ವೀರಾಜಪೇಟೆ, ಮೇ ೨೯: ಬೇಸಿಗೆ ಶಿಬಿರಗಳ ಆಯೋಜನೆ ಯಿಂದ ಮಕ್ಕಳ ಮನಸ್ಸನ್ನು ಬದಲಾಯಿಸಬಹುದು ಎಂದು ವೀರಾಜಪೇಟೆ ರೋಟರಿ ಶಾಲೆಯ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಅವರು ಅಭಿಪ್ರಾಯಪಟ್ಟರು.

ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ರೋಟರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಒಂದು ತಿಂಗಳ ಅವಧಿಯ ‘ಕಲಾರ್ಣವಾ’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ನಂತರ ಬೇಸಿಗೆ ಶಿಬಿರಗಳನ್ನು ಆಯೋಜಿಸುವ ಪರಿಪಾಠ ವಿವಿಧಡೆ ನಡೆಯುತ್ತಾ ಬಂದಿದೆ. ಹಾಕಿ, ಕ್ರಿಕೆಟ್ ಸೇರಿದಂತೆ ಕ್ರೀಡಾ ಹಾಗೂ ವೃತ್ತಿಪರ ಚಟುವಟಿಕೆ ಗಳಲ್ಲಿ ಮಕ್ಕಳನ್ನು ತೊಡಗಿಸಿ ಕೊಳ್ಳುವುದರಿಂದ ಮಕ್ಕಳಿಂದ ಬದಲಾವಣೆಗಳನ್ನು ನಿರೀಕ್ಷಿಸ ಬಹುದು. ಪುಟ್ಟ ಮಕ್ಕಳ ಭವಿಷ್ಯವನ್ನು ರೂಪಿಸಲು ಶಿಬಿರಗಳು ಅಗತ್ಯ.

ಸಾಹಿತಿ ರಜಿತ ಕಾರ್ಯಪ್ಪ ಮಾತನಾಡಿ, ಮಕ್ಕಳು ಮೊಬೈಲ್ ದಾಸರಾಗುತ್ತಿದ್ದು, ತಂಟೆ ಮಾಡುವ ಮಕ್ಕಳನ್ನು ಸುಮ್ಮನಾಗಿರಿಸಲು, ಅಳುವ ಮಗುವನ್ನು ಸಮಾಧಾನ ಗೊಳಿಸಲು ಪೋಷಕರೇ ಇಂದು ಮಕ್ಕಳ ಕೈಗೆ ಮೊಬೈಲ್ ಅನ್ನು ಕೊಡುವುದು ಆತಂಕ ಮೂಡಿಸಿದೆ. ಪರೀಕ್ಷೆಗಳು ಕಳೆದ ನಂತರ ಮಕ್ಕಳು ಸಮಯವನ್ನು ವ್ಯರ್ಥ ಮಾಡುವ ಬದಲು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಹವ್ಯಾಸಗಳನ್ನು ವೃದ್ಧಿಸಿಕೊಳ್ಳಬಹುದು ಎಂದರು. ಶಿಬಿರದ ಆಯೋಜಕರು, ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ಸಂಸ್ಥಾಪಕಿ ವಿದುಷಿ ಹೇಮಾವತಿ ಕಾಂತರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನೃತ್ಯ ತರಬೇತುದಾರರಾದ ಕಾವ್ಯಶ್ರೀ ಕಾಂತರಾಜ್, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಕೌಶಿ ಕಾವೇರಮ್ಮ, ದೃಶ್ಯ, ಧನ್ಯಶ್ರೀ, ಬಿಯಾಂಕಾ, ತಷ್ಮ ತಂಗಮ್ಮ, ಗಹನ, ಶ್ರೇಯ, ರೋಹನ್ ಸೇರಿದಂತೆ ಶಿಬಿರಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ೭೦ ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿ ಗಳು ಶಿಬಿರದಲ್ಲಿ ಪಾಲ್ಗೊಂಡು ವಿವಿಧ ತರಬೇತಿಯನ್ನು ಪಡೆದರು.