ಪೊನ್ನಂಪೇಟೆ, ಮೇ ೨೯: ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದ ಶ್ರೀ ಭದ್ರಕಾಳಿ ದೇವರ ಬೇಡು ಹಬ್ಬವು ಶ್ರದ್ಧಾಭಕ್ತಿಯಿಂದ ನಡೆಯಿತು. ಮೂರು ವರ್ಷಗಳಿಗೊಮ್ಮೆ ಶ್ರೀ ಭದ್ರಕಾಳಿ ದೇವರ ಬೇಡು ಹಬ್ಬವನ್ನು ಮೇಚಮಾಡ, ಪೊನ್ನಿಮಾಡ, ಅರಮಣಮಾಡ, ಪುಳ್ಳಂಗಡ ಕುಟುಂಬಸ್ಥರ ಮುಂದಾಳತ್ವದಲ್ಲಿ ಎರಡು ದಿನಗಳ ಕಾಲ ವಿಜೃಂಭಣೆ ಯಿಂದ ಆಚರಿಸಲಾಯಿತು. ಮೊದಲನೇ ದಿನ ದೇಹಕ್ಕೆ ವಿವಿಧ ರೀತಿಯ ಬಣ್ಣಗಳನ್ನು ಬಳಿದುಕೊಂಡು ಬಗೆ ಬಗೆಯ ವೇಷಧರಿಸಿದ ಗ್ರಾಮಸ್ಥರು ಅಂಬಲದಲ್ಲಿ ಸೇರಿದರು. ಬಳಿಕ ವಾಡಿಕೆಯಂತೆ ವೇಷಧಾರಿಗಳ ಒಂದು ತಂಡ ಶ್ರೀ ದುರ್ಗಿ ಪರಮೇಶ್ವರಿ ದೇವರ ಸಮ್ಮುಖದಲ್ಲಿ ಮೇಚಮಾಡ ಕುಟುಂಬಸ್ಥರ ಮನೆಗೂ, ಮತ್ತೊಂದು ತಂಡ ಶ್ರೀ ಅಯ್ಯಪ್ಪ ದೇವರ ಸಮ್ಮುಖದಲ್ಲಿ ಅರಮಣಮಾಡ ಕುಟುಂಬಸ್ಥರ ಮನೆಗೂ ಮೆರವಣಿಗೆ ಯೊಂದಿಗೆ ತೆರಳಿದರು. ಮರುದಿನ ಬೆಳಿಗ್ಗಿನವರೆಗೂ ಗ್ರಾಮದ ಪ್ರತಿಯೊಂದು ಮನೆಗೂ ಸಾಗಿದ ತಂಡಗಳು ಮತ್ತೆ ಅಂಬಲದಲ್ಲಿ ಸೇರಿದರು. ಮೇಚಮಾಡ ಕುಟುಂಬಸ್ಥರ ಮನೆಯಿಂದ ಒಂದು ಕುದುರೆ ಹಾಗೂ ಅರಮಣಮಾಡ ಕುಟುಂಬಸ್ಥರ ಮನೆಯಿಂದ ಮತ್ತೊಂದು ಕುದುರೆ ಇಳಿಸಿ, ಬೆಸಗೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಬೇಟೆಕಾರ ಅಯ್ಯಪ್ಪ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆಯ ಮೂಲಕ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕುಂಬು ಎಂಬ ಸ್ಥಳದಲ್ಲಿ ಕುದುರೆಯನ್ನು ಕಳಚಲಾಯಿತು. ಶುಕ್ರವಾರ ಮಧ್ಯಾಹ್ನದ ಬಳಿಕ ಊರಿನ ತಕ್ಕ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಸೇರಿ ಪೊನ್ನಿಮಾಡ ಕುಟುಂಬಸ್ಥರ ಮನೆಯಲ್ಲಿ ಮೊಗವನ್ನು ಅಲಂಕಾರ ಮಾಡಿ ಪಣಿಕರು ಅಂಬಲಕ್ಕೆ ತಂದು ಅರಮಣಮಾಡ ಕುಟುಂಬಸ್ಥರ ಮನೆಯಿಂದ ಮತ್ತೊಂದು ಮೊಗ ತಂದು ಮತ್ತೆ ದೇವರ ಅಂಬಲದಲ್ಲಿ ಕುಣಿದು ಕುಪ್ಪಳಿಸಿ, ದೇವರಿಗೆ ಭಕ್ತಾದಿಗಳು ಹರಕೆ ಮತ್ತು ಕಾಣಿಕೆಗಳನ್ನು ಒಪ್ಪಿಸಿ, ದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸಿದ ಬಳಿಕ ಬೇಡು ಹಬ್ಬಕ್ಕೆ ತೆರೆ ಬಿದ್ದಿತು.
ಈ ಸಂದರ್ಭ ಊರು ತಕ್ಕರಾದ ಮೇಚಮಾಡ ಪೊನ್ನಪ್ಪ ಅವರು ಮಾತನಾಡಿ, ಮೂರು ವರ್ಷಗಳಿಗೊಮ್ಮೆ ನಡೆಯುವ ಬೆಸಗೂರು ಗ್ರಾಮದ ಶ್ರೀ ಭದ್ರಕಾಳಿ ದೇವರ ಬೇಡು ಹಬ್ಬವು ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಮೇಚಮಾಡ, ಪೊನ್ನಿಮಾಡ, ಅರಮಣಮಾಡ, ಪುಳ್ಳಂಗಡ ಕುಟುಂಬಸ್ಥರ ಮುಂದಾಳತ್ವದಲ್ಲಿ ನಡೆಯಿತು. ಹಬ್ಬದ ಆರಂಭಕ್ಕೆ ಎಂಟು ದಿನ ಮುಂಚಿತವಾಗಿ ಮಣ್ಣಿನಿಂದ ಮಾಡಿದ ನಾಯಿ ಬೇಟೆಗಾರ ಅಯ್ಯಪ್ಪನ ಮೂರ್ತಿಗಳನ್ನು ಅಯ್ಯಪ್ಪನ ದೇವಸ್ಥಾನದಲ್ಲಿ ಇಟ್ಟು ಪೂಜೆ ಮಾಡಿ ಹಬ್ಬದ ಕಟ್ಟುಪಾಡು ಗಳನ್ನು ಹಾಕಲಾಗುತ್ತದೆ. ಅರಮಣಮಾಡ ಮನೆಯಿಂದ ಮೊಗ ಹಾಗೂ ಮೇಚಮಾಡ ಮನೆಯಿಂದ ಕುದುರೆಯೊಂದಿಗೆ ಅಂಬಲದಲ್ಲಿ ಸೇರಿ ಕುಣಿದು ಕುದುರೆಯನ್ನು ಕಳಚುತ್ತಾರೆ. ಮರುದಿನ ಊರಿನ ತಕ್ಕ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಸೇರಿ ಮೊಗವನ್ನು ಅರಮಣಮಾಡ ಮನೆಯಲ್ಲಿ ಇಟ್ಟು ಕುಣಿದು ಕುಪ್ಪಳಿಸಿ ಭದ್ರಕಾಳಿ ದೇವಾಲಯ ದಲ್ಲಿ ಪೂಜೆ ಮಾಡಿ ದೇವಿಗೆ ಹರಕೆ ಒಪ್ಪಿಸುವುದರ ಮೂಲಕ ಹಬ್ಬಕ್ಕೆ ತೆರೆಬೀಳುತ್ತದೆ ಎಂದು ಮಾಹಿತಿ ನೀಡಿದರು.