ಮಡಿಕೇರಿ ಮೇ ೩೦ : ಕೊಡಗು ಜಿಲ್ಲೆಯ ಅಲ್ಪಸಂಖ್ಯಾತರು ನಿರಂತರವಾಗಿ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಾ ಬಂದಿದ್ದು, ಈ ಬಾರಿ ವಿಧಾನ ಪರಿಷತ್ ಸ್ಥಾನವನ್ನು ಅಲ್ಪಸಂಖ್ಯಾತರೊಬ್ಬರಿಗೆ ನೀಡಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪಿ.ಎ.ಹನೀಫ್ ಕೊಡಗಿನಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಬೇಧಿಸುವಲ್ಲಿ ಮತ್ತು ಇಬ್ಬರು ಕಾಂಗ್ರೆಸ್ ಶಾಸಕರ ಗೆಲುವಿನಲ್ಲಿ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿದ್ದವು. ಜಿಲ್ಲೆಯಲ್ಲಿ ಸುಮಾರು ೧ ಲಕ್ಷ ಅಲ್ಪಸಂಖ್ಯಾತರ ಮತಗಳಿದ್ದು, ಇದರಲ್ಲಿ ಶೇ.೯೯ ರಷ್ಟು ಮತಗಳು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊರಕಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿನಲ್ಲಿ ಜಿಲ್ಲೆಯ ಅಲ್ಪಸಂಖ್ಯಾತರಿಗೆ ಅವಕಾಶವನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕ ವಿಧಾನ ಪರಿಷತ್‌ನ ೧೧ ಸದಸ್ಯರುಗಳ ಅಧಿಕಾರಾವಧಿ ಜೂ.೧೭ ರಂದು ಕೊನೆಗೊಳ್ಳಲಿದೆ. ಅಲ್ಪಸಂಖ್ಯಾತ ಆಕಾಂಕ್ಷಿಗಳಲ್ಲಿ ಜಿಲ್ಲೆಯ ಓರ್ವರಿಗೆ ವಿಧಾನ ಪರಿಷತ್ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಇಬ್ಬರು ಶಾಸಕರ ಬಳಿ ಕೋರಲಾಗಿದೆ ಎಂದರು. ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ಅವರು ಮಾತನಾಡಿ, ತಾನು ಕೂಡ ವಿಧಾನ ಪರಿಷತ್ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಠರು ನಮ್ಮ ಬೇಡಿಕೆಗೆ ಸ್ಪಂದಿಸುವ ವಿಶ್ವಾಸವಿದೆ ಎಂದು ತಿಳಿಸಿದರು.ಅಲ್ಪಸಂಖ್ಯಾತ ಸಮುದಾಯಕ್ಕೆ ಒಳಪಡುವ ಜಿಲ್ಲೆಯ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಕಾಂಗ್ರೆಸ್ ಪಕ್ಷವನ್ನು ನಿರಂತರವಾಗಿ ಬೆಂಬಲಿಸುತ್ತಲೇ ಬಂದಿದ್ದಾರೆ. ಇವರು ಪಕ್ಷದ ಪ್ರಬಲ ಶಕ್ತಿಯೇ ಆಗಿದ್ದಾರೆ. ಜಿಲ್ಲೆಯ ಶಾಸಕರು ನಮ್ಮ ಈ ಬೇಡಿಕೆಯನ್ನು ಪರಿಗಣಿಸಿ, ವಿಧಾನ ಪರಿಷತ್‌ನಲ್ಲಿ ಸ್ಥಾನ ಒದಗಿಸಲು ಕಾಂಗ್ರೆಸ್ ವರಿಷ್ಠರಿಗೆ ಶಿಫಾರಸ್ಸು ಮಾಡಬೇಕೆಂದು ಹೇಳಿದರು. ತಾನು ಸೇರಿದಂತೆ ಸುರಯ್ಯ ಅಬ್ರಾರ್, ಪಿ.ಎ.ಹನೀಫ್, ಅಬ್ದುಲ್ ರೆಹಮಾನ್, ಅಬ್ದುಲ್ ಸಲಾಂ ಅವರು ಆಕಾಂಕ್ಷಿಗಳಾಗಿರುವುದಾಗಿ ತಿಳಿಸಿದರು.

ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ಕಳೆದ ಎರಡೂವರೆ ದಶಕಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಈ ಸಂದಿಗ್ಧ ಅವಧಿಯಲ್ಲಿ ಕೂಡ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷವನ್ನು ಕೈ ಬಿಟ್ಟಿಲ್ಲ. ಈ ಹಿಂದೆ ಟಿ.ಜಾನ್ ಅವರು ವಿಧಾನ ಪರಿಷತ್ ಸದಸ್ಯರಾದ ಬಳಿಕ ಅಲ್ಪಸಂಖ್ಯಾತರಿಗೆ ವಿಧಾನ ಪರಿಷತ್‌ನಲ್ಲಿ ಅವಕಾಶಗಳು ದೊರೆತಿಲ್ಲ. ತಾನು ಕೂಡ ಈ ಬಾರಿಯ ಎಂಎಲ್‌ಸಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದರು.

ಹಿಂದೆ ಜಿಲ್ಲೆಯ ವೀಣಾ ಅಚ್ಚಯ್ಯ ಅವರಿಗೆ ವಿಧಾನ ಪರಿಷತ್ ಸ್ಥಾನವನ್ನು ನೀಡಿದ್ದರೆ, ತಾರಾ ಅಯ್ಯಮ್ಮ ಅವರಿಗೆ ನಿಗಮದಲ್ಲಿ ಅವಕಾಶ ಒದಗಿಸಲಾಗಿತ್ತು. ಸುಮಾವಸಂತ್ ಅವರು ಶಾಸಕರಾಗಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕೊಡಗಿನ ಅಲ್ಪಸಂಖ್ಯಾತರನ್ನು ಪರಿಗಣಿಸಿ ವಿಧಾನ ಪರಿಷತ್ ನಲ್ಲಿ ಅವಕಾಶ ಕಲ್ಪಿಸಬೇಕು. ಮಹಿಳೆಯರಿಗೆ ಸ್ಥಾನ ನೀಡಿದರೆ ಇನ್ನೂ ಉತ್ತಮ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್ ಹಾಗೂ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಾವ ಉಪಸ್ಥಿತರಿದ್ದರು.