ಮಡಿಕೇರಿ, ಮೇ ೩೧: ರಾಜ್ಯ ಸರಕಾರ ರೈತರ ಸ್ಥಿತಿಗತಿಗಳನ್ನು ಅರಿಯದೆ ಏಕಾಏಕಿ ವಿವಿಧ ಕೃಷಿ ಬೆಳೆಗಳ ಬಿತ್ತನೆ ಬೀಜದ ದರವನ್ನು ಶೇ.೬೦ ರಿಂದ ಶೇ.೭೦ ರಷ್ಟು ಏರಿಕೆ ಮಾಡಿದ್ದು, ಇದು ರೈತರಿಗೆ ತೀವ್ರ ಹೊಡೆತದಂತಾಗಿದೆ ಎಂದು ಆಕ್ಷೇಪಿಸಿ ಜಿಲ್ಲಾ ಬಿ.ಜೆ.ಪಿ ಹಾಗೂ ಬಿ.ಜೆ.ಪಿ ಕೃಷಿ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಕೈಗಾರಿಕಾ ಬಡಾವಣೆ ಯಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮುಂಭಾಗ ಈ ಬಗ್ಗೆ ಪ್ರತಿಭಟನೆ ನಡೆಸಿ ರಾಜ್ಯದ ಕಾಂಗೆÀ್ರಸ್ ಸರಕಾರದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಲಾಯಿತು. ರಾಜ್ಯಾದ್ಯಂತ ಇದೀಗ ಉತ್ತಮ ಮಳೆ ಯಾಗುತ್ತಿರುವ ಸಂದರ್ಭದಲ್ಲಿ ಬಿತ್ತನೆ ಬೀಜದ ದರ ಏರಿಕೆ ಮಾಡಿರುವುದು ಖಂಡನೀಯ, ಮಳೆ ಕೊರತೆ, ಅಸಮರ್ಪಕ ಮಳೆ ಪರಿಹಾರ, ಪರಿಹಾರದ ಮೊತ್ತ ಸಾಲದ ಮೊತ್ತಕ್ಕೆ ಜಮಾ ಸೇರಿ ನಾನಾ ಕಾರಣಗಳಿಂದ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ರಾಜ್ಯ ಸರಕಾರದ ಈ ನಡೆ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಇದು ಮುಂಗಾರಿನ ಸಂದರ್ಭ ಬಿತ್ತನೆಗೂ ಪಟ್ಟು ಬೀಳುವ ಸಾಧ್ಯತೆಯಿದೆ. ರಾಜ್ಯದ ಬಹುತೇಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ರಾಜ್ಯ ಸರಕಾರವೇ ಇದೀಗ ಬಿತ್ತನೆ ಬೀಜದ ದರವನ್ನು ಹೆಚ್ಚಿಸಿರುವುದು ಸರಿಯಲ್ಲ. ಕಾಂಗೆÀ್ರಸ್ ಸರಕಾರ ರೈತ ವಿರೋಧಿ ನೀತಿಯನ್ನು ಬಿ.ಜೆ.ಪಿ ಖಂಡಿಸುವುದಾಗಿ ಪ್ರಮುಖರು ಆಕ್ಷೇಪಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ನಾಪಂಡ ರವಿ ಕಾ¼ಪ್ಪ, ಈ ಸಾಲಿನಲ್ಲಿ ತೀವ್ರ ತರಹದ ಬರದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇದೀಗಷ್ಟೆ ಮಳೆ ಆಗಮನದಿಂದ ಸ್ವಲ್ಪ ಸುಧಾರಿಸಿ ಕೊಳ್ಳುತ್ತಿರುವ ರೈತರು ಬೀಜ ಬಿತ್ತನೆಗೆ ತಯಾರಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರವು ಬೆಂಬಲಿಸಿ ಅವರುಗಳÀ ಪರ ನಿಲ್ಲಬೇಕು. ಸಂಕಷ್ಟದಲ್ಲಿರುವ ರೈತರಿಗೆ ಬಿತ್ತನೆ ಬೀಜವನ್ನು ಉಚಿತವಾಗಿ ನೀಡುವ ಕಾರ್ಯ ಮಾಡಬೇಕು. ಆದರೆ ಇದನ್ನು ಮಾಡದೆ, ಬಿತ್ತನೆಯ ಬೀಜದ ಬೆಲೆಯನ್ನು ಏರಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಪೂರೈಕೆಯಿಂದಾಗಿ ಸರಕಾರದ ಬೊಕ್ಕಸ ಖಾಲಿಯಾಗಿದೆ. ಈ ಕಾರಣದಿಂದ ಹಲವಾರು ದಿನ ನಿತ್ಯ ಅವಶ್ಯಕವಾಗಿರುವ ಪದಾರ್ಥಗಳ ಬೆಲೆ ಏರಿಕೆ ಮಾಡುತ್ತಿದೆ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಅಭಿವೃದ್ಧಿ ವೈಫಲ್ಯ ಕುರಿತ ವರದಿಗಳಿಗೂ ಸ್ಪಂದನ ಇಲ್ಲ”:
ಸರಕಾರದ ಅಭಿವೃದ್ಧಿ ವೈಫಲ್ಯ ಕುರಿತು ಪತ್ರಿಕೆಯಲ್ಲಿ ಸರಣಿ ರೂಪದಲ್ಲಿ ವರದಿ ಪ್ರಕಟಗೊಂಡರೂ ಇದಕ್ಕೆ ಸರಕಾರ ಸ್ಪಂದಿಸುತ್ತಿಲ್ಲ. ಆಡಳಿತ ನಡೆಸಲು ಸರಕಾರ ವಿಫಲವಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ ಅತಿವೃಷ್ಟಿ ಸಂಭವಿಸಿದಾಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿ.ಜೆ.ಪಿ ಸರಕಾರವು ಕೊಡಗಿನ ರೈತರಿಗೆ ಗರಿಷ್ಠ ಮೊತ್ತ ರೂ.೫೦,೦೦೦ ದವರೆಗೂ ಬೆಳೆ ನಷ್ಟ ಪರಿಹಾರ ನೀಡಿದೆ. ಆದರೆ ಈ ಸಾಲಿನಲ್ಲಿ ತೀವ್ರ ತರಹದ ಬರದಿಂದ ಫಸಲುಗಳಿಗೆ ಪೆಟ್ಟು ಬಿದ್ದಿದ್ದು, ಪರಿಹಾರಕ್ಕಾಗಿ ಅಶಕ್ತ ರಾಜ್ಯ ಸರಕಾರವು ಕೇಂದ್ರದ ಮೊರೆ ಹೋಗಿದೆ. ಈ ಮೂಲಕ ದೊರೆತ ಪರಿಹಾರವನ್ನೂ ರೈತರಿಗೆ ಭಾಗಶಃ ಮಾತ್ರ ನೀಡಿದ್ದು ಗರಿಷ್ಠ ಮೊತ್ತ ಕೇವಲ ರೂ.೨,೦೦೦ ಮಾತ್ರ ನೀಡಿದೆ. ರೈತರ ಹಿತದೃಷ್ಟಿಯನ್ನು ಕಾಪಾಡಲು ವಿಫಲರಾದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ರಾಜೀನಾಮೆ ನೀಡಬೇಕು. ಬಿತ್ತನೆ ಬೀಜದ ಬೆಲೆಯನ್ನು ಈ ಹಿಂದಿನ ಬೆಲೆಗೇ ಕೊಡಬೇಕೆಂದು ಒತ್ತಾಯಿಸಿದರು.
ಬಿ.ಜೆ.ಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಬಿ.ಸಿ ನವೀನ್ ಅವರು ಮಾತನಾಡಿ, ರಾಜ್ಯ ಸರಕಾರ ರೈತರ ಬಗ್ಗೆ ಕಾಳಜಿ ತೋರದಿರುವುದು ಖಂಡನೀಯ. ದೇಶದ ಆರ್ಥಿಕತೆ ಕೃಷಿಕರನ್ನೇ ಅವಲಂಬಿಸಿದೆ. ಆದರೆ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಬಗ್ಗೆ ಯಾವುದೇ ಮುಂದಾಲೋಚನೆ ಇಲ್ಲದೆ ದರ ಏರಿಸಿರುವುದನ್ನು ರೈತ ಮೋರ್ಚಾ ಹಾಗೂ ಬಿ.ಜೆ.ಪಿ ಖಂಡಿಸುತ್ತದೆ. ಎಲ್ಲದಕ್ಕೂ ಕೇಂದ್ರವನ್ನು ಬೊಟ್ಟು ಮಾಡುವ ಸರಕಾರ ಸನಿಹದ ರಾಜ್ಯಗಳನ್ನು ಉಲ್ಲೇಖಿಸಿ ದರ ಹೆಚ್ಚಿಸಿರುವುದಾಗಿ ಹೇಳುತ್ತಿರುವುದು ಸಮಂಜಸವಲ್ಲ ಎಂದು ಆಕ್ಷೇಪಿಸಿದರು.
ಮಾಜಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯ ಸರಕಾರವು ರೈತ ವಿರೋಧಿ ಸರಕಾರವಾಗಿದೆ. ರೈತರಿಗೆ ವಿತರಿಸುವ ಬಿತ್ತನೆ ಬೀಜ ಕಳಪೆಯಾಗಿದ್ದು, ಇದರ ಮೊತ್ತವನ್ನು ಏರಿಸಲಾಗಿದೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರ ಹಿತಕ್ಕಾಗಿ ರೈತ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ ಎಂಬ ಯೋಜನೆಗಳ ಮೂಲಕ ರೈತರಿಗೆ ಆರ್ಥಿಕ ನೆರವು, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನೂ ನೀಡಲಾಗುತ್ತಿತ್ತು. ಆದರೆ ಕಾಂಗೆÀ್ರಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಗಳನ್ನು ರದ್ದು ಪಡಿಸಿದ್ದು, ತನ್ನ ರೈತ ವಿರೋಧಿ ನೀತಿಯನ್ನು ಬಹಿರಂಗಗೊಳಿಸಿದೆ ಎಂದರು.
ಬಿತ್ತನೆ ಬೀಜದ ಬೆಲೆ ಕಡಿಮೆಗೊಳಿಸುವಂತೆ ಕೋರಿ ಮನವಿ ಪತ್ರವನ್ನು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್ ಅವರಿಗೆ ಬಿ.ಜೆ.ಪಿ ಪ್ರಮುಖರು ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ಎಂ.ಎಲ್.ಸಿ ಸುನಿಲ್ ಸುಬ್ರಮಣಿ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಪ್ರಮುಖರುಗಳಾದ ಅನಿತಾ ಪೂವಯ್ಯ, ಕಾಂಗೀರ ಸತೀಶ್, ಮನು ಮುತ್ತಪ್ಪ, ತಳೂರು ಕಿಶೋರ್ ಕುಮಾರ್, ಕೃಷಿ ಮೋರ್ಚಾ ಜಿಲ್ಲಾ ಅಧ್ಯಕ್ಷ ರಂಜಿ ಪೂಣಚ್ಚÀ, ಬಿ.ಕೆ ಅರುಣ್, ಬಿ.ಕೆ ಜಗದೀಶ್, ಮಹೇಶ್ ಜೈನಿ, ಶರತ್ ಚಂದ್ರ, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಮಚ್ಚಂಡ ಪ್ರಕಾಶ್, ಬೊಳ್ಳಜೀರ ಬಿ.ಅಯ್ಯಪ್ಪ, ಉಮೇಶ್ ಸುಬ್ರಮಣಿ, ಮನು ಮಂಜುನಾಥ್, ಡೀನ್ ಬೋಪಣ್ಣ ಹಾಗೂ ಇತರರು ಇದ್ದರು.