ವೀರಾಜಪೇಟೆ, ಮೇ ೩೦: ಶ್ರೀ ಬಸವಣ್ಣನವರ ತತ್ವ ಆಚರಣೆಯಿಂದ ಜಗತ್ತಿಗೆ ಉತ್ತಮ ಸಂದೇಶವಾಗಲಿದ್ದು ಅವರ ವಚನಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವಂತಾಗಬೇಕು ಎಂದು ವೀರಶೈವ ಸಮಾಜದ ಗೌರವ ಅಧ್ಯಕ್ಷ ಅರಮೇರಿ ಕಳಂಚೇರಿ ಶ್ರೀ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಬಸವ ಜಯಂತಿ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ಶ್ರೀ ಮಠದ ಎಸ್.ಎಂ.ಎಸ್. ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಸವಣ್ಣನವರ ತತ್ವದಂತೆ ಯಾರನ್ನು ದ್ವೇಷ ಮಾಡದೇ ಎಲ್ಲರನ್ನು ನನ್ನವರು ಎಂಬ ಭಾವನೆಯಿಂದ ಪ್ರತಿಯೊಬ್ಬರು ಬದುಕು ನಡೆಸುವುದು ಉತ್ತಮ ಎಂದು ಸ್ವಾಮೀಜಿ ನುಡಿದರು.
ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಹೆಚ್.ವಿ. ಶಿವಪ್ಪ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸಭೆಯನ್ನುದ್ದೇಶಿಸಿ ಬಸವಣ್ಣನವರ ವಚನಗಳನ್ನು ಎಲ್ಲರು ಪಾಲಿಸುವಂತೆ ಕರೆ ನೀಡಿದÀರು. ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕಿನ ಸಂಘಟನೆಗಳ ಆಶ್ರಯದಲ್ಲಿ ಪ್ರತಿವರ್ಷವೂ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದ್ದು ಸಮಾಜ ಬಾಂಧವರು ಒಗ್ಗಟ್ಟಿನಿಂದ ಸಹಕಾರ ನೀಡುತ್ತಿದ್ದಾರೆ. ವರ್ಷಂಪ್ರತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಿಕೊಂಡು ಬರುತ್ತಿದ್ದು, ಪ್ರತಿಯೊಬ್ಬರೂ ಹಿರಿಯರು ಮತ್ತು ಗುರು ಹಿರಿಯರಿಗೆ ಗೌರವ ನೀಡುವಂತಾಗಬೇಕು. ಸದಸ್ಯರು ಸಂಘಟನೆಯ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದರು. ಸಮಾಜದ ತಾಲೂಕು ಘಟಕದ ಅಧ್ಯಕ್ಷ ಎನ್.ಎಂ. ರಾಜೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜ ಬಾಂಧವರು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಸಮಾಜದ ಪ್ರತಿಯೊಬ್ಬರು ಸದಸ್ಯತ್ವ ಪಡೆದುಕೊಳ್ಳುವಂತಾಗಬೇಕು. ಮುಂದಿನ ವರ್ಷ ದತ್ತಿನಿಧಿ ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದರು
ವೇದಿಕೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜಿಲ್ಲಾ ಅಧ್ಯಕ್ಷ ಶಿವಪ್ಪ, ಜಿಲ್ಲಾ ಉಪಾಧ್ಯಕ್ಷ ಎಸ್.ಎಸ್. ಸುರೇಶ್ ಮತ್ತು ಅನು ಚಂದ್ರಶೇಖರ್, ತಾಲೂಕು ಘಟಕದ ಮಾಜಿ ಉಪಾಧ್ಯಕ್ಷ ಎಸ್.ಜಿ. ಮರಿಸ್ವಾಮಿ, ತಾಲೂಕು ಮಾಜಿ ಅಧ್ಯಕ್ಷ ಕೆ.ಎನ್. ಸಂದೀಪ್, ಮಾಜಿ ಖಜಾಂಚಿ ರಾಜೇಂದ್ರ ಪ್ರಸಾದ್, ಮಾಜಿ ಕಾರ್ಯದರ್ಶಿ ಕೆ.ಎಂ. ವಿಶ್ವನಾಥ್, ಮಹಿಳಾ ಘಟಕದ ಚೈತ್ರ ರಾಜೇಶ್ ಹಾಗೂ ಸೇವೆ ಸಲ್ಲಿಸಿದ ಮಾಜಿ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಮೃತಪಟ್ಟವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು, ವೇದಿಕೆಯಲ್ಲಿ ತಾಲೂಕು ಘಟಕದ ಉಪಾಧ್ಯಕ್ಷ ಶ್ರೀಕಂಠಪ್ಪ, ಕಾರ್ಯದರ್ಶಿ ಎಸ್.ವಿ. ಚಂದ್ರಶೇಖರ್, ಖಜಾಂಚಿ ಡಿ.ಎಸ್. ಲೋಕೇಶ್, ಹೆಚ್.ಆರ್. ನಳಿನಿ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.