಮಕ್ಕೆ ಸ್ಥಳೀಯವಾಗಿ ಉದ್ಯೋಗಿಗಳ ಅವಶ್ಯಕತೆ ಕಂಡುಬAದಿದೆ. ಸೂಕ್ತ ತರಬೇತಿಯಿಂದ ಗೈಡ್‌ಗಳು ಸೃಷ್ಟಿಯಾಗುತ್ತಾರೆ. ಹೊಟೇಲ್ ಮ್ಯಾನೇಜ್‌ಮೆಂಟ್ ಕಲಿಕೆ ಸುಲಭವಾಗುತ್ತದೆ. ಇನ್ಫಾರ್ಮೆಷನ್ ಸೆಂಟರ್ ಸೇರಿದಂತೆ ಟೂರಿಸಂ ಬಳಸಿಕೊಂಡು ಮಾಡಬಹುದಾದ ದೊಡ್ಡ ಚಿಂತನೆಗಳು ತೆರೆದುಕೊಂಡು ಉದ್ಯೋಗಾವಕಾಶವೂ ದೊರೆಯುತ್ತದೆ. ಇವೆಲ್ಲಕ್ಕೂ ಕಲಿಕೆಯ ಅವಶ್ಯಕತೆ ಇರುವ ಕಾರಣಕ್ಕೆ ‘ಟೂರಿಸಂ ಕಾಲೇಜು’ ಚಿಂತನೆ ತನ್ನ ಮುಂದಿದೆ ಎಂದು ಧನಂಜಯ ಹೇಳಿದರು.
ಅದೇ ರೀತಿ ಕೊಡಗಿನಿಂದ ಸೇನೆಗೆ ಹೆಚ್ಚಿನ ಮಂದಿ ಸೇರ್ಪಡೆಯಾಗುತ್ತಿದ್ದು, ಸ್ಥಳೀಯವಾಗಿ ಸೇನಾ ತರಬೇತಿ ಸಂಸ್ಥೆಗಳ ಅವಶ್ಯಕತೆ ಇದ್ದು, ಅದನ್ನು ಸರಕಾರದ ಮಟ್ಟದಲ್ಲಿ ರೂಪಿಸುವ ಯೋಜನೆ ಇದೆ. ದೈಹಿಕ ಹಾಗೂ ಮಾನಸಿಕ ತರಬೇತಿ ಮೂಲಕ ಸೇನಾಕಾಂಕ್ಷಿಗೆ ಪೂರಕ ವಾತಾವರಣ ಸೃಷ್ಟಿಸಿದಂತಾಗುತ್ತದೆ ಎಂದರು.
ಕೇಂದ್ರ ಸರಕಾರದ ಯೋಜನೆಗಳಿಂದ ಉದ್ಯೋಗ ಆರಂಭಿಸುವ ದಿನ ೪೭ ದಿನದಿಂದ ೧೪ ದಿನಕ್ಕೆ ಇಳಿಕೆಯಾಗಿದೆ. ಇದರಿಂದ ವ್ಯಾಪಾರೋದ್ಯಮ ಚಟುವಟಿಕೆ ಪೂರ್ಣದಿಂದ ಕೂಡಿದ್ದು, ಅವುಗಳಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ತನ್ನಿಂದಾಗುತ್ತದೆ ಎಂದು ಇಂಗಿತ ವ್ಯಕ್ತಪಡಿಸಿದರು.
ಉದ್ಯೋಗಿಗಳಿಗೆ ಇ.ಎಸ್.ಐ. ಮೂಲಕ ಉಚಿತ ಆರೋಗ್ಯ ಸೇವೆ ಪಡೆಯಲು ರೂ. ೧೮ ಸಾವಿರ ವೇತನ ಮಿತಿ ಇದ್ದು, ಅದನ್ನು ರೂ. ೨೧ ಸಾವಿರಕ್ಕೆ ಏರಿಸುವ ಪ್ರಸ್ತಾಪವಿದೆ. ಈ ನಿಟ್ಟಿನಲ್ಲಿ ವೇತನದ ಮಿತಿ ಮತ್ತಷ್ಟು ಹೆಚ್ಚಿಸಿ ಖಾಸಗಿ ವಲಯದ ಸಿಬ್ಬಂದಿಗೆ ಉಚಿತ ಆರೋಗ್ಯ ಸೇವೆ ದೊರಕಿಸಿಕೊಡುವ ಕೆಲಸ ಮಾಡಲಾಗುವುದು. ಅದರೊಂದಿಗೆ ಸರಕಾರಿ ಉದ್ಯೋಗಿಗಳಿಗಿರುವ ಜ್ಯೋತಿ ಸಂಜೀವಿನಿ ಆರೋಗ್ಯ ಸೇವೆ ಅನುದಾನಿತ, ಅನುದಾನರಹಿತ ಶಿಕ್ಷಕರಿಗೂ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆದು ಸ್ಪಂದಿಸುವ ಕೆಲಸ ತನ್ನಿಂದಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯ ಅಪಪ್ರಚಾರ
ಶತ್ರುವಿನ ಕೊನೆ ಅಸ್ತç ಅಪಪ್ರಚಾರ. ಇದರ ಬಗ್ಗೆ ತಾನು ತಲೆಕೆಡಿಸಿಕೊಳ್ಳುವುದಿಲ್ಲ. ಪಕ್ಷ ಹಾಗೂ ಕಾರ್ಯಕರ್ತರು ತನ್ನ ಬೆಂಬಲಕ್ಕಿದ್ದು, ಪದವೀಧರರು ತನ್ನ ದೂರದೃಷ್ಟಿಯ ಬಗ್ಗೆ ಒಲವು ಹೊಂದಿದ್ದು, ಗೆದ್ದೇ ಗೆಲ್ಲುತ್ತೇನೆ ಎಂದರು.
ಶಿವಮೊಗ್ಗದಲ್ಲಿ ಹದಗೆಟ್ಟ ವಾತಾವರಣ ಸರಿಪಡಿಸಲು ‘ಶಾಂತಿಯ ನಡಿಗೆ’ ಕಾರ್ಯಕ್ರಮ ಮಾಡಿದ್ದೆ. ಅದರಲ್ಲಿ ಸಾಧು-ಸಂತರು ಭಾಗವಹಿಸಿದ್ದರು. ಇದೀಗ ಆ ವಿಚಾರವನ್ನು ಎದುರಾಳಿ ಮುನ್ನೆಲೆಗೆ ತಂದು ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ಸರಿಯಲ್ಲ ಎಂದು ಟೀಕಿಸಿದರು.
ಕಿರುಪರಿಚಯ
ಮೂಲತಃ ಶಿವಮೊಗ್ಗ ಜಿಲ್ಲೆಯ ಗೊಪ್ಪೇನಹಳ್ಳಿಯ ನಿವಾಸಿಯಾಗಿರುವ ಧನಂಜಯ ಸರ್ಜಿ ಅವರು ವೈದ್ಯಕೀಯ ಪದವಿ ಪಡೆದು ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸಿ ಸರ್ಜಿ ಇನ್ಸಿ÷್ಟಟ್ಯೂಟ್ ಆಫ್ ಹೆಲ್ಟ್ ಸೈನ್ ಹಾಗೂ ಹಾಸ್ಪಿಟಲ್ ಸ್ಥಾಪಿಸಿ ಶಿವಮೊಗ್ಗದಲ್ಲಿ ಆರೋಗ್ಯ ಸೇವೆ ನೀಡುತ್ತಿದ್ದಾರೆ.
ಸರ್ಜಿ ಫೌಂಡೇಶನ್ ಮೂಲಕ ಹಲವು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು, ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಅಸ್ವಸ್ಥಗೊಂಡಿದ್ದ ಮಕ್ಕಳು ಸೇರಿದಂತೆ ರೋಗಿಗಳಿಗೆ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸುವ ಕೆಲಸ ಮಾಡಿದ್ದರು. ಅಲ್ಲದೆ, ಹಲವಷ್ಟು ವೈದ್ಯಕೀಯ ಶಿಬಿರ, ಕೋವಿಡ್ ಪರಿಸ್ಥಿತಿಯಲ್ಲಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು.