ಸೋಮವಾರಪೇಟೆ, ಮೇ ೩೦: ಮಡಿಕೇರಿ-ಹಾಸನ ರಾಜ್ಯ ಹೆದ್ದಾರಿಯ ಕಿಬ್ಬೆಟ್ಟ ಎಸ್ಟೇಟ್ ಜಂಕ್ಷನ್‌ನಲ್ಲಿ ಒಂದು ವಾರದ ಹಿಂದೆ ರಸ್ತೆಗಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಿ, ಅದರ ತುಂಡುಗಳನ್ನು ರಸ್ತೆಯ ಬದಿಯಲ್ಲಿ ಬಿಟ್ಟು ಅಪಾಯಕ್ಕೆ ಆಹ್ವಾನ ನೀಡಲಾಗಿದೆ ಎಂದು ಮಲ್ನಾಡು ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ಮರ ಬಿದ್ದಿರುವ ಜಾಗದ ಎದುರಿಗೆ ಇಳಿಜಾರು ರಸ್ತೆಯಾಗಿದ್ದು, ವಾಹನ ಚಾಲಕರಿಗೆ ರಸ್ತೆ ಕಾಣುವುದಿಲ್ಲ. ದಿನಂಪ್ರತಿ ನೂರಾರು ಭಾರೀ ಮತ್ತು ಲಘು ವಾಹನಗಳು ಸಂಚರಿಸುತ್ತವೆ. ಅಪಘಾತಗಳು ನಡೆಯುವ ಸ್ಥಳವಾಗಿದೆ. ಒಂದು ವಾರದಿಂದ ಮರದ ತುಂಡುಗಳನ್ನು ಸಾಗಿಸದೆ ಲೋಕೋಪಯೋಗಿ ಇಲಾಖೆ ನಿರ್ಲಕ್ಷö್ಯ ತೋರಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಸಂದೀಪ್ ಕೂಗೂರು, ತಾಲೂಕು ಅಧ್ಯಕ್ಷ ಗೌಡಳ್ಳಿ ಪೃಥ್ವಿ ಆರೋಪಿಸಿದ್ದಾರೆ.

ಕೂಡಲೇ ಮರದ ತುಂಡುಗಳನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ತಪ್ಪಿದಲ್ಲಿ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.À